ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2008ರ ದಾಳಿ ಬಳಿಕ ಇಂಗ್ಲೆಂಡ್ ಭಾರತಕ್ಕೆ ಬಂದಿರುವುದನ್ನು ಮರೆಯಬಾರದು: ಗವಾಸ್ಕರ್

Last Updated 11 ಸೆಪ್ಟೆಂಬರ್ 2021, 9:23 IST
ಅಕ್ಷರ ಗಾತ್ರ

ಮ್ಯಾಚೆಂಸ್ಟರ್: ಇಂಗ್ಲೆಂಡ್ ವಿರುದ್ಧ ಕೋವಿಡ್‌ ಭೀತಿಯಿಂದಾಗಿ ರದ್ದುಗೊಂಡಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸಲು ಬಿಸಿಸಿಐ ಮುಂದಿರಿಸಿರುವ ಪ್ರಸ್ತಾಪವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸ್ವಾಗತಿಸಿದ್ದಾರೆ.

ಅಲ್ಲದೆ 2008ರ ನವೆಂಬರ್ 26ರಂದು ಮುಂಬೈಗೆ ನಡೆದ ಉಗ್ರರ ದಾಳಿಯ ಬಳಿಕ ಸರಣಿ ಪೂರ್ಣಗೊಳಿಸಲು ಇಂಗ್ಲೆಂಡ್ ತಂಡವು ಭಾರತಕ್ಕೆ ಆಗಮಿಸಿರುವುದನ್ನು ಎಂದಿಗೂ ಮರೆಯಬಾರದು ಎಂದು ನೆನಪಿಸಿದ್ದಾರೆ.

ಭಾರತ ಪಾಳಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಬೇಕಾಗಿದ್ದ ಐದನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಹಾಗಿದ್ದರೂ ಪಂದ್ಯವನ್ನು ಮರುನಿಗದಿಗೊಳಿಸಲು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಬಿಸಿಸಿಐ ಪ್ರಸ್ತಾಪ ಮುಂದಿರಿಸಿದೆ.

'ಹೌದು, ರದ್ದುಗೊಂಡಿರುವ ಟೆಸ್ಟ್ ಪಂದ್ಯವನ್ನು ಮರುನಿಗದಿಗೊಳಿಸುವುದು ಸರಿಯಾದ ನಿರ್ಣಯ ಎಂದು ನಾನು ಭಾವಿಸುತ್ತೇನೆ. ನೋಡಿ, 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ಅತ್ಯಂತ ಭೀಕರ ದಾಳಿಯ ಬಳಿಕ ಇಂಗ್ಲೆಂಡ್ ಏನು ಮಾಡಿತ್ತು ಎಂಬುದನ್ನು ನಾವು ಮರೆಯಬಾರದು. ಅವರು ಭಾರತ ಪ್ರವಾಸ ಕೈಗೊಂಡು ಸರಣಿಯಲ್ಲಿ ಭಾಗವಹಿಸಿದ್ದರು. ನಮಗೆ ಭದ್ರತಾ ಭೀತಿಯಿದೆ ಎಂಬ ನೆಪವೊಡ್ಡಿ ಅಲ್ಲಿಗೆ (ಭಾರತಕ್ಕೆ) ಬರುವುದಿಲ್ಲ ಎಂದು ಹೇಳಬಹುದಿತ್ತು' ಎಂದು ಗವಾಸ್ಕರ್ ವಿವರಿಸಿದ್ದಾರೆ.

2008 ನವೆಂಬರ್ 26ರಂದು ಕಟಕ್‌ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಮುಂಬೈನಲ್ಲಿ ಉಗ್ರರ ದಾಳಿ ನಡೆದಿತ್ತು. ಪರಿಣಾಮ ಏಳು ಪಂದ್ಯಗಳ ಏಕದಿನ ಸರಣಿಯಲ್ಲಿ ಅಂತಿಮ ಎರಡು ಏಕದಿನ ಪಂದ್ಯಗಳನ್ನು ರದ್ದುಗೊಳಿಸಿ ಇಂಗ್ಲೆಂಡ್ ತವರಿಗೆ ಮರಳಿತ್ತು. ಬಳಿಕ ಭಾರತಕ್ಕೆ ಆಗಮಿಸಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿಯನ್ನು ಮೆರೆದಿತ್ತು. ಅಂತಿಮವಾಗಿ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಅಂತರದ ಗೆಲುವು ದಾಖಲಿಸಿತ್ತು.

ಭಾರತಕ್ಕೆ ಆಗಮಿಸಿ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗವಾಸ್ಕರ್ ಹೇಳಿದ್ದಾರೆ. 'ಎಂದಿಗೂ ಮರೆಯದಿರಿ, ಕೆವಿನ್ ಪೀಟರ್ಸನ್ ತಂಡವನ್ನು ಮುನ್ನಡೆಸಿದ್ದರು. ಅವರು ತಂಡದ ಪ್ರಮುಖ ಆಟಗಾರ. ಒಂದು ವೇಳೆ ಭಾರತಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಪೀಟರ್ಸನ್ ಹೇಳಿದ್ದರೆ ವಿಷಯ ಅಲ್ಲಿಗೆ ಮುಗಿಯುತ್ತಿತ್ತು' ಎಂದು ಹೇಳಿದರು.

ಈಗ ರದ್ದಾಗಿರುವ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದಿನ ವರ್ಷ ಐಪಿಎಲ್ ಬಳಿಕ ಆಯೋಜಿಸಲು ಬಿಸಿಸಿಐ ಹಾಗೂ ಇಸಿಬಿ ಯೋಜನೆ ಇರಿಸಿಕೊಂಡಿದೆ. ಈ ಕುರಿತು ಅಧಿಕೃತ ವರದಿ ಇನ್ನೂ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT