ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ರ‍್ಯಾಂಕಿಂಗ್‌: ಅಗ್ರಸ್ಥಾನ ಉಳಿಸಿಕೊಂಡ ವಿರಾಟ್‌, ಮೂರರಲ್ಲಿ ಪೂಜಾರ

ಬ್ಯಾಟ್ಸ್‌ಮನ್‌ಗಳ ಕ್ರಮಾಂಕ ಪಟ್ಟಿ
Last Updated 17 ಫೆಬ್ರುವರಿ 2019, 19:05 IST
ಅಕ್ಷರ ಗಾತ್ರ

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ, ಭಾನುವಾರ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ನೂತನ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ವಿರಾಟ್‌ ಅವರು ಒಟ್ಟು 922 ಪಾಯಿಂಟ್ಸ್‌ ಹೊಂದಿದ್ದಾರೆ. ‘ಟೆಸ್ಟ್‌ ಪರಿಣತ’ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪೂಜಾರ ಖಾತೆಯಲ್ಲಿ 881 ಪಾಯಿಂಟ್ಸ್‌ ಇವೆ.

ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಎರಡನೇ ಸ್ಥಾನದಲ್ಲಿದ್ದಾರೆ. ಅವರು 897 ಪಾಯಿಂಟ್ಸ್‌ ಹೊಂದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್, ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್‌, ಇಂಗ್ಲೆಂಡ್‌ನ ಜೋ ರೂಟ್‌ ಮತ್ತು ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರು ಕ್ರಮವಾಗಿ ನಾಲ್ಕರಿಂದ ಏಳನೇ ಸ್ಥಾನಗಳಲ್ಲಿದ್ದಾರೆ. ಭಾರತದ ರಿಷಭ್‌ ಪಂತ್‌ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 15 ಮತ್ತು 21ನೇ ಸ್ಥಾನಗಳನ್ನು ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ ಕಾಕ್‌ ಎಂಟನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಶ್ರೀಲಂಕಾದ ದಿಮುತ್‌ ಕರುಣಾರತ್ನೆ 10ನೇ ಸ್ಥಾನಕ್ಕೆ ಪ್ರಗತಿ ಕಂಡಿದ್ದಾರೆ.

ಶ್ರೀಲಂಕಾದ ಎಡಗೈ ಬ್ಯಾಟ್ಸ್‌ಮನ್‌ ಕುಶಾಲ್‌ ಪೆರೇರಾ 40ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ದಕ್ಷಿಣ ಆಫ್ರಿಕಾ ಎದುರಿನ ಅಂತಿಮ ಟೆಸ್ಟ್‌ನಲ್ಲಿ ಕುಶಾಲ್‌ ಮಿಂಚಿದ್ದರು. ಮೊದಲ ಇನಿಂಗ್ಸ್‌ನಲ್ಲಿ 51 ರನ್‌ ಗಳಿಸಿದ್ದ ಅವರು ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 153ರನ್‌ ಬಾರಿಸಿ ಲಂಕಾ ತಂಡದ ಐತಿಹಾಸಿಕ ಸರಣಿ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಅವರು ಒಟ್ಟು 58 ಸ್ಥಾನ ಪ್ರಗತಿ ಕಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್‌ ಪ್ಯಾಟ್‌ ಕಮಿನ್ಸ್‌ ಅಗ್ರಸ್ಥಾನಕ್ಕೇರಿದ್ದಾರೆ. ಅವರು ಇಂಗ್ಲೆಂಡ್‌ನ ಜೇಮ್ಸ್‌ ಆ್ಯಂಡರ್‌ಸನ್‌ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅವರನ್ನು ಹಿಂದಿಕ್ಕಿದ್ದಾರೆ.

2006ರ ನಂತರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಆಸ್ಟ್ರೇಲಿಯಾದ ಬೌಲರ್‌ ಎಂಬ ಹಿರಿಮೆಗೆ ಕಮಿನ್ಸ್‌ ಪಾತ್ರರಾಗಿದ್ದಾರೆ.

ಭಾರತದ ರವೀಂದ್ರ ಜಡೇಜ ಮತ್ತು ರವಿಚಂದ್ರನ್‌ ಅಶ್ವಿನ್‌ ಅವರು ಕ್ರಮವಾಗಿ ಐದು ಮತ್ತು ಹತ್ತನೇ ಸ್ಥಾನಗಳನ್ನು ಕಾಪಾಡಿಕೊಂಡಿದ್ದಾರೆ. ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ 16ನೇ ಸ್ಥಾನ ಹೊಂದಿದ್ದಾರೆ. ಮೊಹಮ್ಮದ್‌ ಶಮಿ ಮತ್ತು ಇಶಾಂತ್‌ ಶರ್ಮಾ ಕ್ರಮವಾಗಿ 24 ಮತ್ತು 28ನೇ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಟೆಸ್ಟ್‌ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜ ಮೂರನೇ ಸ್ಥಾನದಲ್ಲಿದ್ದಾರೆ. ಅವರು 387 ಪಾಯಿಂಟ್ಸ್‌ ಗಳಿಸಿದ್ದಾರೆ. ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌ ಅಗ್ರಸ್ಥಾನ ಹೊಂದಿದ್ದಾರೆ. ಅವರ ಖಾತೆಯಲ್ಲಿ 439 ಪಾಯಿಂಟ್ಸ್‌ ಇವೆ. ಬಾಂಗ್ಲಾದೇಶದ ಶಕೀಬ್‌ ಅಲ್‌ ಹಸನ್‌ ಎರಡನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್‌ ಅಶ್ವಿನ್‌ ಆರನೇ ಸ್ಥಾನ ಪಡೆದಿದ್ದಾರೆ.

ಟೆಸ್ಟ್‌ ತಂಡಗಳ ಪಟ್ಟಿಯಲ್ಲಿ ಭಾರತ, ಅಗ್ರಸ್ಥಾನ ಉಳಿಸಿಕೊಂಡಿದೆ. ಕೊಹ್ಲಿ ಪಡೆ 116 ಪಾಯಿಂಟ್ಸ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT