ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS | ಎರಡನೇ ಏಕದಿನ ಪಂದ್ಯ ಇಂದು: ಒತ್ತಡದಲ್ಲಿ ವಿರಾಟ್ ಬಳಗ

Last Updated 28 ನವೆಂಬರ್ 2020, 20:07 IST
ಅಕ್ಷರ ಗಾತ್ರ

ಸಿಡ್ನಿ: ಕೊರೊನಾ ಕಾಲಘಟ್ಟದ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಜಯಿಸುವ ಆಸೆಯು ಭಾನುವಾರ ಕೈಗೂಡಿದರೆ ಆಸ್ಟ್ರೇಲಿಯಾ ಎದುರಿನ ಸರಣಿ ಜಯದ ಕನಸು ಜೀವಂತವಾಗುಳಿಯಲಿದೆ.

ಶುಕ್ರವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್, ಸ್ಟೀವನ್ ಸ್ಮಿತ್ ಶತಕಗಳು ಮತ್ತು ಡೇವಿಡ್ ವಾರ್ನರ್ ಅರ್ಧಶತಕದ ಭರಾಟೆಯಲ್ಲಿ ಭಾರತ ತಂಡವು ಸೋಲಿನ ಕಹಿ ಅನುಭವಿಸಿತ್ತು.

374 ರನ್‌ಗಳ ಗುರಿಯ ಎದುರು ದೊಡ್ಡ ಅಂತರದಿಂದ ಸೋಲುವ ಆತಂಕವನ್ನೂ ವಿರಾಟ್ ಕೊಹ್ಲಿ ಬಳಗ ಎದುರಿಸಿತ್ತು. ಆದರೆ ಶಿಖರ್ ಧವನ ಮತ್ತು ಹಾರ್ದಿಕ್ ಪಾಂಡ್ಯ ಅವರ ಮಿಂಚಿನ ಆಟ ಗೌರವ ಉಳಿಸಿತ್ತು. ತಂಡವು ಕೇವಲ 66 ರನ್‌ಗಳ ಅಂತರದಿಂದ ಪರಾಭವಗೊಂಡಿತ್ತು.

ಬೌಲರ್‌ಗಳ ಮತ್ತು ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯವು ಭಾರತದ ಸೋಲಿಗೆ ಕಾರಣವಾಗಿತ್ತು. ಮೊಹಮ್ಮದ್ ಶಮಿ ಮೂರು ವಿಕೆಟ್ ಗಳಿಸಿದ್ದರು. ಆದರೆ, ಉಳಿದವರಿಂದ ನಿರೀಕ್ಷಿತ ಆಟ ಮೂಡಿ ಬರಲಿಲ್ಲ. ಜೊತೆಗೆ ಆರನೇ ಬೌಲರ್‌ ಕೊರತೆಯೂ ಕಾಡಿತು. ಹೋದ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಅವರ ಬೆನ್ನಿನ ಗಾಯದ ಕಾರಣ ಬೌಲಿಂಗ್ ಮಾಡಲು ಇನ್ನೂ ಅನುಮತಿ ಸಿಕ್ಕಿಲ್ಲ. ಆದ್ದರಿಂದ ಇಲ್ಲಿಯೂ ಅವರು ಬೌಲಿಂಗ್ ಮಾಡುವುದು ಸಂಶಯ. ಆದರೆ, ಬ್ಯಾಟಿಂಗ್‌ನಲ್ಲಿ ಅವರು ಉತ್ತಮ ಕಾಣಿಕೆ ನೀಡಿದ್ದಾರೆ. ಅಬ್ಬರದ 90 ರನ್‌ಗಳನ್ನು ಹೊಡೆದು ಮಿಂಚಿದ್ದಾರೆ.

ಶಿಖರ್ ಧವನ್ –ಎಎಫ್‌ಪಿ ಚಿತ್ರ

ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ನಾಯಕ ವಿರಾಟ್ ತಮ್ಮ ನೈಜ ಆಟಕ್ಕೆ ಮರಳಿದರೆ ಬ್ಯಾಟಿಂಗ್‌ನ ಚಿಂತೆ ದೂರವಾಗುತ್ತದೆ. ಆಲ್‌ರೌಂಡರ್ ರವೀಂದ್ರ ಜಡೇಜ ತಮ್ಮ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ನಲ್ಲಿಯೂ ಮಿಂಚಿದರೆ ತಂಡದ ಬಲ ಹೆಚ್ಚುತ್ತದೆ. ಶಮಿ, ಬೂಮ್ರಾ, ನವದೀಪ್ ಸೈನಿ ಮತ್ತು ಯಜುವೇಂದ್ರ ಚಾಹಲ್ ವಿಕೆಟ್ ಪಡೆಯದಿದ್ದರೂ ರನ್‌ ಬಿಟ್ಟುಕೊಡದಿದ್ದರೆ ಸಾಕು. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಆ್ಯಡಂ ಜಂಪಾ ಅವರು ಭಾರತ ಬಳಗದಲ್ಲಿ ಜೊತೆಯಾಟಗಳು ಹೆಚ್ಚು ಬೆಳೆಯದಂತೆ ನೋಡಿಕೊಂಡಿದ್ದರು. ಅದೇ ಕೆಲಸವನ್ನು ವಿರಾಟ್ ಪಡೆಯ ಬೌಲರ್‌ಗಳು ಮಾಡಿದರೆ ಗೆಲುವು ಸುಲಭವಾಗುತ್ತದೆ. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಬಹುದು. ಕೊನೆಯ ಪಂದ್ಯವು ರೋಚಕವೂ ಆಗಬಹುದು.

ಭಾರತ ತಂಡಕ್ಕೆ ದಂಡ
ದುಬೈ: ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡವು ನಿಗದಿಯ ಓವರ್‌ಗಳನ್ನು ನಿರ್ಧರಿತ ಸಮಯದಲ್ಲಿ ಪೂರೈಸದ ಕಾರಣ ದಂಡ ವಿಧಿಸಲಾಗಿದೆ.

ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬೌಲರ್‌ಗಳು 50 ಓವರ್‌ಗಳನ್ನು ಬೌಲಿಂಗ್ ಮಾಡಲು ನಾಲ್ಕು ಗಂಟೆ, ಆರು ನಿಮಿಷಗಳನ್ನು ತೆಗೆದುಕೊಂಡಿದ್ದರು. ಪಂದ್ಯದ ರೆಫರಿ ಡೇವಿಡ್ ಬೂನ್ ಐಸಿಸಿಗೆ ಈ ಕುರಿತು ವರದಿ ಸಲ್ಲಿಸಿದ್ದರು.

’ಐಸಿಸಿಯ 2.22 ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಕನಿಷ್ಠ ಸಂಖ್ಯೆಯ ಓವರ್‌ಗಳನ್ನೂ ಬೌಲಿಂಗ್ ಮಾಡಿರದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಪಂದ್ಯ ಶುಲ್ಕದ ಶೇ 20ರಷ್ಟನ್ನು ದಂಡವಾಗಿ ಪಾವತಿಸಬೇಕು‘ ಎಂದು ನಾಯಕ ವಿರಾಟ್‌ ಕೊಹ್ಲಿಗೆ ಸೂಚಿಸಲಾಗಿದೆ.

’ಏಕದಿನ ಕ್ರಿಕೆಟ್‌ನಲ್ಲಿ ಇದು ನಾನು ಎದುರಿಸಿದ ಸುದೀರ್ಘ ಬೌಲಿಂಗ್ ಎನಿಸುತ್ತದೆ. ಬಹುಶಃ ಭಾರತ ತಂಡವು ನಿಗದಿಯ ಅವಧಿಗಿಂತ 45 ನಿಮಿಷ ಹೆಚ್ಚು ತೆಗೆದುಕೊಂಡಿದೆ‘ ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್‌ಮನ್‌ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT