ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬದ ಪ್ರೀತಿಯಿಂದಲೇ ಖಿನ್ನತೆಯನ್ನು ಕ್ಲೀನ್‌ಬೌಲ್ಡ್‌ ಮಾಡಿದ ಮೊಹಮ್ಮದ್ ಶಮಿ

Last Updated 19 ಜೂನ್ 2020, 16:13 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೂ ಒಮ್ಮೆ ಖಿನ್ನತೆಯ ಸಮಸ್ಯೆಯು ತೀವ್ರವಾಗಿ ಕಾಡಿತ್ತು. ಆತ್ಮಹತ್ಯೆಯ ವಿಚಾರವೂ ಸುಳಿದಾಡಿತ್ತು. ಆದರೆ ನನ್ನ ಕುಟುಂಬವು ನೀಡಿದ ಬೆಂಬಲದಿಂದ ಆ ಕೆಟ್ಟ ಗಳಿಗೆಯಿಂದ ಹೊರಬಂದೆ. ಚಿತ್ರನಟ ಸುಶಾಂತ್ ಸಿಂಗ್ ರಜಪೂತ್ ಕೂಡ ತನ್ನ ಆಪ್ತರೊಂದಿಗೆ ಮಾತನಾಡಿದ್ದರೆ ಈ ದುರ್ಘಟನೆ ಆಗುತ್ತಿರಲಿಲ್ಲ’ ಎಂದು ಭಾರತ ತಂಡದ ಮಧ್ಯಮವೇಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.

‘ಸುಶಾಂತ್ ಸಾವಿನ ಘಟನೆಯಿಂದ ನನಗೆ ತೀವ್ರ ಬೇಸರವಾಗಿದೆ. ಸುಶಾಂತ್ ಪ್ರತಿಭಾವಂತ ನಟ ಮತ್ತು ನನಗೆ ಉತ್ತಮ ಗೆಳೆಯ. ನಾನು ಅವರೊಂದಿಗೆ ಮಾತನಾಡಿ ಅವರ ಸಮಸ್ಯೆಯನ್ನು ಕೇಳಬೇಕಿತ್ತು. ಪರಿಹಾರ ನೀಡಬೇಕಿತ್ತು ಎಂಬ ವಿಚಾರ ಕಾಡುತ್ತಿದೆ. ಖಿನ್ನತೆ ಸಮಸ್ಯೆಗೆ ಖಂಡಿತ ಪರಿಹಾರ ಇದೆ. ಯಾರಾದರೂ ಆ ಸಂದರ್ಭದಲ್ಲಿ ಖಿನ್ನತೆಗೊಳಗಾದವರೊಂದಿಗೆ ಆಪ್ತವಾಗಿ ಸಮಾಲೋಚನೆ ನಡೆಸಿ, ಧೈರ್ಯ ತುಂಬಬೇಕು. ನನ್ನ ಜೀವನದಲ್ಲಿ ಕುಟುಂಬದ ಸದಸ್ಯರು ಬೆನ್ನಿಗೆ ನಿಂತಿದ್ದರು. ನಾನು ಏಕಾಂಗಿಯಾಗಲು ಅವರು ಬಿಡಲಿಲ್ಲ. ಯಾರಾದರೊಬ್ಬರು ನನ್ನ ಜೊತೆಗೇ ಇರುತ್ತಿದ್ದರು. ಆಧ್ಯಾತ್ಮಿಕ ವಿಷಯಗಳ ಆಸಕ್ತಿಯಿಂದಲೂ ಪರಿಹಾರವಿದೆ’ ಎಂದು ಶಮಿ ‘ಹಿಂದೂಸ್ತಾನ್ ಟೈಮ್ಸ್‌’ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೆಲ ವರ್ಷಗಳ ಹೀಂದೆ ಮೊಹಮ್ಮದ್ ಶಮಿ ಮತ್ತು ಅವರ ಪತ್ನಿಯ ನಡುವಣ ಭಿನ್ನಾಭಿಪ್ರಾಯ ಮೂಡಿತ್ತು. ಅದು ತೀರಾ ವಿಕೋಪಕ್ಕೂ ಹೋಗಿತ್ತು. ಆ ಸಂದರ್ಭದಲ್ಲಿ ತಮ್ಮ ಕ್ರಿಕೆಟ್ ಭವಿಷ್ಯವೇ ಮುಗಿದುಹೋಯಿತೆಂಬ ಭಾವದಲ್ಲಿ ಶಮಿ ಖಿನ್ನತೆಗೊಳಗಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.

‘ಮಾನಸಿಕ ಖಿನ್ನತೆಯು ಖಂಡಿತವಾಗಿಯೂ ನಿಮ್ಮ ದೈಹಿಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅದೇ ಸಂದರ್ಭದಲ್ಲಿ ನೀವು ಇನ್ನೊಬ್ಬರೊಂದಿಗೆ ಸಮಸ್ಯೆಯ ಕುರಿತು ಚರ್ಚಿಸಿದರೆ ಸಮಸ್ಯೆಗೆ ಪರಿಹಾರ ಹೊಳೆಯುತ್ತದೆ. ಆ ವಿಷಯದಲ್ಲಿ ನಾನು ಅದೃಷ್ಟವಂತ. ನಮ್ಮ ತಂಡದ ನಾಯಕ ವಿರಾಟ್ ಕೊಹ್ಲಿ, ಮತ್ತು ಉಳಿದ ಆಟಗಾರರು ಬಹಳಷ್ಟು ಬೆಂಬಲ ನೀಡಿದರು. ನನ್ನ ಆತ್ಮವಿಶ್ವಾಸ ಹೆಚ್ಚಿಸಿದರು. ಆ ಕೆಟ್ಟ ಸಮಯದಿಂದ ಹೊರಬಂದೆ. ಉತ್ತಮವಾದ ಲಯ ಕಂಡುಕೊಂಡೆ’ ಎಂದಿದ್ದಾರೆ.

ಚೆಂಡಿನ ಹೊಳಪಿಗೆ ಎಂಜಲು ನಿಷೇಧ ಕುರಿತು ಪ್ರತಿಕ್ರಿಯಿಸಿದ ಅವರು, ‘ಚೆಂಡಿನ ರಿವರ್ಸ್‌ ಸ್ವಿಂಗ್‌ನಲ್ಲಿ ಎಂಜಲಿನ ಪಾತ್ರ ಅಷ್ಟೇನೂ ಇಲ್ಲ. ಆದರೂ ಈ ರೂಢಿಯನ್ನು ಬಿಟ್ಟು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕು. ಆದರೆ ಈ ನಿಯಮವು ತಾತ್ಕಾಲಿಕವಷ್ಟೇ. ಕೊರೊನಾ ಸಂಕಟ ದೂರವಾದರೆ ನಿಯಮವೂ ಬದಲಾಗುತ್ತದೆ’ ಎಂದರು.

‘ಹೋದ ಮೂರು ತಿಂಗಳ ಲಾಕ್‌ಡೌನ್ ಸಂದರ್ಭದಲ್ಲಿ ನಾನು ಮೊರಾದಾಬಾದ್ ಸಮೀಮದ ಸಾಹಸಪುರ ಗ್ರಾಮದಲ್ಲಿದ್ದೆ. ಅದು ನಮ್ಮ ಪೂರ್ವಜರ ಊರು. ಅಲ್ಲಿಯೇ ಒಂದು ಅಕಾಡೆಮಿಯನ್ನೂ ಆರಂಭಿಸಿದ್ದೆ. ನನ್ನ ಸಹೋದರ ಮೊಹಮ್ಮದ್ ಕೈಫ್‌ಗೆ ಅಲ್ಲಿ ತರಬೇತಿ ಕೊಡುತ್ತಿದ್ದೇನೆ. ಬಂಗಾಳದ 23 ವರ್ಷದೊಳಗಿನವರ ತಂಡದಲ್ಲಿ ಕೈಫ್ ಆಡುತ್ತಿದ್ದಾನೆ. ಅವನೂ ಮಧ್ಯಮವೇಗಿ. ನಮ್ಮ ಊರಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆ ಇದೆ. ಬಡವರೇ ಹೆಚ್ಚು. ಲಾಕ್‌ಡೌನ್‌ನಿಂದ ಬಹಳಷ್ಟು ಮಂದಿ ತೀವ್ರ ತೊಂದರೆ ಅನುಭವಿಸಿದರು. ಬಡವರಿಗೆ ಪ್ರತಿನಿತ್ಯ ನಮ್ಮ ಕುಟುಂಬದಿಂದ ಊಟ, ತಿಂಡಿಯ ವ್ಯವಸ್ಥೆ ಮಾಡಿದ್ದೆವು. ಮನುಷ್ಯರಾಗಿ ಅದು ನಮ್ಮ ಕರ್ತವ್ಯವಾಗಿತ್ತು. ನನ್ನ ಅಪ್ಪ ಮತ್ತು ಅಜ್ಜ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದ ಇಂತಹ ಕಾರ್ಯವನ್ನು ಮುಂದುವರಿಸಿದ ತೃಪ್ತಿ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT