ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಅಚ್ಚರಿಯ ಫಲಿತಾಂಶ; ಬಾಂಗ್ಲಾಕ್ಕೆ ಸೋಲಿನ ಆಘಾತ ನೀಡಿದ ಸ್ಕಾಟ್ಲೆಂಡ್

Last Updated 17 ಅಕ್ಟೋಬರ್ 2021, 18:09 IST
ಅಕ್ಷರ ಗಾತ್ರ

ಅಲ್ ಅಮೆರತ್: ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾನುವಾರ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಪ್ರಸಕ್ತ ಸಾಲಿನ ವಿಶ್ವಕಪ್‌ನಲ್ಲಿ ಮೊದಲ ಅಚ್ಚರಿಯ ಫಲಿತಾಂಶ ದಾಖಲಾಗಿದೆ.

ಭಾನುವಾರ 'ಬಿ' ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ ಗ್ರೀವ್ಸ್ ಆಲ್‌ರೌಂಡರ್ ಆಟದ (45 ರನ್ ಹಾಗೂ 2 ವಿಕೆಟ್) ನೆರವಿನಿಂದ ಸ್ಕಾಟ್ಲೆಂಡ್ ಗೆಲುವು ದಾಖಲಿಸಿತು. ಇದರೊಂದಿಗೆ ಎರಡು ಅಂಕವನ್ನು ಕಲೆ ಹಾಕಿತು.

141 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆಗೆ ಒಳಗಾಯಿತು. ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಮರ್ಥವಾಯಿತು.

ಮುಷ್ಫಿಕುರ್ ರಹೀಂ (38), ನಾಯಕ ಮೆಹಮುದುಲ್ಲಾ (23), ಶಕೀಬ್ ಅಲ್ ಹಸನ್ (20) ಹಾಗೂ ಅಫಿಫ್ ಹುಸೇನ್ (18) ಹಾಗೂ ಮೆಹದಿ ಹಸನ್ (13*) ಹೋರಾಟವು ವ್ಯರ್ಥವೆನಿಸಿತು.

ಸ್ಕಾಟ್ಲೆಂಡ್ ಪರ ಬ್ರಾಡ್ ವೀಲ್ ಮೂರು ಹಾಗೂ ಕ್ರಿಸ್ ಗ್ರೀವ್ಸ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಈ ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ಕ್ರಿಸ್ ಗ್ರೀವ್ಸ್ (45) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಒಂಬತ್ತು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿತ್ತು.

ಒಂದು ಹಂತದಲ್ಲಿ 11.3 ಓವರ್‌ಗಳಲ್ಲಿ 53 ರನ್ನಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಸ್ಕಾಟ್ಲೆಂಡ್, ಬಾಂಗ್ಲಾದೇಶಕ್ಕೆ ಸುಲಭ ತುತ್ತಾಗಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ ಏಳನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟ ಕಟ್ಟಿದ ಕ್ರಿಸ್ ಗ್ರೀವ್ಸ್ ಹಾಗೂ ಮಾರ್ಕ್ ವ್ಯಾಟ್ (22) ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು.

28 ಎಸೆತಗಳನ್ನು ಎದುರಿಸಿದ ಗ್ರೀವ್ಸ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಇನ್ನುಳಿದಂತೆ ಓಪನರ್ ಜಾರ್ಜ್ ಮುನ್ಸೆ 29 ರನ್ ಗಳಿಸಿದರು.

ಬಾಂಗ್ಲಾ ಪರ ಮೆಹದಿ ಹಸನ್ ಮೂರು ಮತ್ತು ಮುಸ್ತಫಿಜುರ್ ರೆಹಮಾನ್ ಹಾಗೂ ಶಕೀಬ್ ಅಲ್ ಹಸನ್ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು.

ಈ ನಡುವೆ ಶ್ರೀಲಂಕಾದ ಲಸಿತ್ ಮಾಲಿಂಗ ದಾಖಲೆ ಮುರಿದ ಶಕೀಬ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (108 ವಿಕೆಟ್) ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT