ಸೋಮವಾರ, ಡಿಸೆಂಬರ್ 9, 2019
20 °C
ಈಡನ್ ಗಾರ್ಡನ್‌ನಲ್ಲಿ ಅಲ್ಪಮೊತ್ತಕ್ಕೆ ಕುಸಿದ ಬಾಂಗ್ಲಾದೇಶ; ಮಿಂಚಿದ ವಿರಾಟ್, ಪೂಜಾರ

IND vs BAN | ಪಿಂಕ್‌ ಬಾಲ್‌ ಟೆಸ್ಟ್; ಇಶಾಂತ್ ಬೆಸ್ಟ್

Published:
Updated:

ಕೋಲ್ಕತ್ತ: ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಶುಕ್ರವಾರ ಮಧ್ಯಾಹ್ನ ಮೊಟ್ಟಮೊದಲ ಬಾರಿಗೆ ಪಿಂಕ್ ಬಾಲ್ ಆಟ ಶುರುವಾಯಿತು. ಭಾರತದ ನೆಲದಲ್ಲಿ ಇದೇ ಮೊದಲ ಬಾರಿಗೆ ನಡೆದ ಪ್ರಥಮ ಹಗಲು–ರಾತ್ರಿ ಪಂದ್ಯದಲ್ಲಿ ಹೊನಲು ಬೆಳಕಿನ ದೀಪಗಳು ಬೆಳಗುವ ಮುನ್ನವೇ ಇಶಾಂತ್ ಶರ್ಮಾ ಪ್ರಜ್ವಲಿಸಿದರು. ಬಾಂಗ್ಲಾದೇಶದ ಪಾಳಯದಲ್ಲಿ ಕತ್ತಲು ಕವಿಯಿತು.

ಟಾಸ್‌ ಗೆದ್ದ ಬಾಂಗ್ಲಾದೇಶ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಇಶಾಂತ್ ಶರ್ಮಾ (12–4–22–5) 12 ವರ್ಷಗಳ ನಂತರ ವಿಕೆಟ್ ಪಂಚಗುಚ್ಛದ ಸಾಧನೆ ಮಾಡಿದರು. ಇದರಿಂದಾಗಿ ಬಾಂಗ್ಲಾ ತಂಡವು 30.3 ಓವರ್‌ಗಳಲ್ಲಿ 106 ರನ್ ಗಳಿಸಿ ಆಲೌಟ್ ಆಯಿತು.

ಹೊನಲು ಬೆಳಕಿನಲ್ಲಿ ಆರಂಭವಾದ ಭಾರತದ ಇನಿಂಗ್ಸ್‌ಗೆ ಬೌಂಡರಿ ಮೂಲಕ  ಆರಂಭ ಕೊಟ್ಟವರು ಮಯಂಕ್ ಅಗರವಾಲ್. ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಅವರು ಇಲ್ಲಿಯೂ ಆತ್ಮವಿಶ್ವಾಸದಿಂದ ಆಟ ಆರಂಭಿಸಿದರು. ಆದರೆ ಕೇವಲ 14 ರನ್‌ ಗಳಿಸಿದ ಅವರು ಔಟಾದರು. ರೋಹಿತ್ ಕೂಡ 21 ರನ್ ಮಾತ್ರ ಗಳಿಸಿದರು.

ಈ ಹಂತದಲ್ಲಿ ಚೇತೇಶ್ವರ್ ಪೂಜಾರ (55;105 ಎಸೆತ, 8ಬೌಂಡರಿ) ಮತ್ತು ನಾಯಕ ವಿರಾಟ್ ಕೊಹ್ಲಿ (ಬ್ಯಾಟಿಂಗ್‌ 59; 93ಎ, 8ಬೌಂ) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಗಳಿಸಿದರು. ಇದರಿಂದಾಗಿ ಭಾರತ ತಂಡವು ದಿನದಾಟದ ಅಂತ್ಯಕ್ಕೆ 46 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 174 ರನ್ ಗಳಿಸಿತು. ಅಜಿಂಕ್ಯ ರಹಾನೆ (ಬ್ಯಾಟಿಂಗ್ 23) ಕ್ರೀಸ್‌ನಲ್ಲಿದ್ದಾರೆ.

ಇಶಾಂತ್ ದಾಖಲೆ: ದೆಹಲಿಯ ವೇಗಿ ಇಶಾಂತ್ ಶರ್ಮಾ ಬರೋಬ್ಬರಿ 12 ವರ್ಷಗಳ ನಂತರ ಐದು ವಿಕೆಟ್‌ಗಳ ಗೊಂಚಲನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. 96ನೇ ಟೆಸ್ಟ್ ಪಂದ್ಯ ಆಡುತ್ತಿರುವ ಅವರು ತಮ್ಮ ವೃತ್ತಿ ಜೀವನದಲ್ಲಿ 10ನೇ ಸಲ ಈ ಸಾಧನೆ ಮಾಡಿದರು. 

ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಇಮ್ರುಲ್ ಕಯಸ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿ ಬೇಟೆ ಆರಂಭಿಸಿದರು. ಪ್ರಮುಖ ‌ಬ್ಯಾಟ್ಸ್‌ಮನ್ ಮುಷ್ಫಿಕುರ್ ರಹೀಂ, ಮಹಮುದುಲ್ಲಾ, ನಯೀಮ್ ಹಸನ್, ಇಬಾದತ್ ಹಸನ್ ಮತ್ತು ಮೆಹದಿ ಹಸನ್ ಅವರ ವಿಕೆಟ್‌ಗಳನ್ನು ಇಶಾಂತ್ ಕಬಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡುತ್ತಿದ್ದ ಲಿಟನ್ ದಾಸ್ (24 ರನ್) ಗಾಯಗೊಂಡು ಪೆವಿಲಿಯನ್‌ಗೆ ಮರಳಿದರು. 21ನೇ ಓವರ್‌ನಲ್ಲಿ ಮೊಹಮ್ಮದ್ ಶಮಿ ಹಾಕಿದ ಬೌನ್ಸರ್‌ ಲಿಟನ್ ಹೆಲ್ಮೆಟ್‌ಗೆ ಬಡಿಯಿತು.  ಇದರಿಂದಾಗಿ ಅವರನ್ನು ವಿಶ್ರಾಂತಿ ಪಡೆಯಲು ಕಳುಹಿಸಲಾಯಿತು. ಅವರ ಬದಲಿಗೆ ಮೆಹದಿ ಹಸನ್ ಬ್ಯಾಟಿಂಗ್ ಮಾಡಿದರು. ಈ ಮೂಲಕ ‘ಬದಲೀ ಬ್ಯಾಟ್ಸ್‌ಮನ್’ ನಿಯಮದ ಲಾಭವನ್ನು ಪ್ರಥಮ ಬಾರಿಗೆ ಬಾಂಗ್ಲಾದೇಶ ಪಡೆಯಿತು. 

ಇಶಾಂತ್‌ಗೆ ಉತ್ತಮ ಜೊತೆ ನೀಡಿದ ಉಮೇಶ್ ಯಾದವ್ ಮೂರು, ಶಮಿ ಎರಡು ವಿಕೆಟ್ ಗಳಿಸಿದರು. ಒಂದು ಇನಿಂಗ್ಸ್‌ನ ಎಲ್ಲ ವಿಕೆಟ್‌ಗಳನ್ನು ಮಧ್ಯಮವೇಗಿಗಳೇ ಹಂಚಿಕೊಂಡ ದಾಖಲೆಯೂ ರಚನೆಯಾಯಿತು.

ಕೊಹ್ಲಿ ಐದು ಸಾವಿರ: ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 24ನೇ ಅರ್ಧಶತಕ ಗಳಿಸಿದರು. ಇದಲ್ಲದೇ ಅತಿ ವೇಗವಾಗಿ ಐದು ಸಾವಿರ ರನ್ ಗಳಿಸಿದ ನಾಯಕನೆಂಬ ಹೆಗ್ಗಳಿಕೆಯೂ ಅವರದ್ದಾಯಿತು. 86 ಇನಿಂಗ್ಸ್‌ಗಳಲ್ಲಿ ಅವರು ಈ ದಾಖಲೆ ಬರೆದರು. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರು 97 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು ಇದುವರೆಗಿನ ದಾಖಲೆಯಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು