ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಪ್ರಶಸ್ತಿ ತಾರತಮ್ಯ ನಿವಾರಿಸಲು ಐಸಿಸಿ ಚಿಂತನೆ

ಪುರುಷರು ಮತ್ತು ಮಹಿಳಾ ಕ್ರಿಕೆಟ್‌ ಚಾಂಪಿಯನ್‌ಷಿಪ್‌ಗಳಲ್ಲಿ ಸಮಾನ ಪುರಸ್ಕಾರ
Last Updated 29 ಮಾರ್ಚ್ 2022, 18:00 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್:ಪುರುಷ ಮತ್ತು ಮಹಿಳೆಯರ ಕ್ರಿಕೆಟ್ ಚಾಂಪಿಯನ್‌ಷಿಪ್‌ಗಳಲ್ಲಿ ನಗದು ಪ್ರಶಸ್ತಿಯನ್ನು ಸಮನಾಗಿ ನೀಡುವ ಕುರಿತು ಚಿಂತನೆಗಳು ನಡೆಯುತ್ತಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆಫ್ ಅಲಾರ್ಡಿಸ್ ಹೇಳಿದ್ದಾರೆ.

ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಮುಂದಿನ ಕ್ರಿಕೆಟ್ ಆವರ್ತದಲ್ಲಿ ನಗದು ಪ್ರಶಸ್ತಿ ಮೊತ್ತದಲ್ಲಿ ಪುರುಷ ಮತ್ತು ಮಹಿಳೆಯರ ತಂಡಗಳಿಗೆ ಸಮಪ್ರಮಾಣದಲ್ಲಿ ನೀಡಲು ಅಪೆಕ್ಸ್ ಕೌನ್ಸಿಲ್ ಯೋಜಿಸಿದೆ ಎಂದೂ ಜೆಫ್ ತಿಳಿಸಿದ್ದಾರೆ.

2024 ರಿಂದ 2031ರವರೆಗಿನ ಎಂಟು ವರ್ಷಗಳ ಆವರ್ತ ವೇಳಾಪಟ್ಟಿಯನ್ನು ಮುಂದಿನ ವರ್ಷದಲ್ಲಿ ಪ್ರಕಟವಾಗಲಿದೆ.

‘ಐಸಿಸಿಯ ಆರ್ಥಿಕ ಆಯವ್ಯಯವನ್ನು ಎಂಟು ವರ್ಷಗಳ ಅವಧಿಗೆ ಸಿದ್ಧಪಡಿಸಲಾಗುತ್ತದೆ. ಮುಂದಿನ ಅವಧಿಯಲ್ಲಿ ಪುರುಷ ಮತ್ತು ಮಹಿಳಾ ಚಾಂಪಿಯನ್‌ಷಿಪ್‌ಗಳಲ್ಲಿರುವ ನಗದು ಪ್ರಶಸ್ತಿ ವ್ಯತ್ಯಾಸವನ್ನು ಒಂದೇ ರೀತಿಯಲ್ಲಿ ಜಾರಿಗೊಳಿಸುವುದು ಐಸಿಸಿಯ ಗುರಿಯಾಗಿದೆ‘ ಎಂದು ಜೆಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಮಹಿಳೆಯರ ಕ್ರಿಕೆಟಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನಪ್ರಿಯತೆ ಹೆಚ್ಚುತ್ತಿದ್ದು, ಆಟಗಾರ್ತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಆಟದತ್ತ ಒಲವು ತೋರುತ್ತಿರುವುದು ಆಶಾದಾಯಕ ಬೆಳವಣಿಗೆ. ಮುಂಬರುವ ಬಜೆಟ್ ಆವರ್ತದಲ್ಲಿ ಹಣಕಾಸಿನ ಬಗ್ಗೆ ಯೋಜನೆ ರೂಪಿಸಲು ನಮಗೆ ಬಹಳಷ್ಟು ಅವಕಾಶಗಳಿವೆ’ ಎಂದು ಹೇಳಿದರು.

‘ಸತತ ಮಾತುಕತೆಗಳು ನಡೆಯುತ್ತಲೇ ಇವೆ. ಮಹಿಳಾ ಕ್ರಿಕೆಟ್‌ನ ಶ್ರೇಯೋಭಿವೃದ್ಧಿಗಾಗಿ ಯೋಜನೆ ರೂಪುಗೊಳ್ಳುತ್ತಿವೆ. ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ನಂತರ ದುಬೈನಲ್ಲಿ ಐಸಿಸಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯವು ಬುಧವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ನಡೆಯಲಿದೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿವೆ.

ಕಣದಲ್ಲಿ ಎಂಟು ಅಮ್ಮಂದಿರು

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಎಂಟು ಮಂದಿ ಅಮ್ಮಂದಿರು ಗಮನ ಸೆಳೆದಿದ್ದಾರೆ.

ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮರೂಫ್, ನ್ಯೂಜಿಲೆಂಡ್‌ನ ಅಮಿ ಸೆಟರ್ಥ್‌ವೇಟ್, ಲೀ ತಹುವು, ಆಸ್ಟ್ರೇಲಿಯಾದ ಮೆಗನ್ ಶೂಟ್, ರಚೆಲ್ ಹೇಯ್ನ್ಸ್, ದಕ್ಷಿಣ ಆಫ್ರಿಕಾದ ಲಿಜಿಲ್ ಲೀ, ಮಸಾಬತ್ ಕ್ಲಾಸ್ ಹಾಗೂ ವೆಸ್ಟ್ ಇಂಡೀಸ್‌ನ ಅಫೈ ಫ್ಲೆಚರ್ ಆಡಿದ್ದಾರೆ.

‘ಇದೊಂದು ಗಮನಾರ್ಹ ಬೆಳವಣಿಗೆ. ಮಹಿಳೆಯರು ತಮ್ಮ ಕೌಟುಂಬಿಕ ಜೀವನದೊಂದಿಗೆ ಕ್ರಿಕಟ್‌ನಲ್ಲಿಯೂ ಮಿಂಚುತ್ತಿರುವುದು ಪ್ರೇರಣಾದಾಯಿಯಾಗಿದೆ. ಅವರಿಗಾಗಿ ವಿಶೇಷ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗಮನ ಹರಿಸುತ್ತೇವೆ’ ಎಂದು ಜೆಫ್‌ ಹೇಳಿದ್ದಾರೆ.

‘ತಾಯಂದಿರು ತಮ್ಮ ಮಗು ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುತ್ತಿರುವುದನ್ನು ನೋಡಿದ್ದೇವೆ. ಟೂರ್ನಿಗಳಲ್ಲಿ ಅವರು ಆಡುವಾಗ ವಿಶೇಷವಾದ ವಸತಿ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ. ಅವರಿಗೆ ಸಂಪೂರ್ಣ ಸುರಕ್ಷತೆಯನ್ನೂ ನೀಡಲು ಬದ್ಧರಾಗಿದ್ದೇವೆ. ಇದರಿಂದ ಆಟಗಾರ್ತಿಯರು ನಿಶ್ಚಿಂತೆಯಿಂದ ಆಡಬಹುದಾಗಿದೆ‘ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT