ನವದೆಹಲಿ: ಬಾರ್ಡರ್– ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗುತ್ತಿರುವ ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಬುಧವಾರ ನೆಟ್ಸ್‌ನಲ್ಲಿ ಹೆಚ್ಚುವರಿ ಅವಧಿಯ ಅಭ್ಯಾಸ ನಡೆಸಿದರು.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ. ರೋಹಿತ್ ಶರ್ಮ ನೇತೃತ್ವದ ತಂಡ ಬುಧವಾರ ಪೂರ್ಣ ಅವಧಿಯ ಅಭ್ಯಾಸದಲ್ಲಿ ಪಾಲ್ಗೊಂಡಿತು.
ಕೊಹ್ಲಿ ಅವರು ತಂಡದ ಸಹ ಆಟಗಾರರು ಅಂಗಳಕ್ಕೆ ಬರುವ ಅರ್ಧ ಗಂಟೆ ಮುಂಚಿತವಾಗಿಯೇ ಕ್ರೀಡಾಂಗಣಕ್ಕೆ ಬಂದಿದ್ದಾರೆ. ನೆಟ್ಸ್‌ನಲ್ಲಿ ಅಧಿಕ ಸಮಯ ಕಳೆಯುವುದು ಅವರ ಉದ್ದೇಶವಾಗಿತ್ತು.
ಕೆಲಹೊತ್ತು ವೇಗದ ಬೌಲರ್‌ಗಳನ್ನು ಎದುರಿಸಿದ ಬಳಿಕ ಸ್ಪಿನ್ನರ್‌ಗಳಿಗೆ ಬೌಲ್ ಮಾಡುವಂತೆ ಸೂಚಿಸಿದರು.
ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಅಲ್ಲದೆ ಪುಲಕಿತ್ ನಾರಂಗ್ ಮತ್ತು ಹೃತಿಕ್ ಶೊಕೀನ್ ಅವರು ತುಂಬಾ ಹೊತ್ತು ಕೊಹ್ಲಿಗೆ ಬೌಲ್ ಮಾಡಿದರು.
ನಾಗಪುರದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ, ಆಸ್ಟ್ರೇಲಿಯಾದ ಸ್ಪಿನ್ನರ್‌ಗಳ ಎದುರು ತಡಬಡಾಯಿಸಿದ್ದರು. ಟಾಡ್ ಮರ್ಫಿ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಇಲ್ಲಿನ ಪಿಚ್ ಕೂಡಾ ಸ್ಪಿನ್ನರ್‌ಗಳಿಗೆ ನೆರವು ನೀಡುವ ಸಾಧ್ಯತೆಯಿದೆ.
ಅಯ್ಯರ್‌ಗೆ ಅವಕಾಶ ಸಾಧ್ಯತೆ: ‘ಶ್ರೇಯಸ್ ಅಯ್ಯರ್ ಅವರು ಪೂರ್ಣ ಫಿಟ್‌ನೆಸ್ ಹೊಂದಿದರೆ ಅಂತಿಮ ಇಲೆವೆನ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ’ ಎಂದು ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
‘ಬುಧವಾರ ಅವರು ಕೆಲಹೊತ್ತು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಗುರುವಾರದ ಅಭ್ಯಾಸದ ಬಳಿಕ ಅವರ ಆಯ್ಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.