ಭಾನುವಾರ, ನವೆಂಬರ್ 28, 2021
19 °C

ವಿಶ್ವಕಪ್ ಬಳಿಕ ನಾಯಕತ್ವಕ್ಕೆ ಕೊಹ್ಲಿ ಗುಡ್ ಬೈ: ಯಾವುದೇ ಒತ್ತಡವಿಲ್ಲ ಎಂದ ಗಂಗೂಲಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಟಿ–20 ವಿಶ್ವಕಪ್ ಬಳಿಕ ನಾಯಕತ್ವವನ್ನು ತೊರೆಯುವುದಾಗಿ ಹೇಳಿರುವುದು ವಿರಾಟ್ ಕೊಹ್ಲಿ ಅವರ ಸ್ವಂತ ನಿರ್ಧಾರವಾಗಿದೆ. ಕ್ರಿಕೆಟ್‌ ಮಂಡಳಿಯಿಂದ ಯಾವುದೇ ಒತ್ತಡವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಕೊಹ್ಲಿ ನಾಯಕತ್ವ ತೊರೆಯುವ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಗೂಲಿ, ‘ವಿರಾಟ್‌ ಕೊಹ್ಲಿ ಅವರು ನಾಯಕತ್ವದಿಂದ ಕೆಳಗಿಳಿಯುವ ಬಗ್ಗೆ ನಿರ್ಧರಿಸಿರುವುದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಇದು ಅವರು ಇಂಗ್ಲೆಂಡ್‌ ಸರಣಿ ಬಳಿಕ ತೆಗೆದುಕೊಂಡ ಸ್ವಂತ ತೀರ್ಮಾನವಾಗಿದೆ. ನಾವು (ಬಿಸಿಸಿಐ) ವಿರಾಟ್ ಜತೆ ನಾಯಕತ್ವದ ಬಗ್ಗೆ ಈವರೆಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ಜತೆಗೆ, ಅವರ ಮೇಲೆ ಯಾವುದೇ ಒತ್ತಡವನ್ನು ಹಾಕಿಲ್ಲ. ನಾನು ಒಬ್ಬ ಆಟಗಾರನಾಗಿದ್ದವನು. ಇತರೆ ಆಟಗಾರರ ಮೇಲೆ ಒತ್ತಡ ಹಾಕುವಂತಹ ಕೆಲಸ ಎಂದಿಗೂ ಮಾಡುವುದಿಲ್ಲ’ ಎಂದು ಹೇಳಿದ್ದಾರೆ.

‘ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿರುವುದು ಒಂದು ಹಂತದವರೆಗೆ ಚೆನ್ನಾಗಿರುತ್ತದೆ. ಇದರಿಂದ ಸಾಕಷ್ಟು ಖ್ಯಾತಿ, ಗೌರವ ಪಡೆಯಬಹುದು. ಆದರೆ, ಒಬ್ಬ ಆಟಗಾರನಾಗಿ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಇದು ಕೇವಲ ಎಂ.ಎಸ್‌.ಧೋನಿ ಅಥವಾ ವಿರಾಟ್ಗೆ ಸೀಮಿತವಲ್ಲ. ಭವಿಷ್ಯದಲ್ಲಿ ನಾಯಕರಾಗುವವರು ಸಹ ಒತ್ತಡ ಎದುರಿಸಬೇಕಾಗುತ್ತದೆ. ಇದು ಕಠಿಣ ಕೆಲಸ’ ಎಂದು ಗಂಗೂಲಿ ಹೇಳಿದ್ದಾರೆ.

‘ಧೋನಿ ಪ್ರಬುದ್ಧ ವ್ಯಕ್ತಿ’
‘ಟೀಮ್‌ ಇಂಡಿಯಾ ಮೂರು ಐಸಿಸಿ ವಿಶ್ವಕಪ್‌ಗಳನ್ನು ಗೆಲ್ಲುವುದಕ್ಕೆ ಕಾರಣರಾದ ಮಹೇಂದ್ರ ಸಿಂಗ್ ಧೋನಿ ಅವರು ಒಬ್ಬ ಪ್ರಬುದ್ಧ ವ್ಯಕ್ತಿಯಾಗಿದ್ದಾರೆ. ಅವರನ್ನು 'ಟೀಮ್ ಮೆಂಟರ್' ಆಗಿ ನೇಮಕ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಗಂಗೂಲಿ ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು