ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಇಂಗ್ಲೆಂಡ್ ಎರಡನೇ ಟೆಸ್ಟ್ ಇಂದಿನಿಂದ: ರೋಹಿತ್ ಪಡೆ ಮುಂದೆ ಕಠಿಣ ಸವಾಲು

Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಮುಂದೆ ಈಗ ಹಲವು ಸವಾಲುಗಳಿವೆ.

ಅನುಭವಿ ಆಟಗಾರರ ಗೈರುಹಾಜರಿಯಲ್ಲಿ ಹೊಸ ಹುಡುಗರ ದಂಡು ಕಟ್ಟಿಕೊಂಡು ಇಂಗ್ಲೆಂಡ್ ವಿರುದ್ಧ ಶುಕ್ರವಾರ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯಿಸಬೇಕು. ಇದಲ್ಲದೇ ತಮ್ಮ ಬ್ಯಾಟಿಂಗ್‌ ಲಯವನ್ನೂ ಕಂಡುಕೊಳ್ಳಬೇಕು. ಪ್ರವಾಸಿ ತಂಡದ ‘ಬಾಝ್‌ಬಾಲ್‘ ತಂತ್ರಕ್ಕೆ ತಿರುಗೇಟು ನೀಡಬೇಕು. ಕಳೆದ 12 ವರ್ಷಗಳಿಂದ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲದಿರುವ ದಾಖಲೆಯನ್ನು ಮುಂದುವರಿಸಬೇಕು. ಹೀಗೆ  ಸವಾಲುಗಳ ಸಾಲು ಬೆಳೆಯುತ್ತದೆ.

ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಬಳಗವು ಈಗಾಗಲೇ 1–0 ಮುನ್ನಡೆ ಸಾಧಿಸಿದೆ. ಹೈದರಾಬಾದಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಗುರಿ ಸಾಧಿಸಲು ವಿಫಲರಾಗಿದ್ದರು. ಆ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜ ಮತ್ತು ಕೆ.ಎಲ್. ರಾಹುಲ್ ಅವರು ಗಾಯಗೊಂಡು ಹೊರಬಿದ್ದಿದ್ದಾರೆ. ವಿರಾಟ್ ಕೊಹ್ಲಿ ಸರಣಿಯ ಮೊದಲೆರಡೂ ಪಂದ್ಯಗಳಿಂದ ‘ರಜೆ’ ಪಡೆದಿದ್ದಾರೆ. ಅನುಭವಿ ಬೌಲರ್ ಮೊಹಮ್ಮದ್ ಶಮಿ ಕೂಡ ಇಲ್ಲ. ಈಗ ಹೊಸ ಪ್ರತಿಭೆಗಳ ಪ್ರಯೋಗಕ್ಕೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಸಿದ್ಧವಾಗಿದ್ದಾರೆ.

ನಾಯಕನೊಂದಿಗೆ ಇನಿಂಗ್ಸ್‌ ಆರಂಭಿಸುವ ಯಶಸ್ವಿ ಜೈಸ್ವಾಲ್, ನಂತರದ ಕ್ರಮಾಂಕದಲ್ಲಿ ಆಡುವ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ತಮ್ಮ ಲಯಕ್ಕೆ ಮರಳಬೇಕಿದೆ. ಮುಂಬೈನ ಸರ್ಫರಾಜ್ ಖಾನ್ ಮತ್ತು ಮಧ್ಯಪ್ರದೇಶದ ರಜತ್ ಪಾಟೀದಾರ್ ಅವರು ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಯ ಅವಕಾಶ ಪಡೆಯುವ ಸಾಧ್ಯತೆ ಇದೆ. ಅವರು ತಮ್ಮ ದೇಶಿ ಕ್ರಿಕೆಟ್‌ನ  ಅಮೋಘ ಆಟವನ್ನು ಇಲ್ಲಿಯೂ ಮುಂದುವರಿಸಿದರೆ ತಂಡಕ್ಕೆ ಲಾಭ ಖಚಿತ.

ವೇಗದ ಬೌಲಿಂಗ್ ಹೊಣೆ ಜಸ್‌ಪ್ರೀತ್ ಬೂಮ್ರಾ ಮೇಲಿದೆ. ಇಲ್ಲಿಯ ಕ್ರೀಡಾಂಗಣವು ಸ್ಪಿನ್ ಬೌಲಿಂಗ್‌ಗೆ ಹೆಚ್ಚು ನೆರವು ನೀಡುವ ಲಕ್ಷಣಗಳಿವೆ. ಆದ್ದರಿಂದ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ಹೊಣೆ ಹೆಚ್ಚಲಿದೆ. ಅಶ್ವಿನ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಮೈಲುಗಲ್ಲು ತಲುಪಲು ಇನ್ನೂ ನಾಲ್ಕು ವಿಕೆಟ್‌ಗಳ ಅಗತ್ಯವಿದೆ.

ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಸಂತಸದಲ್ಲಿ ಬೆನ್ ಸ್ಟೋಕ್ಸ್ ಬಳಗ ಇದೆ. ತಂಡದ  ಅನುಭವಿ ಸ್ಪಿನ್ನರ್ ಜ್ಯಾಕ್ ಲೀಚ್ ಗಾಯಗೊಂಡಿರುವುದರಿಂದ ಹೊಸಬ ಶೋಯಬ್ ಬಷೀರ್ ಅವರಿಗೆ ಅವಕಾಶ ನೀಡಲಿದೆ.  ಅಲ್ಲದೇ ಅನುಭವಿ ಆಟಗಾರ ಜೋ ರೂಟ್ ಬೌಲಿಂಗ್‌ನಲ್ಲಿಯೂ ಮಿಂಚುತ್ತಿರುವುದರಿಂದ ಸ್ಟೋಕ್ಸ್‌ ಬಳಗದ ಬಲ ಹೆಚ್ಚಿದೆ.  ಹೈದರಾಬಾದ್ ಟೆಸ್ಟ್‌ನಲ್ಲಿ ರೂಟ್ ಅವರು 48 ಓವರ್‌ ಬೌಲಿಂಗ್ ಮಾಡಿದ್ದರು. ಅ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ತಿರುಗೇಟು ನೀಡಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದ ಇಂಗ್ಲೆಂಡ್‌ನ ಸ್ಪಿನ್ನರ್ ಟಾಮ್ ಹಾರ್ಟ್ಲಿ ಭಾರತ ತಂಡಕ್ಕೆ ಸೋಲಿನ ರುಚಿ ತೋರಿಸಿದ್ದರು. 

ಬೌಲರ್‌ಗಳಿಗೂ ಬ್ಯಾಟಿಂಗ್ ಅಭ್ಯಾಸ!

ಗುರುವಾರ ನೆಟ್ಡ್‌ನಲ್ಲಿ ಭಾರತದ ಬೌಲರ್‌ಗಳಿಗೂ ಬ್ಯಾಟಿಂಗ್ ಪಾಠವನ್ನು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿಕೊಟ್ಟರು. ಅಗ್ರ ಬ್ಯಾಟರ್‌ಗಳು ವಿಫಲರಾದರೆ ಕೆಳಕ್ರಮಾಂಕದ ಆಟಗಾರರಿಂದ ರನ್‌ಗಳು ತಂಡದ ಖಾತೆ ಸೇರಲಿ ಎಂಬ ಯೋಜನೆ ಅವರದ್ದು. ಅದಕ್ಕಾಗಿಯೇ ಜಸ್‌ಪ್ರೀತ್ ಬೂಮ್ರಾ ಸೇರಿದಂತೆ ಬೌಲರ್‌ಗಳು ನೆಟ್ಸ್‌ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸಿದರು. ಇನ್ನೊಂದೆಡೆ ರೋಹಿತ್ ಶರ್ಮಾ ಅವರು ತಮ್ಮ ಆರಂಭಿಕ ಜೊತೆಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಬಹಳ ಹೊತ್ತು ಸಮಾಲೋಚನೆ ನಡೆಸಿದರು. ಶುಭಮನ್ ಗಿಲ್ ಅವರಿಗೆ ಕೌಶಲಗಳ ಸುಧಾರಣೆಗೆ ದ್ರಾವಿಡ್ ಮಾರ್ಗದರ್ಶನ ನೀಡಿದರು. ಸಿರಾಜ್ ಮತ್ತು ಅಶ್ವಿನ್ ಹೆಚ್ಚು ಹೊತ್ತು ಬೌಲಿಂಗ್‌ ಅಭ್ಯಾಸದಲ್ಲಿ ನಿರತರಾಗಿದ್ದರು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್ ಯಶಸ್ವಿ ಜೈಸ್ವಾಲ್ ಶ್ರೇಯಸ್ ಅಯ್ಯರ್ ಕೆ.ಎಸ್. ಭರತ್ (ವಿಕೆಟ್‌ಕೀಪರ್) ಧ್ರುವ ಜುರೇಲ್ (ವಿಕೆಟ್‌ಕೀಪರ್) ಜಸ್‌ಪ್ರೀತ್ ಬೂಮ್ರಾ(ಉಪನಾಯಕ) ಆರ್. ಅಶ್ವಿನ್ ಅಕ್ಷರ್ ಪಟೇಲ್ ಕುಲದೀಪ್ ಯಾದವ್ ಮೊಹಮ್ಮದ್ ಸಿರಾಜ್ ಮುಕೇಶ್ ಕುಮಾರ್ ಆವೇಶ್ ಖಾನ್ ರಜತ್ ಪಾಟೀದಾರ್ ಸರ್ಫರಾಜ್ ಖಾನ್ ವಾಷಿಂಗ್ಟನ್ ಸುಂದರ್ ಸೌರಭ್ ಕುಮಾರ್.

ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ) ಬೆನ್ ಡಕೆಟ್ ಜ್ಯಾಕ್ ಕ್ರಾಲಿ ಜೋ ರೂಟ್  ಓಲಿ ಪೋಪ್ ಜಾನಿ ಬೆಸ್ಟೊ ಬೆನ್ ಫೋಕ್ಸ್ (ವಿಕೆಟ್‌ಕೀಪರ್) ರೆಹಾನ್ ಅಹಮದ್ ಟಾಮ್ ಹಾರ್ಟ್ಲಿ ಶೋಯಬ್ ಬಷೀರ್ ಜೇಮ್ಸ್ ಆ್ಯಂಡರ್ಸನ್.

ಪಂದ್ಯ ಆರಂಭ: ಬೆಳಿಗ್ಗೆ 9.30 ನೇರಪ್ರಸಾರ: ಸ್ಪೋರ್ಟ್ಸ್ 18 ಜಿಯೊ ಸಿನಿಮಾ ಆ್ಯಪ್.

England
England
Visakhapatnam: India
Visakhapatnam: India

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT