ಸೋಮವಾರ, ಜನವರಿ 27, 2020
15 °C
ಅಗ್ರಸ್ಥಾನದಲ್ಲಿ ಮುಂದುವರಿದ ವಿರಾಟ್‌ ಕೊಹ್ಲಿ

ವರ್ಷಾರಂಭದಲ್ಲಿ 110ನೇ ರ‍್ಯಾಂಕ್ ಹೊಂದಿದ್ದ ಮಾರ್ನಸ್ ಇದೀಗ 5ನೇ ಸ್ಥಾನದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿಯು ಸೋಮವಾರ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಮಾರ್ನಸ್‌ ಲಾಬುಶೇನ್‌ 5 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 786 ಅಂಕಗಳು ಇವೆ.

ನ್ಯೂಜಿಲೆಂಡ್‌ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 143 ರನ್‌ ಗಳಿಸಿದ್ದ ಲಾಬುಶೇನ್‌, ಎರಡನೇ ಇನಿಂಗ್ಗ್‌ನಲ್ಲಿ 50 ರನ್‌ ಕಲೆ ಹಾಕಿದ್ದರು. ಈ ಪಂದ್ಯಕ್ಕೂ ಮುನ್ನ 731 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್: ಈ ವರ್ಷ 1000 ರನ್ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್ ಲಾಬುಶೇನ್

2019ರ ಆರಂಭದಲ್ಲಿ 110ನೇ ಕ್ರಮಾಂಕದಲ್ಲಿದ್ದ ಮಾರ್ನಸ್‌, ಈ ವರ್ಷ ಆಡಿರುವ ಒಟ್ಟು 10 ಪಂದ್ಯಗಳ 15 ಇನಿಂಗ್ಸ್‌ಗಳಿಂದ 1,022 ರನ್‌ ಗಳಿಸಿದ್ದಾರೆ. ಹೀಗಾಗಿ 2019ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾವಿರಕ್ಕಿಂತ ಹೆಚ್ಚು ರನ್‌ ಗಳಿಸಿದ ಏಕೈಕ ಬ್ಯಾ‌ಟ್ಸ್‌ಮನ್‌ ಎನಿಸಿದ್ದಾರೆ.

ವರ್ಷಾಂತ್ಯಕ್ಕೆ ಕೊಹ್ಲಿ ನಂ. 1
ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ ಒಟ್ಟು 928 ಪಾಯಿಂಟ್ಸ್‌ ಹೊಂದಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುನ್ನ 923 ಅಂಕಗಳನ್ನು ಹೊಂದಿದ್ದರು. ಆದರೆ ಆ ಪಂದ್ಯದಲ್ಲಿ ವೈಫಲ್ಯ ಅನುಭವಿಸಿ ಇದೀಗ 12 ಅಂಕ ಕಳೆದುಕೊಂಡಿದ್ದಾರೆ. ಸ್ಮಿತ್‌ (911) ಮತ್ತು ಕೊಹ್ಲಿ ನಡುವಣ ಅಂಕಗಳ ಅಂತರ ಇದೀಗ 17ಕ್ಕೆ ಏರಿದೆ.

ಇದನ್ನೂ ಓದಿ: ಅಗ್ರಪಟ್ಟ ಕಾಪಾಡಿಕೊಂಡ ಕೊಹ್ಲಿ, 5ನೇ ಸ್ಥಾನಕ್ಕೆ ಸ್ಟಾರ್ಕ್

ನ್ಯೂಜಿಲೆಂಡ್‌–ಆಸ್ಟ್ರೇಲಿಯಾ ಎರಡನೇ ಟೆಸ್ಟ್‌ ಪಂದ್ಯವು ಡಿಸೆಂಬರ್ 26 ರಿಂದ 30ರವರೆಗೆ ನಡೆಯಲಿರುವುದರಿಂದ ವರ್ಷಾಂತ್ಯದವರೆಗೆ ಕೊಹ್ಲಿಯೇ ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ (864) ಮೂರನೇ ಸ್ಥಾನದಲ್ಲಿದ್ದಾರೆ.

ದಶಕಗಳ ಬಳಿಕ ಪಾಕಿಸ್ತಾನದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶತಕ ಗಳಿಸಿರುವ ಬಾಬರ್‌ ಅಜಂ ಮತ್ತು ಅಬಿದ್ ಅಲಿ ರ‍್ಯಾಂಕಿಂಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ದಿಟ್ಟ ಆಟಗಾರ ‘ಮಾರ್ನಸ್‌ ಲಾಬುಶೇನ್‌

ಟಿ20 ಕ್ರಿಕೆಟ್‌ನಲ್ಲಿ ನಂ.1 ಹಾಗೂ ಏಕದಿನ ಮಾದರಿಯಲ್ಲಿ ಮೂರನೇ ಸ್ಥಾನದಲ್ಲಿರುವ ಅಜಂ, ಇದೇ ಮೊದಲ ಬಾರಿಗೆ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. 9ನೇ ಕ್ರಮಾಂಕದಲ್ಲಿರುವ ಅವರ ಖಾತೆಯಲ್ಲಿ 728 ಪಾಯಿಂಟ್ಸ್‌ ಇವೆ. 

ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟರ್‌ ಎನಿದ್ ಬೇಕ್‌ವೆಲ್‌ ಬಳಿಕ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನ ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಆಟಗಾರ ಎನಿಸಿರುವ ಅಬಿದ್ ಅಲಿ, 78ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ (898), ದಕ್ಷಿಣ ಆಫ್ರಿಕಾದ ಕಗಿಸೊ ರಬಡ (839), ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್‌ (834) ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು