ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾಜಿರಾವ್ ನಿಧನ: ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ ಟೀಮ್ ಇಂಡಿಯಾ ಆಟಗಾರರು

Published 17 ಫೆಬ್ರುವರಿ 2024, 5:43 IST
Last Updated 17 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ರಾಜ್‌ಕೋಟ್‌: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದತ್ತಾಜಿರಾವ್ ಗಾಯಕವಾಡ ಅವರ ಸಾವಿಗೆ ಸಂತಾಪ ಸೂಚಿಸಿ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಗೌರವ ಸಲ್ಲಿಸಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನವಾದ ಇಂದು (ಶನಿವಾರ) ಆಟ ಆರಂಭಿಸುವ ಮೊದಲು ಟೀಂ ಇಂಡಿಯಾ ಆಟಗಾರರು ಮೌನಾಚರಣೆ ಸಲ್ಲಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್ ಗಾಯಕವಾಡ (95) ಅವರು ಮಂಗಳವಾರ ಬರೋಡಾದಲ್ಲಿ ನಿಧನರಾದರು.

ದಿವಂಗತ ವಿಜಯ ಹಜಾರೆ ಅವರ ಸಮಕಾಲೀನರಾಗಿದ್ದ ದತ್ತಾಜಿರಾವ್ ಭಾರತ ತಂಡವನ್ನು 11 ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿದ್ದರು. ಹಜಾರೆಯವರಷ್ಟೇ ಕೌಶಲಪೂರ್ಣ ಬ್ಯಾಟರ್ ಕೂಡ ಆಗಿದ್ದರು. ಮೂಲತಃ ಬರೋಡಾದವರೇ ಆದ ದತ್ತಾಜಿರಾವ್ 1950ರಲ್ಲಿ ತಮ್ಮ ಕವರ್ ಡ್ರೈವ್‌ಗಳಿಂದ ಮುಂಬೈನಂತಹ ಬಲಿಷ್ಠ ತಂಡಗಳಿಗೆ ಸಿಂಹಸ್ವಪ್ನರಾಗಿದ್ದರು.

ಆದರೆ 1952ರಿಂದ 1961ರವರೆಗೆ ರಾಷ್ಟ್ರೀಯ ತಂಡದಲ್ಲಿ ಅವರು ಹೆಚ್ಚು ರನ್ (352) ಗಳಿಸಲಿಲ್ಲ. 110 ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರು 5788 ರನ್ ಗಳಿಸಿದ್ದರು. ಬರೋಡ ತಂಡವು 1957–58ರಲ್ಲಿ ರಣಜಿ ಟ್ರೋಫಿ ಜಯಿಸಲು ಅವರ ಆಟವೇ ಪ್ರಧಾನವಾಗಿತ್ತು. ಆ ಋತುವಿನಲ್ಲಿ ಸರ್ವಿಸಸ್‌ ವಿರುದ್ಧ ಶತಕ ಬಾರಿಸಿದ್ದರು.

ಏತನ್ಮಧ್ಯೆ, ವೈಯಕ್ತಿಕ ಕಾರಣದಿಂದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಇಂಗ್ಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ.

ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಳಿಸಿದ್ದಾರೆ. ಶುಕ್ರವಾರ ಜ್ಯಾಕ್ ಕ್ರಾಲಿ ವಿಕೆಟ್ ಪಡೆಯುವುದರೊಂದಿಗೆ ಈ ಮೈಲಿಗಲ್ಲು ಮುಟ್ಟಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಒಂಬತ್ತನೇ ಮತ್ತು ಭಾರತದ ಎರಡನೇ ಬೌಲರ್ ಅದರು. ಅನಿಲ್ ಕುಂಬ್ಳೆ (619; 105 ಪಂದ್ಯ) ಮೊದಲ ಭಾರತೀಯ ಬೌಲರ್ ಆಗಿದ್ದಾರೆ.

ಅಶ್ವಿನ್‌ ಕಡಿಮೆ ಟೆಸ್ಟ್‌ಗಳಲ್ಲಿ (98) ಈ ಸಾಧನೆ ಮಾಡಿದ ಎರಡನೇ ಆಟಗಾರ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 87 ಪಂದ್ಯಗಳಲ್ಲಿ ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT