ಮಂಗಳವಾರ, ಆಗಸ್ಟ್ 3, 2021
24 °C
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಯದ ಸ್ಥಿತಿ ಕುರಿತು ಮಾತು

ರಕ್ಷಣಾತ್ಮಕ ಶೈಲಿ ಆಟಕ್ಕೆ ಇನ್ನೂ ಇದೆ ಮಹತ್ವ: ದ್ರಾವಿಡ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕ್ರಿಕೆಟ್‌ ಜೀವನದ ಉತ್ತುಂಗದಲ್ಲಿದ್ದಾಗ ಆಡಿದ ರೀತಿಯಲ್ಲಿ ಈಗ ಆಡುತ್ತಿದ್ದರೆ ತಾವು ‘ಉಳಿಯುತ್ತಿರಲಿಲ್ಲ’ ಎಂಬುದನ್ನು ಕಲಾತ್ಮಕ ಆಟಗಾರ ರಾಹುಲ್‌ ದ್ರಾವಿಡ್‌ ಪ್ರಾಂಜಲವಾಗಿ ಒಪ್ಪಿಕೊಂಡಿದ್ದಾರೆ. ಆದರೆ ರಕ್ಷಣಾತ್ಮಕ ಕೌಶಲಕ್ಕೆ ‘ಬೆಲೆ’ ಕಡಿಮೆಯಾಗುತ್ತಿದ್ದರೂ ಮಹತ್ವ ಇದ್ದೇ ಇದೆ ಎಂಬ ನಂಬಿಕೆ ಹೊಂದಿದ್ದಾರೆ.

‘ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರಂಥ ಆಟಗಾರರು ಏಕದಿನ ಕ್ರಿಕೆಟ್‌ನ ಮಟ್ಟವನ್ನು ಹೊಸ ಎತ್ತರಕ್ಕೇರಿಸಿದ್ದಾರೆ. ಆದರೆ ಟೆಸ್ಟ್‌ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ಅವರ  ಅಗತ್ಯವೂ ಇದ್ದೇ ಇರುತ್ತದೆ. ನಾನು ಟೆಸ್ಟ್‌ ಆಟಗಾರನಾಗಿರಲು ಬಯಸಿದ್ದ ಕಾರಣ ನನ್ನನ್ನು ರಕ್ಷಣಾತ್ಮಕ ಆಟಗಾರ ಎಂದರೆ ಕರೆದಲ್ಲಿ ಸಮಸ್ಯೆಯೇನೂ ಇಲ್ಲ’ ಎಂದಿದ್ದಾರೆ.

‘ದೀರ್ಘಕಾಲದವರೆಗೆ ಕ್ರೀಸ್‌ಗೆ ಅಂಟಿಕೊಳ್ಳುವುದು, ಬೌಲರ್‌ಗಳನ್ನು ದಣಿಸುವುದು, ಕಠಿಣ ಪರಿಸ್ಥಿತಿಯಲ್ಲಿ ಹೊಸ ಚೆಂಡನ್ನು ಎದುರಿಸುವುದು ಸಾಧ್ಯವಾದರೆ ನಂತರದ ಬ್ಯಾಟಿಂಗ್‌ ಸುಲಭವಾಗಬಹುದು. ಆ ರೀತಿ ನಾನು ಆಡುತ್ತಿದ್ದೆ’ ಎಂದು ಹಿರಿಯ ಆಟಗಾರ ಸಂಜಯ್‌ ಮಾಂಜ್ರೇಕರ್‌ ಅವರೊಂದಿಗೆ ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವಿಡಿಯೊಕಾಸ್ಟ್‌ ಸಂವಾದದಲ್ಲಿ ದ್ರಾವಿಡ್‌ ಹೇಳಿದ್ದಾರೆ.

‘ಹಾಗೆ ಆಡುವುದು ನನ್ನ ಕೆಲಸ ಎಂದುಕೊಂಡಿದ್ದೆ. ಅದರ ಕುರಿತು ಹೆಮ್ಮೆ ಇದೆ. ಹಾಗೆಂದು ನಾನು ವೀರೇಂದ್ರ ಸೆಹ್ವಾಗ್‌ ಅವರ ರೀತಿಯಲ್ಲಿ ಬ್ಯಾಟ್‌ ಬೀಸುವುದನ್ನು ಇಷ್ಟಪಡುತ್ತಿರಲಿಲ್ಲ ಎಂದಲ್ಲ. ಛಲ ಮತ್ತು ಏಕಾಗ್ರತೆ ನನ್ನ ಬಲವಾಗಿತ್ತು. ಅದರ ಮೇಲೆಯೇ ನಾನು ಆಟ ಬೆಳೆಸಿದೆ’ ಎಂದಿದ್ದಾರೆ ಕರ್ನಾಟಕದ ಆಟಗಾರ.

‘ನಾನು 300ಕ್ಕೂ ಅಧಿಕ ಏಕದಿನ ಪಂದ್ಯಗಳನ್ನೂ ಆಡಿದ್ದೇನೆ. ಹೀಗಾಗಿ ವಿಕೆಟ್‌ ರಕ್ಷಿಸುವುದಷ್ಟೇ  ನನ್ನ ಕೆಲಸವೆಂದು ತಿಳಿದುಕೊಂಡಿರಲಿಲ್ಲ’ ಎಂದೂ ಹೇಳಿದ್ದಾರೆ.

‘ನಿಜ, ಹಿಂದೆ ನಾನು ಆಡಿದಂತೆ ಈಗ ಆಡಿದರೆ ನಾನು ಉಳಿಯುತ್ತಿರಲಿಲ್ಲ. ಈಗಿನವರ ಸ್ಟ್ರೈಕ್‌ರೇಟ್‌ಗಳನ್ನು ನೋಡಿ. ಏಕದಿನ ಕ್ರಿಕೆಟ್‌ನಲ್ಲಿ ನನ್ನ ಸ್ಟ್ರೈಕ್‌ರೇಟ್‌ ಸಚಿನ್‌ ಅಥವಾ ಸೆಹ್ವಾಗ್‌ ಮಟ್ಟದಲ್ಲಿರಲಿಕ್ಕಿಲ್ಲ. ಆದರೆ ಆಗಿನ ಕಾಲದ ಆಟದ ಮಟ್ಟಕ್ಕೆ ನಾವು ಆಡುತ್ತಿದ್ದೆವು’ ಎಂದಿದ್ದಾರೆ.

‘ಈಗ ನಿಧಾನಗತಿಯ ಆಟಕ್ಕೆ ಬೆಲೆ ಕಡಿಮೆಯಾಗುತ್ತಿದೆ. ಆದರೆ ಈಗಲೂ ವಿಕೆಟ್‌ ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಈಗಿನ ಕಾಲದಲ್ಲಿ ಕ್ರಿಕೆಟ್‌ನಲ್ಲಿ ಬದುಕು ಸಾಗಿಸಬೇಕಾದರೆ ಟೆಸ್ಟ್‌ ಕ್ರಿಕೆಟಿಗ ಆಗಬೇಕಾಗಿಲ್ಲ. ಟಿ–20 ಅಥವಾ ಏಕದಿನ ಕ್ರಿಕೆಟ್‌ ಆಡಿಯೇ ಬದುಕಬಹುದು’ ಎಂದೂ  ದ್ರಾವಿಡ್‌ ಹೇಳಿದ್ದಾರೆ.

‘ಒಂದು ತಲೆಮಾರಿನ ಹಿಂದೆ ಕ್ರಿಕೆಟ್‌ನಲ್ಲಿ ಉಳಿಯಬೇಕಾದರೆ ನೀವು ಟೆಸ್ಟ್‌ ಕ್ರಿಕೆಟ್‌ ಪರಿಣಿತನಾಗಿಬೇಕಿತ್ತು. ಈಗಿನ ಕಾಲದಲ್ಲೂ ವಿರಾಟ್‌ ಕೊಹ್ಲಿ, (ಕೇನ್‌) ವಿಲಿಯಮ್ಸನ್‌ ಅಥವಾ (ಸ್ಟೀವ್‌) ಸ್ಮಿತ್‌ ಅಂಥ ಆಟಗಾರರು ಉತ್ತಮ ರಕ್ಷಣಾತ್ಮಕ ಆಟವನ್ನೂ ಹೊಂದಿದ್ದಾರೆ’ ಎಂದು ದ್ರಾವಿಡ್‌ ವಿಶ್ಲೇಷಿಸಿದ್ದಾರೆ.

‘ಮೆಚ್ಚುಗೆಯ ವಿಷಯವೆಂದರೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌  ಗೌರವಿಸುತ್ತಾರೆ. ಅದರ ಕುರಿತು ಮಾತನಾಡುತ್ತಿರುತ್ತಾರೆ. ಯುವ ಕ್ರಿಕೆಟಿಗರಿಗೆ ಅವರೊಂದು ಮಾದರಿಯಾಗಿ ಕಾಣುತ್ತಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು