ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ಎದುರು ಗಿಲ್ ವಿಫಲ; ಜೈಸ್ವಾಲ್ 100 ಪಟ್ಟು ಉತ್ತಮ ಎಂದ ನೆಟ್ಟಿಗರು

Published : 19 ಸೆಪ್ಟೆಂಬರ್ 2024, 14:09 IST
Last Updated : 19 ಸೆಪ್ಟೆಂಬರ್ 2024, 14:09 IST
ಫಾಲೋ ಮಾಡಿ
Comments

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಟೆಸ್ಟ್‌ ಮಾದರಿಯಲ್ಲಿ ರನ್‌ ಬೇಟೆ ಮುಂದುವರಿಸಿದ್ದಾರೆ. ನಾಯಕ ರೋಹಿತ್‌ ಶರ್ಮಾ, 'ರನ್‌ ಯಂತ್ರ' ಖ್ಯಾತಿಯ ವಿರಾಟ್‌ ಕೊಹ್ಲಿಯಂತಹ ಘಟಾನುಘಟಿ ಬ್ಯಾಟರ್‌ಗಳೇ ವೈಫಲ್ಯ ಅನುಭವಿಸಿದ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ಬೌಲರ್‌ಗಳ ಸವಾಲಿನ ಎದುರು ಜೈಸ್ವಾಲ್‌ ಕಟ್ಟಿದ ಇನಿಂಗ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಹಜ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಜೈಸ್ವಾಲ್, 118 ಎಸೆತಗಳನ್ನು ಎದುರಿಸಿ 56 ರನ್ ಗಳಿಸಿದರು. ಇದು ದೀರ್ಘ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಬ್ಯಾಟ್‌ನಿಂದ ಬಂದ 5ನೇ ಅರ್ಧಶತಕ.

ಉತ್ತಮ ಮೊತ್ತದತ್ತ ಭಾರತ
ಬಾಂಗ್ಲಾದೇಶ ಎದುರಿನ ಟೆಸ್ಟ್‌ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್‌ ಕಳೆದುಕೊಂಡು 339 ರನ್‌ ಗಳಿಸಿದೆ.

ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿದಿರುವ ಆತಿಥೇಯರಿಗೆ ಬಾಂಗ್ಲಾದ ಮಧ್ಯಮ ವೇಗಿ ಹಸನ್ ಮೆಹಮೂದ್ ಆರಂಭದಲ್ಲೇ ಆಘಾತ ನೀಡಿದರು. ತಂಡದ ಮೊತ್ತ 34 ರನ್‌ ಆಗುವಷ್ಟರಲ್ಲೇ ರೋಹಿತ್‌ ಶರ್ಮಾ (6), ಶುಭಮನ್‌ ಗಿಲ್‌ (0) ಹಾಗೂ ವಿರಾಟ್ ಕೊಹ್ಲಿ (6) ವಿಕೆಟ್‌ ಉರುಳಿಸಿದರು.

ಹೀಗಾಗಿ, ಟೀಂ ಇಂಡಿಯಾ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಒಳಗಾಯಿತು. ಈ ಹಂತದಲ್ಲಿ ವಿಕೆಟ್‌ಕೀಪರ್‌ – ಬ್ಯಾಟರ್‌ ರಿಷಭ್‌ ಪಂತ್‌ಗೆ (39 ರನ್‌) ಜೊತೆಯಾದ ಜೈಸ್ವಾಲ್‌, 4ನೇ ವಿಕೆಟ್ ಪಾಲುದಾರಿಕೆಯಲ್ಲಿ 62 ರನ್‌ ಕಲೆಹಾಕಿ ಅಲ್ಪ ಚೇತರಿಕೆ ನೀಡಿದರು. ಪಂತ್‌ ಔಟಾದ ನಂತರ ಕೆ.ಎಲ್‌.ರಾಹುಲ್‌ (16 ರನ್‌) ಜೊತೆಗೂಡಿ 48 ರನ್‌ ಸೇರಿಸಿ ಉಪಯುಕ್ತ ಆಟವಾಡಿದರು.

ತಂಡದ ಮೊತ್ತ 144 ರನ್‌ ಆಗಿದ್ದಾಗ ಜೈಸ್ವಾಲ್‌ ಮತ್ತು ರಾಹುಲ್‌ ಬೆನ್ನುಬೆನ್ನಿಗೆ ವಿಕೆಟ್‌ ಒಪ್ಪಿಸಿದರಾದರೂ, ನಂತರ ಜೊತೆಯಾದ ಆರ್‌.ಅಶ್ವಿನ್‌ ಮತ್ತು ರವೀಂದ್ರ ಜಡೇಜ ಆಸರೆಯಾದರು.

ಅಶ್ವಿನ್‌ (102 ರನ್‌) 6ನೇ ಶತಕ ಬಾರಿಸಿದರೆ, ಜಡೇಜ (86 ರನ್‌) 21ನೇ ಅರ್ಧಶತಕ ಗಳಿಸಿದರು. ಮುರಿಯದ 7ನೇ ವಿಕೆಟ್‌ ಪಾಲುದಾರಿಕೆಯಲ್ಲಿ ಅತ್ಯವಶ್ಯಕ 195 ರನ್‌ ಕಲೆಹಾಕಿರುವ ಇವರಿಬ್ಬರೂ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಹೀಗಾಗಿ, ಉತ್ತಮ ಮೊತ್ತ ಕಲೆಹಾಕುವ ಲೆಕ್ಕಾಚಾರದಲ್ಲಿ ರೋಹಿತ್‌ ಪಡೆ ಇದೆ.

ಜೈಸ್ವಾಲ್‌ ಉತ್ತಮ
ಈ ಇನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ ಶುಭಮನ್‌ ಗಿಲ್‌ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಾಪ್ರಹಾರ ನಡೆಯುತ್ತಿದೆ.

ಭಾರತ ತಂಡದ ಭವಿಷ್ಯದ ನಾಯಕ ಎನ್ನಲಾಗುತ್ತಿರುವ ಗಿಲ್‌ ಅವರ ಬ್ಯಾಟಿಂಗ್ ಸರಾಸರಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇನೂ ಉತ್ತಮವಾಗಿಲ್ಲ. 4 ವರ್ಷಗಳ ಹಿಂದೆಯೇ ದೀರ್ಘ ಮಾದರಿಗೆ ಪದಾರ್ಪಣೆ ಮಾಡಿರುವ ಗಿಲ್‌, 26 ಪಂದ್ಯಗಳ 47 ಇನಿಂಗ್ಸ್‌ಗಳಲ್ಲಿ ಗಳಿಸಿರುವುದು 1,492 ರನ್‌ ಮಾತ್ರ. 4 ಶತಕ ಮತ್ತು 6 ಅರ್ಧಶತಕ ಅವರ ಖಾತೆಯಲ್ಲಿವೆ.

ಆದರೆ, ಕಳೆದ ವರ್ಷವಷ್ಟೇ ಅಂತರರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ ಜೆರ್ಸಿ ತೊಟ್ಟಿರುವ ಜೈಸ್ವಾಲ್‌, ಈವರೆಗೆ 10 ಪಂದ್ಯಗಳ 17 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದು 3 ಶತಕ, 2 ದ್ವಿಶತಕ ಸಹಿತ 1,084 ರನ್‌ ಗಳಿಸಿದ್ದಾರೆ. ಹೀಗಾಗಿ, ಗಿಲ್‌ಗಿಂತ ಜೈಸ್ವಾಲ್‌ ಉತ್ತಮ ಎಂದು ನೆಟ್ಟಿಗರು ಅಂಕಿ–ಅಂಶ ಸಹಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

'ಅತಿಯಾಗಿ ಪ್ರಶಂಸಿಸಲಾಗುತ್ತಿರುವ ಗಿಲ್‌ಗಿಂತ ಜೈಸ್ವಾಲ್‌ 100 ಪಟ್ಟು ಉತ್ತಮ' ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಬಾಂಗ್ಲಾ ಎದುರು ಜೈಸ್ವಾಲ್‌ ಬ್ಯಾಟಿಂಗ್‌ ಮಾಡುತ್ತಿದ್ದಾಗಲೇ ಟ್ವೀಟ್‌ ಮಾಡಿರುವ ಮತ್ತೊಬ್ಬರು, '4 ವರ್ಷಗಳಲ್ಲಿ 47 ಇನಿಂಗ್ಸ್‌ ಆಡಿದ ಬಳಿಕ ಗಿಲ್‌ ಗಳಿಸಿರುವುದು 1,492 ರನ್‌ ಮಾತ್ರ. ಆದರೆ, ಕಳೆದ ವರ್ಷವಷ್ಟೇ ಪದಾರ್ಪಣೆ ಮಾಡಿರುವ ಜೈಸ್ವಾಲ್‌, 16 ಇನಿಂಗ್ಸ್‌ಗಳಲ್ಲೇ 1,071 ರನ್ ಗಳಿಸಿದ್ದಾರೆ' ಎಂದಿದ್ದಾರೆ.

'ಭಾರತ ಕ್ರಿಕೆಟ್‌ನ ಭವಿಷ್ಯ ಜೈಸ್ವಾಲ್‌. ಗಿಲ್‌ ಅಲ್ಲ' ಎಂದಿರುವ ಇನ್ನೊಬ್ಬರು, 'ಇದು ಜನಪ್ರಿಯ ಅಭಿಪ್ರಾಯವಲ್ಲದೇ ಇರಬಹುದು. ಆದರೆ, ಗಿಲ್‌ಗಿಂತ ಜೈಸ್ವಾಲ್ ಉತ್ತಮ. ದ್ವೇಷವಲ್ಲ, ಇದೇ ಸತ್ಯ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT