ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಭಾರತದ ಕೈಯಲ್ಲಿ ಆಸ್ಟ್ರೇಲಿಯಾ ಭವಿಷ್ಯ

ಮಾರ್ಷ್ ಬಳಗಕ್ಕೆ ಮಾಡು–ಮಡಿ ಪಂದ್ಯ ಇಂದು
Published 23 ಜೂನ್ 2024, 23:30 IST
Last Updated 23 ಜೂನ್ 2024, 23:30 IST
ಅಕ್ಷರ ಗಾತ್ರ

ಗ್ರಾಸ್ ಐಲೆಟ್: ಅಫ್ಗಾನಿಸ್ತಾನ ಎದುರು ಸೋಲಿನ ಆಘಾತ ಅನುಭವಿಸಿರುವ ಆಸ್ಟ್ರೇಲಿಯಾ ತಂಡವು ಸೋಮವಾರ ಸೂಪರ್ 8ರ ಹಂತದಲ್ಲಿ ಭಾರತ ತಂಡವನ್ನು ಎದುರಿಸಲಿದೆ. 

ಸೆಮಿಫೈನಲ್‌ ಪ್ರವೇಶಿಸಲು ಮಿಚೆಲ್ ಮಾರ್ಷ್ ತಂಡಕ್ಕೆ ಭಾರತದ ಎದುರು ಉತ್ತಮ ರನ್‌ರೇಟ್‌ನೊಂದಿಗೆ ಜಯಿಸುವ ಒತ್ತಡವಿದೆ.  

ಹೋದ ವರ್ಷ ಅಹಮದಾಬಾದಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ ಸೋಲಿನ ಕಹಿ ಮರೆತಿರುವುದಾಗಿ ಭಾರತ ತಂಡದ ಆಟಗಾರರು, ನೆರವು ಸಿಬ್ಬಂದಿ ಹೇಳುತ್ತಲೇ ಇರಬಹುದು. ಆದರೂ ಅವರೆಲ್ಲರ ಮನದ ಮೂಲೆಯಲ್ಲಿ ಈಗ ಮುಯ್ಯಿ ತೀರಿಸಿಕೊಳ್ಳುವ ವಿಚಾರ ಕುಡಿಯೊಡೆದಿದ್ದರೆ ಅಚ್ಚರಿಯೇನಿಲ್ಲ. ಭಾರತ ಗೆದ್ದರೆ ಆಸ್ಟ್ರೇಲಿಯಾ ತಂಡದ ಸೆಮಿಫೈನಲ್ ಕನಸು ಭಗ್ನವಾಗುವುದು ಬಹುತೇಕ ಖಚಿತ. 

ಇಷ್ಟೇ ಅಲ್ಲ. ಈ ಟೂರ್ನಿಯಲ್ಲಿ ಇದುವರೆಗೂ ಭಾರತ ತಂಡವು ಅಜೇಯವಾಗುಳಿದಿದೆ. ಸೂಪರ್ 8ರಲ್ಲಿ ನಾಲ್ಕು ಅಂಕ ಗಳಿಸಿದೆ. ಇದರೊಂದಿಗೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ.

ಬಾಂಗ್ಲಾ ಎದುರು ನಡೆದಿದ್ದ ಕಳೆದ ಪಂದ್ಯದಲ್ಲಿ ಭಾರತದ  ಏಳು ಬ್ಯಾಟರ್‌ಗಳಲ್ಲಿ ನಾಲ್ವರು 150ರ ಸ್ಟ್ರೈಕ್‌ರೇಟ್‌ ನಲ್ಲಿ ರನ್ ಗಳಿಸಿದ್ದರು. ಆದರೆ ವಿರಾಟ್ 132.14ರ ಸ್ಟ್ರೈಕ್‌ರೇಟ್‌ನಲ್ಲಿ ಆಡಿದ್ದರು. ಕೊಹ್ಲಿ ಏನಾದರೂ ಆಸ್ಟ್ರೇಲಿಯಾ ಎದುರು ಪುಟಿದೆದ್ದರೆ ಭಾರತದ ಬ್ಯಾಟಿಂಗ್ ಬಲ ಹೆಚ್ಚಲಿದೆ.

ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮಿಂಚಿನ ಅರ್ಧಸತಕ ಹೊಡೆದಿದ್ದರು. ರಿಷಭ್ ಪಂತ್,  ಶಿವಂ ದುಬೆ ಲಯಕ್ಕೆ ಮರಳಿದ್ದಾರೆ.  

ಬೌಲಿಂಗ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಇದುವರೆಗೆ ಅದ್ಭುತವಾಗಿ ಆಡಿದ್ದಾರೆ. ಐದು ಪಂದ್ಯಗಳಲ್ಲಿ ಹತ್ತು ವಿಕೆಟ್‌ಗಳನ್ನು ಗಳಿಸಿದ್ದಾರೆ. 3.42ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.  6.50ರ ಸರಾಸರಿ ಹಾಗೂ 11.4ರ ಸ್ಟ್ರೈಕ್‌ ರೇಟ್ ಕೂಡ ಅವರದ್ದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿಯೇ ಇಂತಹ ಸಾಧನೆ ಮೂಡಿಬರುವುದು ಕಷ್ಟಸಾಧ್ಯವಾಗಿರುವ ಇಂದಿನ ದಿನಗಳಲ್ಲಿ ಬೂಮ್ರಾ ಟಿ20 ಮಾದರಿಯಲ್ಲಿ ಮಾಡಿದ್ದಾರೆ. 

ಆಸ್ಟ್ರೇಲಿಯಾದ ಸ್ಪಿನ್ನರ್ ಆ್ಯಡಂ ಜಂಪಾ 13 ವಿಕೆಟ್ ಗಳಿಸಿದ್ಧಾರೆ. 6.08ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.  ಪ್ಯಾಟ್ ಕಮಿನ್ಸ್ ಎರಡು ಹ್ಯಾಟ್ರಿಕ್ ಸಾಧಿಸಿದ್ದಾರೆ.ಜೋಶ್ ಹ್ಯಾಜಲ್‌ವುಡ್ ಕೂಡ ಪರಿಣಾಮಕಾರಿಯಾಗಬಲ್ಲರು. 

ಬ್ಯಾಟಿಂಗ್‌ನಲ್ಲಿ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್ ತಮ್ಮ ನೈಜ ಆಟಕ್ಕೆ ಮರಳಬೇಕಿದೆ. ಮ್ಯಾಕ್ಸ್‌ವೆಲ್ ಲಯಕ್ಕೆ ಮರಳಿದ್ದಾರೆ.  ಭಾರತದ ಬೂಮ್ರಾ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಎದುರಿಸುವುದು ಬ್ಯಾಟರ್‌ಗಳ ಮುಂದಿರುವ ಪ್ರಮುಖ ಸವಾಲಾಗಿದೆ.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ವಿರಾಟ್ ಕೊಹ್ಲಿ ರಿಷಭ್ ಪಂತ್ (ವಿಕೆಟ್‌ಕೀಪರ್) ಸೂರ್ಯಕುಮಾರ್ ಯಾದವ್ ಹಾರ್ದಿಕ್ ಪಾಂಡ್ಯ ಶಿವಂ ದುಬೆ ರವೀಂದ್ರ ಜಡೇಜ ಅಕ್ಷರ್ ಪಟೇಲ್ ಜಸ್‌ಪ್ರೀತ್ ಬೂಮ್ರಾ ಕುಲದೀಪ್ ಯಾದವ್ ಅರ್ಷದೀಪ್ ಸಿಂಗ್.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ) ಟ್ರಾವಿಸ್ ಹೆಡ್ ಡೇವಿಡ್ ವಾರ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾರ್ಕಸ್ ಸ್ಟೋಯಿನಿಸ್ ಟಿಮ್ ಡೇವಿಡ್ ಮ್ಯಾಥ್ಯೂ ವೇಡ್ (ವಿಕೆಟ್‌ಕೀಪರ್) ಪ್ಯಾಟ್ ಕಮಿನ್ಸ್ ಆಷ್ಟನ್ ಆಗರ್ ಆ್ಯಡಂ ಜಂಪಾ ಜೋಶ್ ಹ್ಯಾಜಲ್‌ವುಡ್.

ಪಂದ್ಯ ಆರಂಭ: ರಾತ್ರಿ 8 ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಡಿಡಿ ಸ್ಪೋರ್ಟ್ಸ್ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT