ಶನಿವಾರ, ಮಾರ್ಚ್ 25, 2023
23 °C

ಶ್ರೀಶಾಂತ್‌ ಕೆನ್ನೆಗೆ 2008ರಲ್ಲಿ ಹೊಡೆದಿದ್ದಕ್ಕೆ ಈಗ ಕ್ಷಮೆ ಯಾಚಿಸಿದ ಹರ್ಭಜನ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಉದ್ಘಾಟನಾ ಆವೃತ್ತಿಯ ಪಂದ್ಯವೊಂದರಲ್ಲಿ ನಡೆದಿದ್ದ ‘ಕಪಾಳಮೋಕ್ಷ’ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ಹರಭಜನ್‌ ಸಿಂಗ್ ಅವರು ಮಾಜಿ ಬೌಲರ್‌ ಎಸ್. ಶ್ರೀಶಾಂತ್‌ ಅವರ ಕ್ಷಮೆಯಾಚಿಸಿದ್ದಾರೆ.

ಶನಿವಾರ, ಹರಭಜನ್‌ ಸಿಂಗ್‌ ಅವರು ಕಾರ್ಯಕ್ರಮವೊಂದರ ಲೈವ್‌ ವಿಡಿಯೊ ಚಾಟ್‌ನಲ್ಲಿ ಶ್ರೀಶಾಂತ್ ಜೊತೆ ಮಾತನಾಡಿದರು. 2008ರಲ್ಲಿ ನಡೆದ ಘಟನೆಯ ಬಗ್ಗೆ ಅವರು ಅನುಭವಿಸಿದ ಮುಜುಗರವನ್ನು ಬಹಿರಂಗಪಡಿಸಿದರು.

‘ಅಂದು ನಡೆದದ್ದು ತಪ್ಪು. ನಾನು ತಪ್ಪು ಮಾಡಿದ್ದೆ. ನನ್ನಿಂದಾಗಿ ನನ್ನ ಸಹ ಆಟಗಾರ ಮುಜುಗರ ಎದುರಿಸಬೇಕಾಯಿತು. ನನಗೂ ಮುಜುಗರವಾಯಿತು. ಒಂದು ತಪ್ಪನ್ನು ತಿದ್ದಲೆಂದು ಮೈದಾನದಲ್ಲಿ ಶ್ರೀಶಾಂತ್ ಜತೆಗೆ ನಾನು ನಡೆದುಕೊಂಡ ರೀತಿ ಇದೆಯಲ್ಲ... ಅದು ಆಗಬಾರದಿತ್ತು. ನಾನು ಅದರ ಬಗ್ಗೆ ಯೋಚಿಸಿದಾಗಲೆಲ್ಲ ‘ಅದು ಆಗಬಾರದಿತ್ತು’ ಎಂದು ಅಂದುಕೊಳ್ಳುತ್ತೇನೆ’ ಎಂದು ಹರಭಜನ್‌ ಹೇಳಿದ್ದಾರೆ.

ಕಿಂಗ್ಸ್‌ ಇಲೆವೆನ್ ಪಂಜಾಬ್‌ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ನಾಯಕ ಸಚಿನ್ ತೆಂಡೂಲ್ಕರ್ ಅನುಪಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದ ಹರಭಜನ್‌ ಸಿಂಗ್‌ ಅವರು, ಪಂಜಾಬ್‌ ತಂಡದ ಬೌಲರ್‌ ಶ್ರೀಕಾಂತ್‌ ಅವರ ಆಕ್ರಮಣಕಾರಿ ನಡವಳಿಕೆಯಿಂದ ಆಕ್ರೋಶಗೊಂಡಿದ್ದರು. ಪಂದ್ಯದ ಫಲಿತಾಂಶದ ನಂತರ, ತಮ್ಮ ಬಳಿಗೆ ಬಂದ ಶ್ರೀಶಾಂತ್‌ ಅವರ ಕೆನ್ನೆಗೆ ಹರಭಜನ್‌ ಹೊಡೆದಿದ್ದರು. ಮೊಹಾಲಿಯಲ್ಲಿ ನಡೆದ ಆ ಪಂದ್ಯದಲ್ಲಿ ಪಂಜಾಬ್‌ ತಂಡ ಮುಂಬೈ ವಿರುದ್ಧ 66 ರನ್‌ಗಳ ಗೆಲುವು ದಾಖಲಿಸಿತ್ತು.

ಘಟನೆ ನಂತರ ಕಣ್ಣೀರು ಹಾಕಿದ್ದ ಶ್ರೀಶಾಂತ್‌ ಅವರನ್ನು ನೋಡಿ ಹಲವರು ಮರುಗಿದ್ದರು. ಹರಭಜನ್‌ ಅವರ ಕ್ರೀಡಾ ಸ್ಫೂರ್ತಿಯ ಬಗ್ಗೆ ಆಗ ಪ್ರಶ್ನೆಗಳು ಎದ್ದಿದ್ದವು.

ಇಬ್ಬರು ಕ್ರಿಕೆಟಿಗರು ನಂತರ, 2011ರ ಏಕದಿನ ವಿಶ್ವಕಪ್‌ನಲ್ಲಿ ವಿಜೇತ ಭಾರತ ತಂಡದ ಭಾಗವಾಗಿದ್ದರು.

ಹರಭಜನ್‌ ಭಾರತದ ಪರ 367 ಅಂತರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 711 ವಿಕೆಟ್ ಪಡೆದಿದ್ದರೆ, ಶ್ರೀಶಾಂತ್ 90 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 169 ವಿಕೆಟ್ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು