ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 5th Test: ಇಂಗ್ಲೆಂಡ್ ಗೆಲುವಿಗೆ 378 ರನ್‌ ಗುರಿ ನೀಡಿದ ಭಾರತ

ಅಕ್ಷರ ಗಾತ್ರ

ಎಜ್‌ಬಾಸ್ಟನ್: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 132 ರನ್‌ಗಳ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಎರಡನೇ ಇನಿಂಗ್ಸ್‌ನಲ್ಲಿ 245 ರನ್‌ ಗಳಿಸಿ ಆಲೌಟ್‌ ಆಗಿದೆ. ಇದರೊಂದಿಗೆಆತಿಥೇಯ ತಂಡದ ಗೆಲುವಿಗೆ 378 ರನ್‌ಗಳ ಸವಾಲಿನ ಗುರಿ ನೀಡಿದೆ.

ಶುಕ್ರವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ, ವಿಕೆಟ್‌ ಕೀಪರ್‌–ಬ್ಯಾಟರ್‌ ರಿಷಭ್ ಪಂತ್‌ (146) ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜ (104) ಅವರ ಸಾಹಸಮಯ ಬ್ಯಾಟಿಂಗ್‌ ಬಲದಿಂದ 416 ರನ್‌ ಕಲೆಹಾಕಿ ಆಲೌಟ್‌ ಆಗಿತ್ತು.

ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ಜಾನಿ ಬೆಸ್ಟೋ (106) ಶತಕ ಗಳಿಸಿದ್ದರ ಹೊರತಾಗಿಯೂ, 284 ರನ್‌ ಗಳಿಗೆ ಆಲೌಟ್‌ ಆಗಿತ್ತು. ಹೀಗಾಗಿ ಭಾರತಕ್ಕೆ ನೂರಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಲಭಿಸಿತ್ತು. ಆದರೆ, ಎರಡನೇ ಇನಿಂಗ್ಸ್‌ನಲ್ಲಿಯೂ ಭಾರತದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟರು.

ಆರಂಭಿಕ ಶುಭಮನ್‌ ಗಿಲ್‌ ಕೇವಲ 4 ರನ್‌ ಗಳಿಸಿ ಔಟಾದರೆ, ಹನುಮ ವಿಹಾರಿ 11, ವಿರಾಟ್‌ ಕೊಹ್ಲಿ 20 ಹಾಗೂ ಶ್ರೇಯಸ್‌ ಅಯ್ಯರ್‌ 19 ರನ್‌ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಪಂತ್‌ ಮತ್ತುಚೇತೇಶ್ವರ ಪೂಜಾರ ತಂಡಕ್ಕೆ ನೆರವಾದರು.

ಮೊದಲ ಇನಿಂಗ್ಸ್‌ನಲ್ಲಿ ಮೂರಂಕಿ ಮೊತ್ತ ಕಲೆಹಾಕಿದ್ದ ಪಂತ್‌, ಈ ಬಾರಿ ಅರ್ಧಶತಕ (57) ಬಾರಿಸಿದರು. ಪೂಜಾರ 66 ರನ್‌ ಗಳಿಸಿದರು. ಇದರಿಂದಾಗಿ ಜಸ್‌ಪ್ರೀತ್‌ ಬೂಮ್ರಾ ಬಳಗ ಆಂಗ್ಲರಿಗೆ ಸವಾಲಿನ ಗುರಿ ನೀಡಲು ಸಾಧ್ಯವಾಯಿತು.

ಇಂಗ್ಲೆಂಡ್‌ ಪರ ನಾಯಕ ಬೆನ್‌ ಸ್ಟೋಕ್ಸ್‌ 4 ವಿಕೆಟ್ ಪಡೆದರೆ, ಸ್ಟುವರ್ಟ್‌ ಬ್ರಾಡ್‌ ಹಾಗೂ ಮ್ಯಾಟಿ ಪಾಟ್ಸ್‌ ತಲಾ ಎರಡು ವಿಕೆಟ್‌ ಕಿತ್ತರು. ಇನ್ನೆರಡು ವಿಕೆಟ್‌ಗಳನ್ನು ಜೇಮ್ಸ್‌ ಆ್ಯಂಡರ್ಸನ್‌ ಮತ್ತು ಜಾಕ್‌ ಲೀಚ್‌ ಹಂಚಿಕೊಂಡರು.

ಸದ್ಯ ಇನಿಂಗ್ಸ್‌ ಆರಂಭಿಸಿರುವ ಇಂಗ್ಲೆಂಡ್‌ ತಂಡ ವಿಕೆಟ್‌ ನಷ್ಟವಿಲ್ಲದೆ30 ರನ್‌ ಕಲೆಹಾಕಿದೆ.19 ರನ್‌ ಗಳಿಸಿರುವ ಅಲೆಕ್ಸ್‌ ಲೀಸ್‌ ಅವರೊಂದಿಗೆ10 ರನ್ ಹೊಡೆದಿರುವ ಜಾಕ್‌ ಕ್ರಾಲಿ ಕ್ರೀಸ್‌ನಲ್ಲಿದ್ದಾರೆ. ಗೆಲುವಿಗೆ ಇನ್ನೂ 348 ರನ್‌ ಗಳಿಸಬೇಕಿದೆ.

ಪಂದ್ಯಗೆದ್ದರೆ 3–1 ಅಂತರದಲ್ಲಿ ಸರಣಿಜಯ
ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಕಳೆದ ವರ್ಷ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಿದ್ದವು. ನಾಲ್ಕು ಪಂದ್ಯಗಳು ಈಗಾಗಲೇ ಮುಗಿದಿದ್ದು, ಭಾರತ 2–1ರಲ್ಲಿ ಮುನ್ನಡೆ ಸಾಧಿಸಿದೆ. ಇದೀಗ ನಡೆಯುತ್ತಿರುವುದು ಐದನೇ ಪಂದ್ಯವಾಗಿದ್ದು, ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು.

ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸರಣಿಯನ್ನು 3–1 ಅಂತರದಲ್ಲಿ ಜಯಿಸಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT