ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್‌ಗೆ ಅದ್ದೂರಿ ಆರಂಭ: ಗಿಲ್‌ ಮಿಂಚು; ಟೈಟನ್ಸ್‌ ಶುಭಾರಂಭ

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ನಿರಾಸೆ: ಋತುರಾಜ್‌ ಆಟ ವ್ಯರ್ಥ;
Published : 31 ಮಾರ್ಚ್ 2023, 19:18 IST
ಫಾಲೋ ಮಾಡಿ
Comments

ಅಹಮದಾಬಾದ್ (ಪಿಟಿಐ): ಶುಭಮನ್‌ ಗಿಲ್‌ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಗುಜರಾತ್‌ ಟೈಟನ್ಸ್‌ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಉದ್ಘಾಟನೆ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ಬಳಗ ಐದು ವಿಕೆಟ್‌ಗಳಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಚೆನ್ನೈ ತಂಡ, ಒಂಬತ್ತು ಸಿಕ್ಸರ್‌ಗಳನ್ನು ಸಿಡಿಸಿದ ಯುವಬ್ಯಾಟರ್ ಋತುರಾಜ್ ಗಾಯಕವಾಡ (92 ರನ್‌, 50 ಎ.) ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 178 ರನ್ ಗಳಿಸಿತು.

ಕಳೆದ ಬಾರಿಯ ಚಾಂಪಿಯನ್‌ ಟೈಟನ್ಸ್‌ ತಂಡ ಇನ್ನೂ ನಾಲ್ಕು ಎಸೆತಗಳು ಇರುವಂತೆಯೇ ಐದು ವಿಕೆಟ್‌ ಕಳೆದುಕೊಂಡು ಗೆಲುವಿನ ಗಡಿ ದಾಟಿತು. 36 ಎಸೆತಗಳಲ್ಲಿ 63 ರನ್‌ ಗಳಿಸಿದ ಗಿಲ್‌ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಿಜಯ್‌ ಶಂಕರ್, ರಾಹುಲ್‌ ತೆವಾಟಿಯಾ ಮತ್ತು ರಶೀದ್‌ ಖಾನ್‌ ಅವರು ಕೊನೆಯ ಓವರ್‌ಗಳಲ್ಲಿ ಬಿರುಸಿನ ಆಟವಾಡಿ ತಂಡದ ಗೆಲುವಿನ ಹಾದಿ ಸುಗಮಗೊಳಿಸಿದರು. ಟೈಟನ್ಸ್‌ ಗೆಲುವಿಗೆ ಕೊನೆಯ ಓವರ್‌ನಲ್ಲಿ ಎಂಟು ರನ್‌ಗಳು ಬೇಕಿದ್ದವು. ರಾಹುಲ್‌ ಅವರು ಸಿಕ್ಸರ್ ಮತ್ತು ಬೌಂಡರಿ ಹೊಡೆದು ಜಯ ತಂದಿತ್ತರು.

ಋತುರಾಜ್‌ ಮಿಂಚು: ಇದಕ್ಕೂ ಟಾಸ್ ಗೆದ್ದ ಟೈಟನ್ಸ್‌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಭವಿ ಬೌಲರ್ ಮೊಹಮ್ಮದ್ ಶಮಿ ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿಯೇ ಡೆವೊನ್ ಕಾನ್ವೆ ವಿಕಟ್ ಕಬಳಿಸಿದರು. ಇದರಿಂದ ಗುಜರಾತ್ ಬಳಗದಲ್ಲಿ ಸಂಭ್ರಮ ಗರಿಗೆದರಿತು.

ಆದರೆ ಇನ್ನೊಂದು ಬದಿಯಲ್ಲಿದ್ದ ಋತುರಾಜ್ ಮಾತ್ರ ಬೀಸಾಟವಾಡಿದರು. ಕೇವಲ 50 ಎಸೆತಗಳಲ್ಲಿ 92 ರನ್‌ ಗಳಿಸಿದರು. ಅದರಲ್ಲಿ ನಾಲ್ಕು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳು ಇದ್ದವು. ಅವರೊಂದಿಗೆ ಮೋಯಿನ್ ಅಲಿ (23; 17ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 36 ರನ್ ಸೇರಿಸಿದರು. ಮೋಯಿನ್ ಔಟಾದ ನಂತರ ಬಂದ ಸ್ಟೋಕ್ಸ್‌ ನಿರೀಕ್ಷೆ ಹುಸಿಗೊಳಿಸಿದರು. ಕೇವಲ ಏಳು ರನ್ ಗಳಿಸಿ ಔಟಾದರು. ಇವರಿಬ್ಬರ ವಿಕೆಟ್‌ಗಳನ್ನೂ ರಶೀದ್ ಕಬಳಿಸಿದರು.

ಈ ಹಂತದಲ್ಲಿ ಋತುರಾಜ್ ತಮ್ಮ ರನ್ ಗಳಿಕೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಅವರು ಅಂಬಟಿ ರಾಯುಡು (12 ರನ್) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು. 13ನೇ ಓವರ್‌ನಲ್ಲಿ ಜೋಸೆಫ್‌ ಎಸೆತವನ್ನು ಸಿಕ್ಸರ್‌ಗೆತ್ತುವ ಭರದಲ್ಲಿ ಋತುರಾಜ್ ಅವರು ಶುಭಮನ್ ಗಿಲ್‌ ಅವರಿಗೆ ಕ್ಯಾಚಿತ್ತರು.

ಧೋನಿ ಸಿಕ್ಸರ್: ಸತತ 16ನೇ ಐಪಿಎಲ್ ಆಡುತ್ತಿರುವ ದಿಗ್ಗಜ ಮಹೇಂದ್ರಸಿಂಗ್ ಧೋನಿ (ಔಟಾಗದೆ 14) ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಮಿಂಚಿನ ಸಂಚಲನ ಮೂಡಿತು. ಅಭಿಮಾನಿಗಳು ಚಪ್ಪಾಳೆ ತಟ್ಟಿ, ಪ್ಲೆಕಾರ್ಡ್‌ಗಳನ್ನು ತೋರಿ ಧೋನಿಗೆ ಸ್ವಾಗತ ಕೋರಿದರು. ಅವರನ್ನು ಮಹಿ ನಿರಾಶೆಗೊಳಿಸಲಿಲ್ಲ.

ಕೊನೆಯ ಓವರ್‌ನಲ್ಲಿ ಒಂದು ಬೌಂಡರಿ, ಸಿಕ್ಸರ್‌ ಹೊಡೆದರು.

ಕೇನ್‌ಗೆ ಗಾಯ: ಗುಜರಾತ್ ತಂಡದಲ್ಲಿ ಆಡುತ್ತಿರುವ ಕೇನ್ ವಿಲಿಯಮ್ಸನ್ ಅವರು ಮೊದಲ ದಿನವೇ ಗಾಯಗೊಂಡರು. ಮಿಡ್‌ವಿಕೆಟ್ ಬೌಂಡರಿಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅವರು ಋತುರಾಜ್ ಹೊಡೆದ ಚೆಂಡನ್ನು ಕ್ಯಾಚ್ ಮಾಡುವ ಪ್ರಯತ್ನ ಮಾಡಿದಾಗ ಗಾಯಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT