ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಸರಣಿ ಉಳಿಸಿಕೊಳ್ಳುವ ಸವಾಲು

ಆಸ್ಟ್ರೇಲಿಯಾ ಎದುರಿನ ಎರಡನೇ ಏಕದಿನ ಪಂದ್ಯ ಇಂದು; ಹರ್ಮನ್‌ಪ್ರೀತ್ ಕೌರ್ ಅಲಭ್ಯ
Last Updated 23 ಸೆಪ್ಟೆಂಬರ್ 2021, 22:39 IST
ಅಕ್ಷರ ಗಾತ್ರ

ಮಕಾಯ, ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಈಗ ಸರಣಿಯಲ್ಲಿ ಜೀವಂತವಾಗಿ ಉಳಿಯುವ ಸವಾಲು. ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲದೇ ಇದ್ದರೆ ಮಿಥಾಲಿ ರಾಜ್ ಬಳಗ ಸರಣಿಯನ್ನು ಕಳೆದುಕೊಳ್ಳಲಿದೆ.

ಎರಡು ದಿನಗಳ ಹಿಂದೆ ನಡೆದ ಮೊದಲ ಪಂದ್ಯದಲ್ಲಿ ಭಾರತವನ್ನು ಆತಿಥೇಯರು ಒಂಬತ್ತು ವಿಕೆಟ್‌ಗಳಿಂದ ಮಣಿಸಿದ್ದರು. ಮಿಥಾಲಿ ರಾಜ್ ಅವರ ಏಕಾಂಗಿ ಹೋರಾಟದ ಫಲವಾಗಿ ಭಾರತ 225 ರನ್‌ ಗಳಿಸಿದ್ದರೂ ಬೌಲಿಂಗ್ ವಿಭಾಗ ಎದುರಾಳಿ ಬ್ಯಾಟರ್‌ಗಳ ಮುಂದೆ ಕಳೆಗುಂದಿತ್ತು. ಹೀಗಾಗಿ ಚೇತರಿಕೆಯ ಆಟವಾಡುವ ಗುರಿಯೊಂದಿಗೆ ತಂಡ ಶುಕ್ರವಾರ ಕಣಕ್ಕೆ ಇಳಿಯಬೇಕಾಗಿದೆ. ಆರಂಭಿಕ ಜೋಡಿ ಶೆಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಮೇಲೆ ಒತ್ತಡ ಹೆಚ್ಚಾಗಿದೆ.

ಎಲಿಸ್ ಪೆರಿ ಮತ್ತು ಡಾರ್ಸಿ ಬ್ರೌನ್ ಅವರ ದಾಳಿಯನ್ನು ಮೆಟ್ಟಿನಿಲ್ಲಲು ಇವರಿಬ್ಬರು ಸಮರ್ಥರಾದರೆ ತಂಡದ ಆರಂಭಿಕ ಸಮಸ್ಯೆಗೆ ಪರಿಹಾರ ಸಿಗಲಿದೆ. ಎಲಿಸ್ ಮತ್ತು ಡಾರ್ಸಿ ಬ್ರಿಸ್ಬೇನ್‌ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲೂ ಮೊದಲ ಹಣಾಹಣಿಯಲ್ಲೂ ಭಾರತದ ಬ್ಯಾಟರ್‌ಗಳಿಗೆ ತಲೆನೋವಾಗಿದ್ದರು.

ಸ್ಫೋಟಕ ಬ್ಯಾಟಿಂಗ್ ಶೈಲಿಯ ಹರ್ಮನ್‌ಪ್ರೀತ್ ಕೌರ್ ಹೆಬ್ಬೆರಳಿಗೆ ಗಾಯಗೊಂಡ ಕಾರಣ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಪಂದ್ಯಕ್ಕೂ ಅವರು ಲಭ್ಯ ಇರುವುದಿಲ್ಲ ಎಂದು ತಂಡದ ಬ್ಯಾಟಿಂಗ್ ಕೋಚ್‌ ಶಿವಸುಂದರ್ ದಾಸ್‌ ತಿಳಿಸಿದ್ದಾರೆ. ಹೀಗಾಗಿ ದೀಪ್ತಿ ಶರ್ಮಾ ಅವರ ಜವಾಬ್ದಾರಿ ಹೆಚ್ಚಾಗಿದೆ.

ಮೊದಲ ಪಂದ್ಯದಲ್ಲಿ 21 ವರ್ಷದ ಯಸ್ತೀಕಾ ಭಾಟಿಯಾ ಭರವಸೆ ಮೂಡಿಸಿದ್ದರು. ಪದಾರ್ಪಣೆ ಪಂದ್ಯದಲ್ಲಿ ವಿಶ್ವಶ್ರೇಷ್ಠ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ್ದ ಅರು 35 ರನ್ ಗಳಿಸಿದ್ದರು. ಹೀಗಾಗಿ ತಂಡ ಅವರ ಮೇಲೆ ನಿರೀಕ್ಷೆ ಇರಿಸಿಕೊಂಡಿದೆ.

ಅಗ್ರ ಕ್ರಮಾಂಕದ ತಾಕತ್ತು
ಬಲಿಷ್ಠ ಬೌಲಿಂಗ್‌ ವಿಭಾಗವನ್ನು ಹೊಂದಿರುವ ಆಸ್ಟ್ರೇಲಿಯಾಗೆ ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಬಲವಿದೆ. ಆರಂಭಿಕರಾದ ರಾಚೆಲ್ ಹೇನ್ಸ್‌ ಮತ್ತು ಅಲಿಸಾ ಹೀಲಿ ಅವರೊಂದಿಗೆ ನಾಯಕಿ ಮೆಗ್ ಲ್ಯಾನಿಂಗ್ ಭಾರತದ ಬೌಲಿಂಗ್‌ ದಾಳಿಯನ್ನು ಸುಲಭವಾಗಿ ಎದುರಿಸಿದ್ದರು. ಜೂಲನ್ ಗೋಸ್ವಾಮಿ ನೇತೃತ್ವದ ಬೌಲರ್‌ಗಳು ಎರಡನೇ ಪಂದ್ಯದಲ್ಲಿ ಯಾವ ತಂತ್ರ ಪ್ರಯೋಗಿಸುತ್ತಾರೆ ಎಂಬ ಕುತೂಹಲ ಕೆರಳಿದೆ.

ಪಂದ್ಯ ಆರಂಭ: ಬೆಳಿಗ್ಗೆ 10.40 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT