ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಹಾರಿ, ಪಂತ್ ಭರ್ಜರಿ ಶತಕ; ಭಾರತಕ್ಕೆ 472 ರನ್‌ಗಳ ಬೃಹತ್ ಮುನ್ನಡೆ

Last Updated 12 ಡಿಸೆಂಬರ್ 2020, 12:53 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಪೂರ್ವ ಸಿದ್ಧತೆಗಾಗಿ ಆಸ್ಟ್ರೇಲಿಯಾ 'ಎ' ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ದ್ವಿತೀಯ ದಿನದಾಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದಾರೆ.

ಹನುಮ ವಿಹಾರಿ (104*) ಹಾಗೂ ರಿಷಭ್ ಪಂತ್ (103*) ಅಮೋಘ ಶತಕ ಸಾಧನೆ ಮಾಡಿದರೆ ಮಯಂಕ್ ಅಗರವಾಲ್ (61) ಹಾಗೂ ಶುಭಮನ್ ಗಿಲ್ (65) ಆಕರ್ಷಕ ಅರ್ಧಶತಕ ಗಳಿಸಿ ಭಾರತವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 86 ರನ್‌ಗಳ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಪೃಥ್ವಿ ಶಾ (3) ವಿಕೆಟ್ ನಷ್ಟವಾಗಿತ್ತು. ಈ ಹಂತದಲ್ಲಿ ಜೊತೆಗೂಡಿದ ಮಯಂಕ್ ಅಗರವಾಲ್ ಹಾಗೂ ಶುಭಮನ್ ಗಿಲ್ 104 ರನ್‌ಗಳ ಜೊತೆಯಾಟ ನೀಡಿದರು.

ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಮಯಂಕ್ ಹಾಗೂ ಗಿಲ್ ಅರ್ಧಶತಕ ಬಾರಿಸಿ ಸ್ಪಷ್ಟ ಸಂದೇಶ ರವಾನಿಸಿದರು. 120 ಎಸೆತಗಳನ್ನು ಎದುರಿಸಿದ ಮಯಂಕ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಗಿಲ್ 78 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 65 ರನ್ ಗಳಿಸಿದರು.

ಬಳಿಕ ಕ್ರೀಸಿಗಿಳಿದ ಹನುಮ ವಿಹಾರಿ ತಂಡವನ್ನು ಮುನ್ನಡೆಸಿದರು. ಇವರಿಗೆ ನಾಯಕ ಅಜಿಂಕ್ಯ ರಹಾನೆ (38) ಬೆಂಬಲ ನೀಡಿದರು. ರಹಾನೆ ಪತನದ ಬಳಿಕ ಕ್ರೀಸಿಗಿಳಿದ ರಿಷಭ್ ಪಂತ್ ಟಿ20 ಶೈಲಿಯಲ್ಲಿ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದರು.

ಹನುಮ ವಿಹಾರಿ ತಮ್ಮ ತಾಳ್ಮೆ ಪರೀಕ್ಷೆ ಮಾಡಿದರೆ ರಿಷಭ್ ಪಂತ್, ತಮ್ಮ ವಿರುದ್ಧ ಎದುರಾದ ಟೀಕೆಗಳಿಗೆ ಬ್ಯಾಟ್ ಮೂಲಕ ಉತ್ತರಿಸಿದರು. 194 ಎಸೆತಗಳನ್ನು ಎದುರಿಸಿದ ಹನುಮ ವಿಹಾರಿ 13 ಬೌಂಡರಿಗಳ ನೆರವಿನಿಂದ 104 ರನ್ ಗಳಿಸಿ ಅಜೇಯರಾಗುಳಿದರು. ಇನ್ನೊಂದೆಡೆ 73 ಎಸೆತಗಳನ್ನು ಎದುರಿಸಿದ ಪಂತ್ ಒಂಬತ್ತು ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 103 ರನ್ ಗಳಿಸಿ ಔಟಾಗದೆ ಉಳಿದರು.

ಇದರೊಂದಿಗೆ ಟೀಮ್ ಇಂಡಿಯಾ 90 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 386 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಮೂಲಕ 472 ರನ್‌ಗಳ ಬೃಹತ್ ಮುನ್ನಡೆ ದಾಖಲಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬೂಮ್ರಾ ಚೊಚ್ಚಲ ಪ್ರಥಮ ದರ್ಜೆ ಕ್ರಿಕೆಟ್‌ನ ಅರ್ಧಶತಕದ ಹೊರತಾಗಿಯೂ ಭಾರತ 194 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಬಳಿಕ ಮೊಹಮ್ಮದ್ ಶಮಿ (3 ವಿಕೆಟ್), ನವದೀಪ್ ಸೈನಿ (3 ವಿಕೆಟ್) ಹಾಗೂ ಜಸ್‌ಪ್ರೀತ್ ಬೂಮ್ರಾ (2 ವಿಕೆಟ್) ಮಾರಕ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ 'ಎ' 108 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT