ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಹರ್ಮನ್‌ಪ್ರೀತ್‌ ಸಿಂಗ್ ಹ್ಯಾಟ್ರಿಕ್‌

ದಕ್ಷಿಣ ಕೊರಿಯಾ ವಿರುದ್ಧ 4–1ರ ಜಯ
Last Updated 25 ಅಕ್ಟೋಬರ್ 2018, 15:24 IST
ಅಕ್ಷರ ಗಾತ್ರ

ಮಸ್ಕತ್‌: ಹರ್ಮನ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರು. ಅವರ ಉತ್ತಮ ಆಟದ ಬಲದಿಂದ ಭಾರತ ತಂಡ ಏಷ್ಯನ್‌ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು. ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಎದುರು ಭಾರತ 4–1ರಿಂದ ಗೆದ್ದಿತು.

ಐದನೇ ನಿಮಿಷದಲ್ಲಿ ಮೋಹಕ ಡ್ರ್ಯಾಗ್ ಫ್ಲಿಕ್‌ ಮೂಲಕ ಹರ್ಮನ್‌ಪ್ರೀತ್ ಸಿಂಗ್‌ ಭಾರತದ ಖಾತೆ ತೆರೆದರು. 10ನೇ ನಿಮಿಷದಲ್ಲಿ ಗುರುಜಂತ್ ಸಿಂಗ್‌ ಮುನ್ನಡೆ ಹೆಚ್ಚಿಸಿದರು. ದಕ್ಷಿಣ ಕೊರಿಯಾ ಪರ 20ನೇ ನಿಮಿಷದಲ್ಲಿ ಲೀ ಸೀನ್‌ಗಿಲ್‌ ಗೋಲು ಗಳಿಸಿ ಮರು ಹೋರಾಟದ ಭರವಸೆ ಮೂಡಿಸಿದರು.

ಆದರೆ 47 ಮತ್ತು 59ನೇ ನಿಮಿಷಗಳಲ್ಲಿ ಹರ್ಮನ್‌ಪ್ರೀತ್ ಮತ್ತೆ ಎರಡು ಬಾರಿ ಚೆಂಡನ್ನು ಗುರಿ ಸೇರಿಸಿ ಭಾರಿ ಪೆಟ್ಟು ನೀಡಿದರು. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗಳಿಸಿದ ಮೂರನೇ ಆಟಗಾರ ಎಂದೆನಿಸಿಕೊಂಡರು. ಭಾರತದ ದಿಲ್‌ಪ್ರೀತ್‌ ಸಿಂಗ್‌ ಮತ್ತು ಪಾಕಿಸ್ತಾನದ ಅಲೀಮ್‌ ಬಿಲಾಲ್‌ ಅವರು ಹ್ಯಾಟ್ರಿಕ್ ಬಾರಿಸಿದ್ದರು.

ಅಗ್ರ ಸ್ಥಾನ: ಐದು ಪಂದ್ಯಗಳಿಂದ 13 ಪಾಯಿಂಟ್ ಗಳಿಸಿದ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಹೊಂದಿದ್ದು ಮಲೇಷ್ಯಾ 10 ಪಾಯಿಂಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಈ ಎರಡು ತಂಡಗಳೊಂದಿಗೆ ಪಾಕಿಸ್ತಾನ ಮತ್ತು ಜಪಾನ್‌ ಸೆಮಿಫೈನಲ್‌ ಪ್ರವೇಶಿಸಿದವು.

ಮಲೇಷ್ಯಾ ಎದುರು ಬುಧವಾರ ಗೋಲುರಹಿತ ಡ್ರಾ ಸಾಧಿಸಿದ ಭಾರತ ಗುರುವಾರ ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯನ್ನು ದಂಗುಬಡಿಸಿತು. ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಭಾರತಕ್ಕೆ ಐದನೇ ನಿಮಿಷದಲ್ಲೇ ಪೆನಾಲ್ಟಿ ಅವಕಾಶ ಲಭಿಸಿತು. ಇದರಲ್ಲಿ ಫಲವನ್ನೂ ಕಂಡಿತು. ನಂತರ ಆಕ್ರಮಣವನ್ನು ಇನ್ನಷ್ಟು ಬಿರುಸುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT