ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌಲಿಂಗ್‌ನಲ್ಲಿ ಸುಧಾರಣೆ: ಮಿಥಾಲಿ ಆಶಯ

ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಜಯ; ದಾಖಲೆ ಬರೆದ ಆಸ್ಟ್ರೇಲಿಯಾ ಮಹಿಳೆಯರು
Last Updated 21 ಸೆಪ್ಟೆಂಬರ್ 2021, 13:50 IST
ಅಕ್ಷರ ಗಾತ್ರ

ಮಕಾಯ/ದುಬೈ: ಆಸ್ಟ್ರೇಲಿಯಾ ಮಹಿಳಾ ತಂಡದ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಕಂಡ ಬೆನ್ನಲ್ಲೇ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಅವರು ಬೌಲರ್‌ಗಳನ್ನು ದೂರಿದ್ದು ಈ ವಿಭಾಗದಲ್ಲಿ ಭಾರಿ ಸುಧಾರಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮಂಗಳವಾರ ಭಾರತ ಒಂಬತ್ತು ವಿಕೆಟ್‌ಗಳಿಂದ ಆತಿಥೇಯ ತಂಡಕ್ಕೆ ಮಣಿದಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮಿಥಾಲಿ ಬಳಗ ಎಂಟು ವಿಕೆಟ್‌ಗಳಿಗೆ 225 ರನ್‌ ಗಳಿಸಿತ್ತು. ಉತ್ತರವಾಗಿ ಆಸ್ಟ್ರೇಲಿಯಾ 41 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 227 ರನ್ ಗಳಿಸಿತು. ಇದು, ಏಕದಿನ ಕ್ರಿಕೆಟ್‌ನಲ್ಲಿ ತಂಡದ ದಾಖಲೆಯ ಸತತ 25ನೇ ಜಯವಾಗಿದೆ.

ಆರಂಭಿಕ ಬ್ಯಾಟರ್ ರಚೆಲ್ ಹೇನ್ಸ್‌ ಔಟಾಗದೆ 93 ರನ್ (100 ಎಸೆತ; 7 ಬೌಂಡರಿ) ಗಳಿಸಿದರೆ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ವಿಕೆಟ್ ಕೀಪರ್ ಅಲಿಸಾ ಹೀಲಿ 77 (77 ಎ, 8 ಬೌಂಡರಿ, 2 ಸಿಕ್ಸರ್‌) ರನ್ ಗಳಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 126 ರನ್ ಕಲೆ ಹಾಕಿದ್ದರು. ರಚೆಲ್ ಹೇನ್ಸ್ ಜೊತೆಗೂಡಿದ ನಾಯಕಿ ಮೆಗ್ ಲ್ಯಾನಿಂಗ್ (53; 69 ಎ, 7 ಬೌಂ) ಮುರಿಯದ ಎರಡನೇ ವಿಕೆಟ್‌ಗೆ 101 ರನ್ ಸೇರಿಸಿ ಸುಲಭ ಜಯಕ್ಕೆ ಕಾರಣರಾದರು.

‘ಸೂಕ್ತ ಯೋಜನೆಗಳೊಂದಿಗೆ ಕಣಕ್ಕೆಇಳಿದರೂ ಅವುಗಳನ್ನು ಅಳವಡಿಸುವಲ್ಲಿ ಲೋಪಗಳಾದರೆ ಎದುರಾಳಿ ತಂಡಕ್ಕೆ ತಲೆಬಾಗಬೇಕಾಗುತ್ತದೆ. ಕೆಲವೊಮ್ಮೆ ಬೌಲರ್‌ಗಳಿಗೆ ಲಯ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾದರೆ ಯೋಜನೆಗಳು ಯಶಸ್ವಿಯಾಗುವುದು ಕಷ್ಟಕರ’ ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಿಥಾಲಿ ಹೇಳಿದರು.

‘ಭಾರತದ ಬೌಲಿಂಗ್ ಶಕ್ತಿ ಇರುವುದು ಸ್ಪಿನ್ ವಿಭಾಗದಲ್ಲಿ. ಆದರೆ ಈಗ ಅವರೇ ವೈಫಲ್ಯ ಕಾಣುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಜರೂರು ಇದೆ. ಪಂದ್ಯದಲ್ಲಿ ಬ್ಯಾಟರ್‌ಗಳು ಕೂಡ ವಿಫಲರಾಗಿದ್ದಾರೆ. ಜೊತೆಯಾಟಗಳು ಮೂಡಿಬಾರದೇ ಇದ್ದುದರಿಂದ ನಿರೀಕ್ಷಿತ ಮೊತ್ತ ಕಲೆ ಹಾಕಲು ಸಾಧ್ಯವಾಗಲಿಲ್ಲ. 250ರ ಆಸುಪಾಸಿನ ಮೊತ್ತವನ್ನು ಆಸ್ಟ್ರೇಲಿಯಾ ಸುಲಭವಾಗಿ ದಾಟುತ್ತದೆ ಎಂದು ಗೊತ್ತಿರುವಾಗ ದೊಡ್ಡ ಗುರಿ ಮುಂದಿಡಲು ಪ್ರಯತ್ನಿಸಬೇಕು. ಅದು ಸಾಧ್ಯವಾಲಿಲ್ಲ’ ಎಂದು ಅವರು ಹೇಳಿದರು.

ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್‌ಗೆ 21 ಎಸೆತಗಳಲ್ಲಿ 31 ರನ್ ಸೇರಿಸಿ ಭರವಸೆ ಮೂಡಿಸಿದ್ದರು. ಆದರೆ ಏಳು ರನ್‌ಗಳ ಅಂತರದಲ್ಲಿ ಇಬ್ಬರ ವಿಕೆಟ್‌ಗಳು ಉರುಳಿದವು. ಯಸ್ತೀಕ ಭಾಟಿಯಾ ಮತ್ತು ಮಿಥಾಲಿ ರಾಜ್ ಮೂರನೇ ವಿಕೆಟ್‌ಗೆ ಅಮೋಘ ಆಟವಾಡಿ 77 ರನ್ ಸೇರಿಸಿದರು. ಈ ಜೊತೆಯಾಟ ಮುರಿದ ನಂತರ ಆಸ್ಟ್ರೇಲಿಯಾ ಬೌಲರ್‌ಗಳು ಮೇಲುಗೈ ಸಾಧಿಸಿದರು.

ಮಿಥಾಲಿ ಏಕಾಂಗಿ ಹೋರಾಟ ನಡೆಸಿ ಅರ್ಧಶತಕ (63;107ಎ, 3ಬೌಂ) ಗಳಿಸಿದರು. ಏಳನೇ ಕ್ರಮಾಂಕದಲ್ಲಿ ಆಡಿದ ವಿಕೆಟ್ ಕೀಪರ್ ರಿಚಾ ಘೋಷ್‌ (32; 29ಎ, 3 ಬೌಂ, 1 ಸಿ) ಉತ್ತಮ ಕಾಣಿಕೆ ನೀಡಿ ಸ್ಕೋರ್ 200ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 8ಕ್ಕೆ 225 (ಯಸ್ತೀಕಾ ಭಾಟಿಯಾ 35, ಮಿಥಾಲಿ ರಾಜ್ 63, ರಿಚಾ ಘೋಷ್ 32, ಜೂಲನ್ ಗೋಸ್ವಾಮಿ 20; ಡಾರ್ಸಿ ಬ್ರೌನ್ 33ಕ್ಕೆ4, ಸೋಫಿ ಮೋಲಿನೆಕ್ಸ್‌ 39ಕ್ಕೆ2, ಹನಾ ಡಾರ್ಲಿಂಗ್ಟನ್ 29ಕ್ಕೆ2); ಆಸ್ಟ್ರೇಲಿಯಾ: 41 ಓವರ್‌ಗಳಲ್ಲಿ 1 ವಿಕೆಟ್‌ಗೆ 227 (ರಚೆಲ್ ಹೇನ್ಸ್‌ ಔಟಾಗದೆ 93, ಅಲಿಸಾ ಹೀಲಿ 77, ಮೆಗ್ ಲ್ಯಾನಿಂಗ್ ಔಟಾಗದೆ 53; ಪೂನಂ ಯಾದವ್ 58ಕ್ಕೆ1). ಫಲಿತಾಂಶ: ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಜಯ. ಮುಂದಿನ ಪಂದ್ಯ: ಸೆ.24ರಂದು.

ಅಗ್ರ ಸ್ಥಾನದಲ್ಲಿ ಮುಂದುವರಿದ ಮಿಥಾಲಿ

ಮಹಿಳೆಯರ ಏಕದಿನ ರ‍್ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಿಥಾಲಿ ರಾಜ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಅಜೇಯ 79 ರನ್ ಗಳಿಸಿದ್ದ ನ್ಯೂಜಿಲೆಂಡ್‌ನ ಆ್ಯಮಿ ಸಟೆರ್ಥ್‌ವೇಟ್ ಅಗ್ರ ಐದರೊಳಗಿನ ಸ್ಥಾನಕ್ಕೆ ಮರಳಿದ್ದಾರೆ.

ಐಸಿಸಿ ಮಂಗಳವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮಿಥಾಲಿ 762 ರ‍್ಯಾಂಕಿಂಗ್ ಪಾಯಿಂಟ್ ಹೊಂದಿದ್ದಾರೆ. ಅವರ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದ ದಕ್ಷಿಣ ಆಫ್ರಿಕಾದ ಲಿಜೆಲಿ ಲೀ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮೃತಿ ಮಂದಾನ ಏಳನೇ ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ 89 ರನ್ ಕಲೆ ಹಾಕಿದ್ದ ಇಂಗ್ಲೆಂಡ್ ನಾಯಕಿ ಹೀಥರ್ ನೈಟ್ ಐದು ಸ್ಥಾನಗಳ ಏರಿಕೆ ಕಂಡಿದ್ದು ಒಂಬತ್ತನೇ ಸಂಖ್ಯೆಯಲ್ಲಿದ್ದಾರೆ. ನಥಾಲಿ ಶೀವರ್ ಮತ್ತು ಲಾರಾ ವೊಲ್ವಾರ್ಟ್ ಕೂಡ ಹೀಥರ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಭಾರತದ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಒಂದು ಸ್ಥಾನದ ಏರಿಕೆಯೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಸ್ಪಿನ್ನರ್ ಪೂನಂ ಯಾದವ್ ಒಂಬತ್ತನೇ ಸ್ಥಾನದಲ್ಲೇ ಉಳಿದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ನಾಲ್ಕನೇ ಸ್ಥಾನಕ್ಕೇರಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT