ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಟ್ರೋಫಿ ಜಯಿಸದಕ್ಕೆ ನನ್ನನ್ನು ವಿಫಲ ನಾಯಕನೆಂದು ಪರಿಗಣಿಸುತ್ತಾರೆ: ಕೊಹ್ಲಿ

Last Updated 25 ಫೆಬ್ರುವರಿ 2023, 16:10 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಆಯೋಜಿತ ಟೂರ್ನಿಗಳಲ್ಲಿ Y ತಮ್ಮನ್ನು ‘ವಿಫಲ’ ನಾಯಕನೆಂದು ಪರಿಗಣಿಸಲಾಗಿದೆ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು 2017ರ ಚಾಂಪಿಯನ್ಸ್ ಟ್ರೋಫಿ, 2019ರ ಏಕದಿನ ವಿಶ್ವಕಪ್, 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾಗೂ 2021ರ ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಪರಾಭವಗೊಂಡಿತ್ತು.

‘ಗೆಲ್ಲುವ ಉದ್ದೇಶದಿಂದಲೇ ಟೂರ್ನಿಗಳಲ್ಲಿ ಆಡುತ್ತೇವೆ. ಆದರೆ ಸೋಲುಗಳನ್ನೇ ಮುಂದಿಟ್ಟುಕೊಂಡು ಟೀಕಿಸಲಾಗುತ್ತದೆ. ಐಸಿಸಿ ಟ್ರೋಫಿಯನ್ನು ನನ್ನ ನಾಯಕತ್ವದ ತಂಡವು ಗೆದ್ದಿರಲಿಲ್ಲ. ಆದರೆ ಫೈನಲ್ ಮತ್ತು ಸೆಮಿಫೈನಲ್‌ ಹಂತದವರೆಗೂ ತಂಡ ತಲುಪಿತ್ತು. ಆದರೂ ನನ್ನನ್ನು ವಿಫಲ ನಾಯಕನೆಂದು ಕರೆಯುತ್ತಾರೆ’ ಎಂದು ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಅವರು ಹೇಳಿದ್ದಾರೆ.

‘ಆದರೆ ಐಸಿಸಿ ಟೂರ್ನಿಗಳ ಯಶಸ್ಸು ಅಥವಾ ವೈಫಲ್ಯಗಳ ಹಿನ್ನೆಲೆಯಲ್ಲಿ ನನ್ನನ್ನು ನಾನು ವಿಶ್ಲೇಷಿಸುವುದಿಲ್ಲ. ಒಂದು ತಂಡವಾಗಿ ಮಾಡಿರುವ ಸಾಧನೆ ಹಾಗೂ ಬಳಗದಲ್ಲಿ ಸಾಂಸ್ಕೃತಿಕ ನಡೆನುಡಿಗಳ ಬದಲಾವಣೆಯನ್ನು ಅವಲೋಕಿಸುತ್ತೇನೆ. ಆದರೆ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ 2011ರ ಏಕದಿನ ಕ್ರಿಕೆಟ್ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್‌ ಟ್ರೋಫಿ ಗೆದ್ದ ತಂಡದಲ್ಲಿ ಆಡಿದ್ದೆ’ ಎಂದರು.

‘ಸಚಿನ್ ತೆಂಡೂಲ್ಕರ್ ಅವರು ಆಡಿದ ಆರನೇ ವಿಶ್ವಕಪ್ ಟೂರ್ನಿಯಲ್ಲಿ ತಂಡವು ಟ್ರೋಫಿ ಜಯಿಸಿತ್ತು. ಅ ಬಳಗದಲ್ಲಿ ನಾನೂ ಒಬ್ಬನಾಗಿದ್ದೆ. ಕೇವಲ ಘಟಿಸಿಹೋದ ತಪ್ಪುಗಳ ಲೆಕ್ಕಾಚಾರ ಮಾಡುವುದಕ್ಕಿಂತ ಯಶಸ್ಸುಗಳನ್ನು ನೋಡುತ್ತ ಹೋಗಬೇಕು. ಅದರಿಂದ ನಮ್ಮ ವೃತ್ತಿಜೀವನದ ಬಗ್ಗೆ ಹೆಮ್ಮೆಯೆನಿಸುತ್ತದೆ. ಅದಕ್ಕಾಗಿ ಆಭಾರಿಯಾಗಿರುತ್ತೇನೆ’ ಎಂದು ವಿರಾಟ್ ಹೇಳಿದ್ದಾರೆ.

‘ನನ್ನ ಕಪಾಟಿನಲ್ಲಿ ಟ್ರೋಫಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಂಗ್ರಹಿಸಬೇಕು ಎನ್ನುವ ಹುಚ್ಚು ನನಗಿಲ್ಲ. ಶಿಸ್ತು, ಸತತ ಪರಿಶ್ರಮ ಮತ್ತು ಪರಿಪೂರ್ಣತೆಯ ಪ್ರಯತ್ನಗಳಿಗೆ ಲಭಿಸಿದ ಉಪಉತ್ಪನ್ನಗಳಾಗಿ ಟ್ರೋಫಿಗಳನ್ನು ಪರಿಗಣಿಸುತ್ತೇನೆ. ಆದರೆ ಅವುಗಳೇ ಎಲ್ಲವೂ ಅಲ್ಲ’ ಎಂದಿದ್ದಾರೆ.

ಧೋನಿ ಒಬ್ಬರೇ ಬೆನ್ನಿಗಿದ್ದರು

‘ಕಳೆದ ಕೆಲವು ವರ್ಷಗಳಲ್ಲಿ ನಾನು ಫಾರ್ಮ್ ಕಳೆದುಕೊಂಡಿದ್ದೆ. ಆ ಕಠಿಣ ಸಮಯದಲ್ಲಿ ಮಹೇಂದ್ರಸಿಂಗ್ ಧೋನಿ ಕರೆ ಮಾಡಿ ಧೈರ್ಯ ತುಂಬಿದ್ದರು. ನನ್ನ ಬಾಲ್ಯದ ಕೋಚ್, ಪತ್ನಿ ಅನುಷ್ಕಾ ಹಾಗೂ ಕುಟುಂಬದ ಸದಸ್ಯರನ್ನು ಬಿಟ್ಟರೆ ನನಗೆ ಬೆಂಬಲವಾಗಿ ನಿಂತ ಏಕೈಕ ವ್ಯಕ್ತಿ ಧೋನಿ’ ಎಂದು ಕೊಹ್ಲಿ ನೆನಪಿಸಿಕೊಂಡರು.

‘ಧೋನಿ ಫೋನ್ ಕರೆಗೆ ಸಿಗುವುದು ಅಪರೂಪ. ಅವರು ಫೋನ್ ಬಳಸುವುದೇ ಕಮ್ಮಿ. ಆದರೆ ಕಠಿಣ ಸಮಯದಲ್ಲಿ ನನ್ನಲ್ಲಿ ವಿಶ್ವಾಸ ತುಂಬುವವರ ನಿರೀಕ್ಷೆಯಲ್ಲಿ ಇದ್ದೆ. ಆಗ ಅವರು ಕರೆ ಮಾಡಿ ಮಾತನಾಡಿದರು. ಆ ಮಾತುಗಳಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT