ಶನಿವಾರ, ಜನವರಿ 23, 2021
19 °C

ರಿಷಭ್ ಪಂತ್‌ಗೆ ಗಾಯ; ಬದಲಿ ಆಟಗಾರ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸಿಡ್ನಿ: ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಎಡ ಮೊಣಕೈಗೆ ಗಾಯ ಮಾಡಿಕೊಂಡಿರುವ ಭಾರತೀಯ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಹೆಚ್ಚುವರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಆಸ್ಟ್ರೇಲಿಯಾ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಗಾಯ ಮಾಡಿಕೊಂಡಿರುವ ಪಂತ್ ಅವರನ್ನು ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬಿಸಿಸಿಐ ಟ್ವೀಟ್‌ ಮೂಲಕ ತಿಳಿಸಿದೆ.

ಐದನೇ ವಿಕೆಟ್‌ಗೆ ಚೇತೇಶ್ವರ ಪೂಜಾರ ಜೊತೆಗೆ 53 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿರುವ ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಬಳಿಕ 36 ರನ್ ಗಳಿಸಿದ್ದ ಪಂತ್, ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ಡೇವಿಡ್ ವಾರ್ನರ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು.

ಪ್ಯಾಟ್ ಕಮಿನ್ಸ್ ದಾಳಿಯಲ್ಲಿ ಎಡ ಮೊಣಕೈಗೆ ಗಾಯ ಮಾಡಿಕೊಂಡ ರಿಷಭ್ ಪಂತ್, ನೋವು ಶಮನ ಮಾಡುವ ಟ್ಯಾಬ್ಲೆಟ್ ತೆಗೆದುಕೊಂಡು ಬ್ಯಾಟಿಂಗ್ ಮುಂದುವರಿಸಿದ್ದರು. ಪಂತ್ ಅಲಭ್ಯತೆಯಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬದಲಿ ಆಟಗಾರ ವೃಧಿಮಾನ್ ಸಹ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: 

ಬದಲಿ ವಿಕೆಟ್ ಕೀಪರ್‌ಗೆ ಬ್ಯಾಟಿಂಗ್ ಮಾಡಲು ಸಾಧ್ಯವೇ?
1980ರಿಂದ 2017ನೇ ಇಸವಿಯ ವರೆಗೂ ಗಾಯಗೊಂಡ ಸಂದರ್ಭದಲ್ಲಿ ಬದಲಿ ಆಟಗಾರನಿಗೆ ವಿಕೆಟ್ ಕೀಪಿಂಗ್ ಮಾಡುವ ಅನುಮತಿ ಇರಲಿಲ್ಲ. ಆದರೆ ಮೂರು ವರ್ಷಗಳ ಹಿಂದೆಯಷ್ಟೇ ಐಸಿಸಿ ನಿಯಮವನ್ನು ಬದಲಾಯಿಸಿತ್ತು.

ಎಲ್ಲ ಬದಲಿ ಆಟಗಾರರಂತೆ ರಿಷಭ್ ಪಂತ್ ಜಾಗದಲ್ಲಿ ವೃದ್ಧಿಮಾನ್ ಸಹಾಗೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಹಾಗಾಗಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಂತ್ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿಯುವರೇ ಎಂಬುದನ್ನು ಕಾದು ನೋಡಬೇಕಿದೆ.

2019ರಲ್ಲಿ ಪರಿಚಯಿಸಲಾಗಿರುವ ಕಂಕಷನ್ ನಿಯದನ್ವಯ ಚೆಂಡು ತಲೆಗೆ ಬಡಿದ ಸಂದರ್ಭದಲ್ಲಿ ಮಾತ್ರ ಬದಲಿ ಆಟಗಾರನಿಗೆ ಬ್ಯಾಟಿಂಗ್, ಬೌಲಿಂಗ್ ಅಥವಾ ತಂಡದ ನಾಯಕನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: 

ವಿಕೆಟ್ ಕೀಪರ್‌ಗೆ ಗಾಯವಾದಾಗ ಬದಲಿ ಆಟಗಾರ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಬಹುದಾಗಿದೆ. ಆದರೆ ದುರುಪಯೋಗವನ್ನು ತಡೆಯಲು ಅಂಪೈರ್‌ಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ಇಲ್ಲಿ ಬದಲಿ ಆಟಗಾರ ಬ್ಯಾಟಿಂಗ್, ಬೌಲಿಂಗ್ ಅಥವಾ ನಾಯಕನಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

ಇಲ್ಲಿ ಆಸಕ್ತಿದಾಯಕ ವಿಷಯವೆಂಬಂತೆ ಈ ಹೊಸ ನಿಯಮದ ಲಾಭ ಪಡೆದ ಮೊದಲ ತಂಡ ಕೂಡಾ ಭಾರತ ಆಗಿದೆ. 2018ನೇ ಇಸವಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಗಾಯಾಳು ಪಾರ್ಥಿವ್ ಪಟೇಲ್ ಬದಲಿಗೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು