ಶುಕ್ರವಾರ, ಜುಲೈ 30, 2021
28 °C
‍ಪಂದ್ಯಗಳು ನಡೆಯುವ ಸಂದರ್ಭದ ನಡವಳಿಕೆ ಬಗ್ಗೆ ಐಸಿಸಿ

ಜನಾಂಗೀಯ ದ್ವೇಷದ ಪ್ರತಿಭಟನೆಗೆ ‘ತಿಳಿವಳಿಕೆ' ಇರಲಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ತಿಂಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿವೆ. ಆ ಸಂದರ್ಭದಲ್ಲಿ ಆಟಗಾರರು ಅಮೆರಿಕದ ಜಾರ್ಜ್‌ ಫ್ಲಾಯ್ಡ್‌ ಅವರ ಮೇಲಿನ ಜನಾಂಗೀಯ ದೌರ್ಜನ್ಯವನ್ನು ಪ್ರತಿಭಟಿಸುವಾಗ ತಿಳಿವಳಿಕೆಯಿಂದ ವರ್ತಿಸಬೇಕು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಹೇಳಿದೆ.

ಅಮೆರಿಕದಲ್ಲಿ ಈಚೆಗೆ ಆಫ್ರೋ–ಅಮೆರಿಕನ್ ವ್ಯಕ್ತಿ ಫ್ಲಾಯ್ಡ್ ಪೊಲೀಸ್ ದೌರ್ಜನ್ಯದಿಂದ ಸಾವಿಗೀಡಾಗಿದ್ದರು. ಅದರಿಂದಾಗಿ ಜನಾಂಗೀಯ ದ್ವೇಷದ ವಿರುದ್ಧ ಪ್ರತಿಭಟನೆಗಳು ತೀವ್ರವಾಗಿವೆ. ಕೆಲವು ಖ್ಯಾತನಾಮ ಕ್ರಿಕೆಟಿಗರೂ ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದಾರೆ.

ಮೈದಾನದೊಳಗೆ ರಾಜಕೀಯಸಂಬಂಧಿ ವಿಷಯಗಳ ಕುರಿತು ಯಾವುದೇ ಕ್ರಿಯೆ–ಪ್ರತಿಕ್ರಿಯೆಗೆ ಇದುವರೆಗೆ ಐಸಿಸಿಯು ಅವಕಾಶ ನೀಡಿಲ್ಲ. ಹೋದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರು ಸೇನೆಯ ಲಾಂಛನವನ್ನು ತಮ್ಮ ಕೈಗವಸಿನ ಮೇಲೆ ಹಾಕಿಕೊಂಡಿದ್ದರು. ಅದನ್ನು ರಾಜಕೀಯ ಸಂಕೇತವೆಂದು ಹೇಳಿದ್ದ ಐಸಿಸಿಯು ಧೋನಿಗೆ ಎಚ್ಚರಿಕೆ ನೀಡಿತ್ತು. ನಂತರದ ಪಂದ್ಯಗಳಲ್ಲಿ ಧೋನಿ ಲಾಂಛನವನ್ನು ತೆಗೆದಿದ್ದರು.

‘ಜನಾಂಗೀಯ ತಾರತಮ್ಯದ ವಿರುದ್ಧ  ನಮ್ಮ ನಿಲುವು ಇದೆ. ಕ್ರೀಡೆಯಲ್ಲಿ ವೈವಿಧ್ಯತೆಯನ್ನು ನಾವು ಬೆಂಬಲಿಸುತ್ತೇವೆ. ಆದ್ದರಿಂದ ಜಾರ್ಜ್‌ ವಿಷಯದಲ್ಲಿ ಪ್ರತಿಭಟನೆ ನಡೆಸುವ ಆಟಗಾರರಿಗೆ ಬೆಂಬಲಿಸುತ್ತೇವೆ. ಸಮಾಜದ ಹಿತಕ್ಕಾಗಿ ಅವರಿಗೆ ವೇದಿಕೆ ಒದಗಿಸಲು ಸಿದ್ಧರಾಗಿದ್ದೇವೆ’ ಎಂದು ಐಸಿಸಿಯು ತಿಳಿಸಿದೆ.

‘ಈ ವಿಷಯದಲ್ಲಿ ಕೆಲವು ತಿಳಿವಳಿಕೆಯುಕ್ತ ನಿಬಂಧನೆಗಳನ್ನು ರೂಪಿಸುತ್ತೇವೆ.  ಪಂದ್ಯದ ಅಧಿಕಾರಿಗಳು ನಿಯಮಗಳು ಉಲ್ಲಂಘನೆಯಾಗದಂತೆ ನಿಗಾ ವಹಿಸುವರು’ ಎಂದು ಐಸಿಸಿ ತಿಳಿಸಿದೆ.

ಕಪ್ಪು ಜನಾಂಗಕ್ಕೆ ಬೆಂಬಲ ವ್ಯಕ್ತಪಡಿಸುವ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಅಭಿಯಾನ ಆರಂಭವಾಗಿದೆ. ಅದರಲ್ಲಿ ಮಂಡಿಯೂರಿ ಕುಳಿತು ಸಾಂಕೇತಿಕವಾಗಿ ಪ್ರತಿಭಟನೆ ವ್ಯಕ್ತಪಡಿಸಲಾಗುತ್ತಿದೆ. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ವೆಸ್ಟ್‌ ಇಂಡೀಸ್ ತಂಡದ ಆಟಗಾರರು ಇದೇ ರೀತಿ ಪ್ರತಿಭಟನೆ ನಡೆಸುವ ಕುರಿತು ಯೋಚಿಸುತ್ತಿದ್ದಾರೆಂದು ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

‘ವೈಯಕ್ತಿಕವಾಗಿ ನಾನು ಈ ವಿಷಯದ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದೆ. ಯಾರೂ ಸುಮ್ಮನಿರಬಾರದು. ಏಕೆಂದರೆ ಜನಾಂಗೀಯ ನಿಂದನೆ ಸಮ್ಮತವಲ್ಲ’ ಎಂದು ಇಂಗ್ಲೆಂಡ್ ತಂಡದ ಬೌಲರ್ ಜೋಫ್ರಾ ಆರ್ಚರ್ ಹೇಳಿದ್ದಾರೆ.

ಬಾರ್ಬಡೀಸ್ ಮೂಲದ ಆರ್ಚರ್ ಅವರನ್ನು ಹೋದ ನವೆಂಬರ್‌ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಕೆಲವು ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು