ಭಾನುವಾರ, ಮೇ 29, 2022
22 °C

IND vs ENG 1st Test | ಬೌಲರ್‌ಗಳು ಇನ್ನಷ್ಟು ಒತ್ತಡ ಹಾಕಬೇಕಿತ್ತು: ಕೊಹ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ ಪಂದ್ಯದ ಸೋಲಿನ ಬಳಿಕ ಮಾತನಾಡಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮೇಲೆ ಇನ್ನಷ್ಟು ಒತ್ತಡ ಹಾಕಬೇಕಿತ್ತು ಎಂದಿದ್ದಾರೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲಿ 578 ರನ್‌ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 337 ರನ್‌ ಗಳಿಸಿ ಆಲೌಟ್‌ ಆಗಿತ್ತು. ಟೀಂ ಇಂಡಿಯಾಗೆ ಫಾಲೋಆನ್‌ ಹೇರುವ ಅವಕಾಶ ವಿದ್ದರೂ ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 178 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದರಿಂದಾಗಿ ಭಾರತಕ್ಕೆ ಬರೋಬ್ಬರಿ 420 ರನ್‌ಗಳ ಬೃಹತ್‌ ಗೆಲುವಿನ ಗುರಿ ನಿಗದಿಯಾಯಿತು. ಈ ಮೊತ್ತದೆದುರು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಗೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈ ಕೊಟ್ಟರು.

ಇದನ್ನೂ ಓದಿ: 

ಅನುಭವಿ ರೋಹಿತ್‌ ಶರ್ಮಾ (12), ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ (15), ಉಪನಾಯಕ ಅಜಿಂಕ್ಯ ರಹಾನೆ (0), ಮೊದಲ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ರಿಷಭ್‌ ಪಂತ್‌ (11), ಯುವ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ (0) ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾದರು.

ಶುಭಮನ್ ಗಿಲ್‌ (50) ಹಾಗೂ ಕೊಹ್ಲಿ (72) ಪ್ರತಿರೋಧ ತೋರಿದರಾದರೂ ಸಾಕಾಗಲಿಲ್ಲ. ಈ ಇಬ್ಬರು ಅರ್ಧಶತಕದ ಗಳಿಸದಿದ್ದರೆ, ತಂಡದ ಮೊತ್ತ ನೂರರ ಗಡಿ ದಾಟುವುದೂ ಕಷ್ಟವಿತ್ತು.

ಸೋಲಿನ ಬಳಿಕ ಮಾತನಾಡಿರುವ ಕೊಹ್ಲಿ, ʼನಾವು ಅವರ (ಇಂಗ್ಲೆಂಡ್‌ ಆಟಗಾರರ) ಮೇಲೆ ಸಾಕಷ್ಟು ಒತ್ತಡ ಹಾಕಿದೆ ಎನಿಸುತ್ತಿಲ್ಲ. ಒಟ್ಟಾರೆಯಾಗಿ ಬೌಲಿಂಗ್‌ ಘಟಕವಾಗಿ ವೇಗಿಗಳು ಮತ್ತು ಅಶ್ವಿನ್‌ (ಆರ್‌.ಅಶ್ವಿನ್‌) ಚೆನ್ನಾಗಿ ಬೌಲಿಂಗ್‌ ಮಾಡಿದರು. ಆದರೆ, ಎಲ್ಲ ಬೌಲರ್‌ಗಳೂ ರನ್‌ ಗಳಿಕೆಗೆ ಕಡಿವಾಣ ಹಾಕಬೇಕಿತ್ತು ಮತ್ತು ಒತ್ತಡವನ್ನು ಸೃಷ್ಟಿಸಬೇಕಿತ್ತು. ಮೊದಲೆರಡು ದಿನ ನಿಧಾನಗತಿಯಲ್ಲಿ ವರ್ತಿಸಿದ್ದ ಪಿಚ್‌, ಬಳಿಕ ಹೆಚ್ಚು ತಿರುವು ಪಡೆದುಕೊಂಡಿತುʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 

ʼಇಂಗ್ಲೆಂಡ್‌ ಆಟಗಾರರಿಗೆ ಶ್ರೇಯ ಸಲ್ಲಬೇಕು. ಅವರು ಪಂದ್ಯಕ್ಕೆ ಅಂಟಿಕೊಂಡು ಆಡಿದರು. ನಮ್ಮ ದೇಹಭಾಷೆ ಮತ್ತು ಆಡಿದ ರೀತಿ ಪರಿಣಾಮಕಾರಿಯಾಗಿರಲಿಲ್ಲ. ಮೊದಲಾರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ಉತ್ತಮವಾಗಿ ಆಡಿದೆವುʼ ಎಂದು ಹೇಳಿದ್ದಾರೆ.

ಮೊದಲೆರಡು ದಿನಗಳ (180 ಓವರ್‌) ಆಟದಲ್ಲಿ 8 ವಿಕೆಟ್‌ಗಳಷ್ಟೇ ಉರುಳಿದ್ದವು. ನಂತರದ ಮೂರು ದಿನಗಳಲ್ಲಿ ಬರೋಬ್ಬರಿ 22 ವಿಕೆಟ್‌ಗಳು ಉರುಳಿದವು. ಮೊದಲ ಇನಿಂಗ್ಸ್‌ನಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ್ದ ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌, ತಮ್ಮ ನೂರನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ (218 ರನ್) ಸಿಡಿಸಿ ದಾಖಲೆ ಬರೆದಿದ್ದರು.

ʼಬೌಲಿಂಗ್‌ ವಿಭಾಗವು ಎದುರಾಳಿಗಳ ಮೇಲೆ ಒತ್ತಡ ಹೇರುವುದು ಅಗತ್ಯವಾಗಿರುತ್ತದೆ. ನಾವು ಅದನ್ನು ಸಾಧಿಸಲಿಲ್ಲ. ಪರವಾಗಿಲ್ಲ. ಆದರೆ, ನಮ್ಮ ಮನಸ್ಥಿತಿ ಸರಿಯಾಗಿತ್ತೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಎರಡನೇ ಇನಿಂಗ್ಸ್‌ನಲ್ಲಿ ಚೆನ್ನಾಗಿ ಆಡಿದೆವು ಮತ್ತು ಅವರ ಮೇಲೆ ಒತ್ತಡ ಹಾಕಿದೆವು ಎಂದು ನನಗನಿಸುತ್ತದೆʼ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು