ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ ಟಿ–20 ವಿಶ್ವಕಪ್‌ಗೆ ಭಾರತ ತಂಡದಲ್ಲಿರಲು ಅರ್ಹ: ಹರಭಜನ್ ಸಿಂಗ್

ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ (ಐಪಿಎಲ್) ಲೀಗ್ ಪಂದ್ಯಗಳು ಅಂತಿಮ ಘಟ್ಟ ಸಮೀಪಿಸುತ್ತಿವೆ. ಕೆಲವು ಯುವ ಪ್ರತಿಭೆಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಹುಬ್ಬೇರುವಂತೆ ಮಾಡಿದರೆ, ಇನ್ನು ಕೆಲವು ಹಿರಿಯ ಆಟಗಾರರೂ ಲಯ ಕಂಡುಕೊಂಡು ಶಹಬ್ಬಾಸ್ ಎನಿಸಿಕೊಳ್ಳುತ್ತಿದ್ದಾರೆ.

ಈ ಮಧ್ಯೆ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಯಾವೆಲ್ಲ ಆಟಗಾರರು ಆಯ್ಕೆಯಾಗಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

‘ಒಂದು ವೇಳೆ ನಾನು ಆಯ್ಕೆಗಾರರ ಸಮಿತಿಯಲ್ಲಿದ್ದರೆ ‘ಆತ’ನಿಗೆ ಅವಕಾಶ ನೀಡುತ್ತಿದ್ದೆ’ ಎಂದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಹೇಳಿದ್ದಾರೆ. ಅವರು ಹೇಳಿದ ಆ ಆಟಗಾರ ಮತ್ಯಾರೂ ಅಲ್ಲ; ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್.

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಾತನಾಡಿದ ಹರಭಜನ್ ಸಿಂಗ್, ‘ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಆಫ್‌ ಸೈಡ್‌ಗಿಂತಲೂ ಲೆಗ್‌ ಸೈಡ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ, ಸಿಂಗಲ್ಸ್ ಆಡುವುದರಲ್ಲಿಯೂ ನಿಸ್ಸೀಮರಾಗಿದ್ದಾರೆ. ಒಟ್ಟಾರೆಯಾಗಿ ಪಂದ್ಯವನ್ನು ಅವರು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನನ್ನ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಷರ್ ಯಾರೆಂದರೆ ಅದು ದಿನೇಶ ಕಾರ್ತಿಕ್. ಅವರಿಗಿಂತ ಮಿಗಿಲಾದ ಫಿನಿಷರ್ ಇಲ್ಲ’ ಎಂದು ಹೇಳಿದ್ದಾರೆ.

ದಿನೇಶ್ ಕಾರ್ತಿಕ್ ಬ್ಯಾಟಿಂಗ್ – ಪಿಟಿಐ ಚಿತ್ರ
ದಿನೇಶ್ ಕಾರ್ತಿಕ್ ಬ್ಯಾಟಿಂಗ್ – ಪಿಟಿಐ ಚಿತ್ರ

‘ನಾನು ಆಯ್ಕೆಗಾರನಾದರೆ ದಿನೇಶ್ ಕಾರ್ತಿಕ್‌ಗೆ ಟ್ವೆಂಟಿ–20 ವಿಶ್ವಕಪ್‌ ತಂಡದಲ್ಲಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಟಿಕೆಟ್ ನೀಡಲಿದ್ದೇನೆ. ಭಾರತ ತಂಡಕ್ಕೆ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿ ಆಡಲು ಅವಕಾಶ ನೀಡಲಿದ್ದೇನೆ. ಯಾಕೆಂದರೆ ಅವರು ಅದಕ್ಕೆ ಅರ್ಹರಾಗಿದ್ದಾರೆ. ಟೀಮ್ ಇಂಡಿಯಾಕ್ಕೆ ಅತ್ಯುತ್ತಮ ಫಿನಿಷರ್ ಬೇಕೆಂದಿದ್ದರೆ ಅದು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಆಗಿರಬೇಕು. ಅವರು ತಂಡವನ್ನು ಬಲಿಷ್ಠಗೊಳಿಸುತ್ತಾರೆ’ ಎಂದು ಹರಭಜನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT