ಮುಂಬೈ: ಭರ್ಜರಿ ಹೊಡೆತಗಳ ಮೂಲಕ ಮಿಂಚಿದ ಗ್ರೇಸ್ ಹ್ಯಾರಿಸ್ (41 ಎಸೆತಗಳಲ್ಲಿ 72 ರನ್) ಅವರು ಯುಪಿ ವಾರಿಯರ್ಸ್ ತಂಡವನ್ನು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ‘ಪ್ಲೇ ಆಫ್’ ಹಂತಕ್ಕೆ ಕೊಂಡೊಯ್ದರು.
ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರೋಚಕ ಹಣಾಹಣಿಯಲ್ಲಿ ವಾರಿಯರ್ಸ್, ಮೂರು ವಿಕೆಟ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಏಳು ಪಂದ್ಯಗಳಿಂದ ಎಂಟು ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನಕ್ಕೇರಿದ ಅಲಿಸಾ ಹೀಲಿ ಬಳಗ, ಮೂರನೇ ಹಾಗೂ ಕೊನೆಯ ತಂಡವಾಗಿ ಪ್ಲೇ ಆಫ್ ಹಂತ ಪ್ರವೇಶಿಸಿತು. ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ತನ್ನ ಲೀಗ್ ವ್ಯವಹಾರ ಕೊನೆಗೊಳಿಸಿದ ಜೈಂಟ್ಸ್, ನಾಲ್ಕು ಪಾಯಿಂಟ್ಸ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಗೆಲುವು ಅನಿವಾರ್ಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಅರ್ಧಶತಕ ಗಳಿಸಿದ ಡಿ.ಹೇಮಲತಾ (57 ರನ್, 33 ಎ., 4X6, 6X3) ಮತ್ತು ಆ್ಯಷ್ಲಿ ಗಾರ್ಡನರ್ (60 ರನ್, 39 ಎ., 4X6, 6X3) ಅವರು ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು.
ವಾರಿಯರ್ಸ್ ತಂಡ ಒಂದು ಎಸೆತ ಬಾಕಿಯಿರುವಂತೆ ಏಳು ವಿಕೆಟ್ ನಷ್ಟಕ್ಕೆ ಗೆಲುವಿನ ಗಡಿ ದಾಟಿತು. 39 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿದ್ದ ತಂಡಕ್ಕೆ ಗ್ರೇಸ್ ಹ್ಯಾರಿಸ್ ಮತ್ತು ತಹ್ಲಿ ಮೆಕ್‌ಗ್ರಾ (57 ರನ್, 38 ಎ., 4X11) ಆಸರೆಯಾದರು. ಇವರು ನಾಲ್ಕನೇ ವಿಕೆಟ್‌ಗೆ 78 ರನ್ ಸೇರಿಸಿದರು. ತಹ್ಲಿ ಔಟಾದರೂ ಗ್ರೇಸ್ ಅವರು ಅಬ್ಬರದ ಆಟ ಮುಂದುವರಿಸಿದರು. ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಹೊಡೆದರು.
ಗ್ರೇಸ್ ಪೆವಿಲಿಯನ್‌ಗೆ ಮರಳಿದಾಗ ತಂಡದ ಗೆಲುವಿಗೆ ಏಳು ರನ್‌ಗಳು ಬೇಕಿದ್ದವು. ಸೋಫಿ ಎಕ್ಸೆಲ್‌ಸ್ಟನ್ (ಔಟಾಗದೆ 19) ಅಂತಿಮ ಓವರ್‌ನ ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿ ತಂಡಕ್ಕೆ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್: ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 178 (ಸೋಫಿ ಡಂಕ್ಲಿ 23, ಲಾರಾ ವೊಲ್ವಾರ್ಡ್ 17, ಡಿ.ಹೇಮಲತಾ 57, ಆ್ಯಷ್ಲಿ ಗಾರ್ಡನರ್ 60, ರಾಜೇಶ್ವರಿ ಗಾಯಕವಾಡ್ 39ಕ್ಕೆ 2, ಪಾರ್ಶ್ವಿ ಚೋಪ್ರಾ 29ಕ್ಕೆ 2) ಯುಪಿ ವಾರಿಯರ್ಸ್: 19.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 (ತಹ್ಲಿ ಮೆಕ್‌ಗ್ರಾ 57, ಗ್ರೇಸ್ ಹ್ಯಾರಿಸ್ 72, ಸೋಫಿ ಎಕ್ಸೆಲ್‌ಸ್ಟನ್ ಔಟಾಗದೆ 19, ಕಿಮ್ ಗಾರ್ತ್ 29ಕ್ಕೆ 2) ಫಲಿತಾಂಶ: ಯುಪಿ ವಾರಿಯರ್ಸ್‌ಗೆ 3 ವಿಕೆಟ್ ಗೆಲುವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.