ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024 | ಹೈದರಾಬಾದ್ ಎದುರು 7 ವಿಕೆಟ್ ಜಯ; 4ನೇ ಸ್ಥಾನಕ್ಕೇರಿದ ಗುಜರಾತ್

Published 31 ಮಾರ್ಚ್ 2024, 14:01 IST
Last Updated 31 ಮಾರ್ಚ್ 2024, 14:01 IST
ಅಕ್ಷರ ಗಾತ್ರ

ಅಹಮದಾಬಾದ್‌: ಆಲ್‌ರೌಂಡ್ ಆಟವಾಡಿದ ಗುಜರಾತ್ ಟೈಟನ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್ ತಂಡದ ‘ಓಟ’ಕ್ಕೆ ತಡೆಯೊಡ್ಡಿತು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಗುಜರಾತ್ ತಂಡವು  7 ವಿಕೆಟ್‌ಗಳಿಂದ ಜಯಿಸಿತು. 

ಅನುಭವಿ ವೇಗಿ ಮೋಹಿತ್ ಶರ್ಮಾ (25ಕ್ಕೆ3) ಉತ್ತಮ ಬೌಲಿಂಗ್ ಮುಂದೆ ಸನ್‌ರೈಸರ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಿತು. ತನ್ನ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡವು ಐಪಿಎಲ್ ಇತಿಹಾಸದ ಗರಿಷ್ಠ ಮೊತ್ತ (277) ದಾಖಲಿಸಿತ್ತು. ಆದರೆ ಇಲ್ಲಿ ಮೋಹಿತ್ ಹಾಗೂ ಉಳಿದ ಬೌಲರ್‌ಗಳು ಸನ್‌ರೈಸರ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದರು. 

ಗುರಿ ಬೆನ್ನಟ್ಟಿದ ಗುಜರಾತ್ ತಂಡವು ಸಾಯಿ ಸುದರ್ಶನ್ (45; 36ಎ) ಮತ್ತು ಡೇವಿಡ್‌ ಮಿಲ್ಲರ್ (ಔಟಾಗದೆ 44) ಅವರ ಬ್ಯಾಟಿಂಗ್ ಬಲದಿಂದ 19.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 168 ರನ್ ಗಳಿಸಿತು. 

ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸನ್‌ರೈಸರ್ಸ್ ತಂಡದ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲಿಲ್ಲ. ಅಭಿಷೇಕ್ ಶರ್ಮಾ (29; 20ಎ) ಮತ್ತು ಅಬ್ದುಲ್ ಸಮದ್ (29; 14ಎ) ಅವರಿಬ್ಬರೇ ಗರಿಷ್ಠ ಸ್ಕೋರರ್‌ಗಳು. ಮಯಂಕ್ ಅಗರವಾಲ್ ಮತ್ತು ಟ್ರಾವಿಸ್ ಹೆಡ್ ಮೊದಲ ವಿಕೆಟ್ ಜೊತೆಯಾಟದಲ್ಲಿ 34 ರನ್‌ ಸೇರಿಸಿದರು.  ಐದನೇ ಓವರ್‌ನಲ್ಲಿ ಅಜ್ಮತ್‌ವುಲ್ಲಾ ಬೌಲಿಂಗ್‌ನಲ್ಲಿ ಮಯಂಕ್ ಔಟಾದರು. 10 ಓವರ್‌ಗಳಾಗುಷ್ಟರಲ್ಲಿ ತಂಡವು 3 ವಿಕೆಟ್ ನಷ್ಟಕ್ಕೆ 74 ರನ್‌ ಗಳಿಸಿತ್ತು. 

ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಅಭಿಷೇಕ್, ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸೆನ್ ಅವರನ್ನು ಕಟ್ಟಿಹಾಕುವಲ್ಲಿ ಬೌಲರ್‌ಗಳು ಸಫಲರಾದರು. 

ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ ಮತ್ತು ನಾಯಕ ಗಿಲ್ ಉತ್ತಮ ಆರಂಭ ನೀಡಿದರು. ನಾಲ್ಕು ಓವರ್‌ಗಳಲ್ಲಿ 36 ರನ್‌ ಸೇರಿಸಿದರು. ಐದನೇ ಓವರ್‌ನಲ್ಲಿ ಸಹಾ ಮತ್ತು ಹತ್ತನೇ ಓವರ್‌ನಲ್ಲಿ ಗಿಲ್ ಔಟಾದರು. ಈ ಹಂತದಲ್ಲಿ ಸಾಯಿ ಸುದರ್ಶನ್ ಮತ್ತು ಮಿಲ್ಲರ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು. 

ಆದರೂ ಸನ್‌ರೈಸರ್ಸ್ ಬೌಲರ್‌ಗಳು  ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹಾಕುವ ಪ್ರಯತ್ನ ಮಾಡಿದರು. ಇದರಿಂದಾಗಿ ಪಂದ್ಯದ ಫಲಿತಾಂಶ ಕೊನೆಯ ಓವರ್‌ನಲ್ಲಿ ನಿರ್ಧಾರವಾಯಿತು. ಮಿಲ್ಲರ್ ಮತ್ತು ವಿಜಯಶಂಕರ್ (14 ರನ್) ತಂಡವನ್ನು ಗೆಲುವಿನ ದಡ ಸೇರಿಸಿದರು. ಆತಿಥೇಯ ತಂಡವು ಟೂರ್ನಿಯಲ್ಲಿ ಎರಡನೇ ಜಯ ಸಾಧಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT