ಮಂಗಳವಾರ, ಫೆಬ್ರವರಿ 25, 2020
19 °C
ನಾಳೆ ಜಪಾನ್‌ ಎದುರು ಪೈಪೋಟಿ

19 ವರ್ಷದೊಳಗಿನವರ ಏಕದಿನ ವಿಶ್ವಕಪ್‌: ಭಾರತಕ್ಕೆ ಮತ್ತೊಂದು ಜಯದ ತವಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಲೂಮ್‌ಫೊಂಟೇನ್‌, ದಕ್ಷಿಣ ಆಫ್ರಿಕಾ : ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾವನ್ನು ನಿರಾಯಾಸವಾಗಿ ಮಣಿಸಿ ವಿಶ್ವಾಸದಿಂದ ಪುಟಿಯುತ್ತಿರುವ ಭಾರತ ತಂಡ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ನಲ್ಲಿ ಮತ್ತೊಂದು ಗೆಲುವಿನ ತವಕದಲ್ಲಿದೆ.

ಮಂಗಳವಾರ ನಡೆಯುವ ‘ಎ’ ಗುಂಪಿನ ಹಣಾಹಣಿಯಲ್ಲಿ ಜಪಾನ್‌ ವಿರುದ್ಧ ಸೆಣಸಲಿರುವ ಪ್ರಿಯಂ ಗರ್ಗ್‌ ಪಡೆ ಸುಲಭ ಜಯದ ನಿರೀಕ್ಷೆಯಲ್ಲಿದೆ.

ಟೂರ್ನಿಯಲ್ಲಿ ಭಾರತ ನಾಲ್ಕು ಪ್ರಶಸ್ತಿ ಗೆದ್ದಿದ್ದರೆ,  ಜಪಾನ್‌ ಎರಡನೇ ಪಂದ್ಯ ಆಡುತ್ತಿದೆ. ನ್ಯೂಜಿಲೆಂಡ್‌ ಎದುರಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.  ಇದರಿಂದಾಗಿ ಈ ತಂಡಕ್ಕೆ ಒಂದು ಪಾಯಿಂಟ್‌ ಸಿಕ್ಕಿತ್ತು.

‘ಎ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಹೊಂದಿರುವ ಭಾರತ, ಈ ಪಂದ್ಯದಲ್ಲಿ ಗೆದ್ದು ನಾಲ್ಕರ ಘಟ್ಟ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ.

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಅರ್ಧಶತಕಗಳನ್ನು ಬಾರಿಸಿದ್ದ ಯಶಸ್ವಿ ಜೈಸ್ವಾಲ್‌, ಪ್ರಿಯಂ ಗರ್ಗ್‌ ಮತ್ತು ಧ್ರುವ ಜುರೆಲ್‌ ಅವರು ಭಾರತ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಆಲ್‌ರೌಂಡರ್‌ಗಳಾದ ಸಿದ್ದೇಶ್‌ ವೀರ್‌ ಮತ್ತು ಶುಭಾಂಗ್‌ ಹೆಗ್ಡೆ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ.

ಆರಂಭ ಆಟಗಾರ ದಿವ್ಯಾಂಶ್‌ ಸಕ್ಸೇನಾ ಮತ್ತು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ತಿಲಕ್‌ ವರ್ಮಾ ಅವರೂ ಉತ್ತಮ ಲಯದಲ್ಲಿದ್ದು, ಜಪಾನ್‌ ಬೌಲರ್‌ಗಳ ಮೇಲೆ ಸವಾರಿ ಮಾಡುವ ಸಾಧ್ಯತೆ ಇದೆ.

ಎಡಗೈ ವೇಗದ ಬೌಲರ್‌ಗಳಾದ ಆಕಾಶ್‌ ಸಿಂಗ್ ಮತ್ತು ಕಾರ್ತಿಕ್‌ ತ್ಯಾಗಿ, ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಅವರು ಬೌಲಿಂಗ್‌ನಲ್ಲಿ ಭಾರತದ ಬಲ ಎನಿಸಿದ್ದಾರೆ. ಇವರು ಜಪಾನ್‌ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಟ್ಟಿಹಾಕುವ ಹುಮ್ಮಸ್ಸಿನಲ್ಲಿದ್ದಾರೆ.

‘ಕ್ರಿಕೆಟ್‌ ಕೂಸು’ ಜಪಾನ್‌ ತಂಡಕ್ಕೆ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವವಿಲ್ಲ. ನ್ಯೂಜಿಲೆಂಡ್‌ ಎದುರಿನ ಹಣಾಹಣಿಯಲ್ಲೇ ಇದು ಸಾಬೀತಾಗಿದೆ. ಹೀಗಿದ್ದರೂ ಪ್ರಿಯಂ ಪಡೆ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಪಂದ್ಯದ ಆರಂಭ: ಮಧ್ಯಾಹ್ನ 1.30.

**
ಆಸ್ಟ್ರೇಲಿಯಾಕ್ಕೆ ಸುಲಭ ಜಯ
: ‘ವಜ್ರಗಳ ನಗರಿ’ ಕಿಂಬರ್ಲಿಯಲ್ಲಿ ಸೋಮವಾರ ನಡೆದ ನೈಜೀರಿಯಾ ಎದುರಿನ ‘ಬಿ’ ಗುಂಪಿನ ಪೈಪೋಟಿಯಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.

62ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 7.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ ಮುಟ್ಟಿತು. ಆಸ್ಟ್ರೇಲಿಯಾ‌ದ ತನ್ವೀರ್‌ ಸಂಗ 5 ವಿಕೆಟ್‌ ಪಡೆದು ಗಮನ ಸೆಳೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು