ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕೆ ನನ್ನ ಬಳಿ ಉತ್ತರವಿಲ್ಲ

ಐಪಿಎಲ್‌ ಕುರಿತ ಪ್ರಶ್ನೆಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿಕೆ
Last Updated 24 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕುರಿತು ನೀವು ಕೇಳುವ ಪ್ರಶ್ನೆಗಳಿಗೆ ಸದ್ಯಕ್ಕಂತೂ ನನ್ನ ಬಳಿ ಉತ್ತರಗಳಿಲ್ಲ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

‘ಈಗ ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಲೀಗ್‌ ಮುಂದೂಡುವಾಗ ಇದ್ದ ಪರಿಸ್ಥಿತಿ ಈಗಲೂ ಇದೆ. ಹಿಂದಿನ 10 ದಿನಗಳಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದು ಸೌರವ್‌ ತಿಳಿಸಿದ್ದಾರೆ.

‘ಕೊರೊನಾ ಮಹಾಮಾರಿಯಿಂದಾಗಿ ಇಡೀ ಕ್ರೀಡಾ ಜಗತ್ತು ಸ್ತಬ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೊಸದಾಗಿ ಯಾವುದೇ ಯೋಜನೆಗಳನ್ನು ರೂಪಿಸಲು ಸಾಧ್ಯವೇ ಇಲ್ಲ. ಕೊರೊನಾ ವೈರಾಣುವನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವೇ ‘ಲಾಕ್‌ಡೌನ್‌’ ಆದೇಶ ಹೊರಡಿಸಿದೆ. ಹೀಗಾಗಿ ವಿಮಾ ಕಂಪನಿಗಳು ವಿಮಾ ಹಣ ನೀಡುತ್ತವೆಯೋ ಇಲ್ಲವೊ ಎಂಬ ಪ್ರಶ್ನೆ ಕಾಡುತ್ತಿದೆ. ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನನ್ನಿಂದ ಆಗುತ್ತಿಲ್ಲ’ ಎಂದೂ ನುಡಿದಿದ್ದಾರೆ.

‘ಕೊರೊನಾ ವಿರುದ್ಧ ಸರ್ಕಾರ ಹೋರಾಡುತ್ತಿದೆ. ಆರ್ಥಿಕವಾಗಿ ನಮ್ಮಿಂದಾದ ಸಹಾಯ ಮಾಡಬೇಕೆಂಬ ಆಲೋಚನೆ ಇದೆ. ಕಾರ್ಯದರ್ಶಿ ಜಯ ಶಾ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಪಶ್ಚಿಮ ಬಂಗಾಳ ಸರ್ಕಾರ ಕೇಳಿದರೆ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಮತ್ತು ಆಟಗಾರರ ಕೊಠಡಿಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಇವುಗಳನ್ನು ತಾತ್ಕಾಲಿಕ ವೈದ್ಯಕೀಯ ಕೇಂದ್ರಗಳನ್ನಾಗಿ ಪರಿವರ್ತಿಸಿಕೊಳ್ಳಲು ನಮ್ಮದೇನೂ ಅಭ್ಯಂತರವಿಲ್ಲ’ ಎಂದಿದ್ದಾರೆ.

‘ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಇದನ್ನು ಎಲ್ಲರೂ ಸ್ವಾಗತಿಸಬೇಕು. ಸರ್ಕಾರ ಮತ್ತು ಆರೋಗ್ಯ ಸಚಿವಾಲಯದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಿರುವುದೂ ನಮ್ಮ ಕರ್ತ್ಯವ್ಯ. ವಾರಾಂತ್ಯದ ದಿನಗಳಲ್ಲಿ ಮನೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆದು ಅದೆಷ್ಟೋ ವರ್ಷಗಳಾಗಿದ್ದವು. ಈಗ ಅನಿವಾರ್ಯವಾಗಿ ಮನೆಯಲ್ಲಿ ಇರಬೇಕು. ಇದೊಂದು ರೀತಿಯಲ್ಲಿ ವಿಶೇಷ ಅನುಭವ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT