ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಮೃತಿ ಮಂದಾನರನ್ನು ದೇವತೆ ಎಂದು ಕರೆದ ಚೀನಾದ ಕ್ರಿಕೆಟ್‌ ಅಭಿಮಾನಿ

Published 26 ಸೆಪ್ಟೆಂಬರ್ 2023, 5:16 IST
Last Updated 26 ಸೆಪ್ಟೆಂಬರ್ 2023, 5:16 IST
ಅಕ್ಷರ ಗಾತ್ರ

ಬೀಜಿಂಗ್‌: ಭಾರತದ ಜನಪ್ರಿಯ ಕ್ರಿಕೆಟ್‌ ಆಟಗಾರ್ತಿ ಸ್ಮೃತಿ ಮಂದಾನ ಅವರನ್ನು ದೇವತೆ ಎಂದು ಕರೆದಿರುವ ಚೀನಾದ ಅಭಿಮಾನಿಯೊಬ್ಬರು, ಸ್ಮೃತಿ ಅವರ ಬ್ಯಾಟಿಂಗ್‌ ವೀಕ್ಷಿಸಲು ಬೀಜಿಂಗ್‌ನಿಂದ ಹಾಂಗ್‌ಝೌಗೆ ಪ್ರಯಾಣ ಮಾಡಿರುವುದಾಗಿ ತಿಳಿಸಿದ್ದಾರೆ.

ಚೀನಾದ ಹ್ಯಾಂಗ್‌ಝೌನಲ್ಲಿ 19ನೇ ಏಷ್ಯನ್‌ ಕ್ರೀಡಾಕೂಟ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಕ್ರಿಕೆಟ್‌ಗೆ ಅವಕಾಶ ನೀಡಲಾಗಿದೆ. ಸೋಮವಾರ ಭಾರತ ಮತ್ತು ಶ್ರೀಲಂಕಾದ ನಡುವಿನ ಮಹಿಳೆಯರ ಕ್ರಿಕೆಟ್‌ ಫೈನಲ್‌ನಲ್ಲಿ ಸ್ಮೃತಿ ಮಂದಾನ 45 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಟೈಟಸ್ ಸಾಧು ಅವರ ಅಮೋಘ ಬೌಲಿಂಗ್‌ನಿಂದ ಫೈನಲ್‌ನಲ್ಲಿ ಭಾರತ ಶ್ರೀಲಂಕಾವನ್ನು ಮಣಿಸಿತ್ತು.

ಜನಪ್ರಿಯ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಚೀನಾದಲ್ಲಿ ಅಷ್ಟೊಂದು ಮನ್ನಣೆಯಿಲ್ಲ. ಕಳೆದ ಒಂದೂವರೆ ದಶಕದಿಂದ ಕ್ರಿಕೆಟ್‌ ಬಗ್ಗೆ ಆಸಕ್ತಿ ತೋರಿಸುತ್ತಿರುವ ಚೀನಾ, ಕ್ರಿಕೆಟ್‌ನತ್ತ ದೇಶದ ಜನರನ್ನು ಸೆಳೆಯಲು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ನಗರಗಳಲ್ಲಿ ಕ್ರಿಕೆಟ್ ಸಲಕರಣೆಗಳನ್ನು ಮಾರಾಟ ಮಾಡುವ ಅಂಗಡಿಗಳಾಗಲಿ, ಟಿವಿಗಳಲ್ಲಿ ಕ್ರಿಕೆಟ್ ಪ್ರಸಾರವನ್ನು ಮಾಡುವುದಾಗಲಿ ಇಲ್ಲವೇ ಇಲ್ಲ. ಇಂತಹ ಸಂದರ್ಭದಲ್ಲಿ ಏಷ್ಯನ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿಸಿರುವುದು ಸ್ಥಳೀಯ ಕ್ರೀಡಾಪಟುಗಳನ್ನು ಕ್ರಿಕೆಟ್‌ನತ್ತ ಆಕರ್ಷಿಸಲು ಉತ್ತಮ ಮಾರ್ಗವಾಗಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಚೀನಾದಲ್ಲಿ ಕ್ರಿಕೆಟ್‌ ಜನಪ್ರಿಯ ಕಡಿಮೆಯಿದ್ದರೂ ಅಲ್ಲಿನ ಅಭಿಮಾನಿಯೊಬ್ಬ ಭಾರತೀಯ ಕ್ರಿಕೆಟಿಗರೊಬ್ಬರನ್ನು ಅಭಿಮಾನಿಯೆಂದು ಕರೆದು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಿಜಕ್ಕೂ ಕ್ರಿಕೆಟ್‌ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ.

ಭೂವಿಜ್ಞಾನ ಪದವಿ ವಿದ್ಯಾರ್ಥಿಯಾಗಿರುವ ವೀ ಎಂಬುವವರು ಸ್ಮೃತಿ ಮಂದಾನ ಅವರನ್ನು ನೋಡಲು ಬೀಜಿಂಗ್‌ನಿಂದ ಹ್ಯಾಂಗ್‌ಝೌಗೆ ರಾತ್ರಿಯಿಡೀ ಪ್ರಯಾಣ ಮಾಡಿರುವುದಲ್ಲದೇ, ‘ಸ್ಮೃತಿ ಮಂದಾನ ದೇವತೆ’ ಎಂದು ಬರೆದಿರುವ ಫಲಕವನ್ನು ಹಿಡಿದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದರು. ಮಂದಣ್ಣ ಅವರ ಪಂದ್ಯವನ್ನು ನೋಡಲು 100 ಯುವಾನ್‌ಗೆ ಟಿಕೆಟ್‌ ಖರೀದಿಸಿರುವುದಾಗಿ ತಿಳಿಸಿದ್ದಾರೆ.

‘ನನಗೆ ಸ್ಮೃತಿ ಮಂದಾನ ಅವರೆಂದರೆ ಬಹಳ ಇಷ್ಟ. ಅವರೊಬ್ಬ ಅದ್ಭುತ ಆಟಗಾರ್ತಿ. ಮೈದಾನದಲ್ಲಿ ಅವರ ಆಟವನ್ನು ನೋಡಲು ತುಂಬಾ ಖುಷಿಯಾಗುತ್ತದೆ. ಲೈವ್‌ ಆಗಿ ಅವರ ಬ್ಯಾಟಿಂಗ್‌ ನೋಡಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿದ್ದೇನೆ. ರಾತ್ರಿಯಿಡೀ ಪ್ರಯಾಣ ಮಾಡಿ ಬೆಳಿಗ್ಗೆ ಇಲ್ಲಿಗೆ ತಲುಪಿದ್ದೇನೆ. ಸ್ಮೃತಿ ಅವರ ಆಟ ನೋಡಿದ ಮೇಲೆಯೇ ಹಿಂತಿರುಗುತ್ತೇನೆ’ ಎಂದು ವೀ ಮಾಧ್ಯಮಗಳಿಗೆ ತಿಳಿಸಿದ್ದರು.

‘2019ರ ವಿಶ್ವಕಪ್‌ ಕ್ರಿಕೆಟ್‌ ವೀಕ್ಷಿಸಿದ ಬಳಿಕ ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಯಿತು. ಭಾರತ–ಆಸ್ಟ್ರೇಲಿಯಾ– ಇಂಗ್ಲೆಂಡ್ ನಡುವಿನ ತ್ರಿಕೋನ ಸರಣಿಯನ್ನು ವೀಕ್ಷಿಸಿದ ನಂತರ ಮಹಿಳಾ ಕ್ರಿಕೆಟ್‌ನತ್ತ ಆಕರ್ಷಿತನಾದೆ. ಆ ವೇಳೆ ಸ್ಮೃತಿ ಅವರ ಆಟ ನೋಡಿ ಅವರ ಅಭಿಮಾನಿಯಾದೆ’ ಎಂದು ವೀ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT