ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಯ ತವರಲ್ಲಿ ಜುರೇಲ್ ಕನಸು

ರಾಂಚಿಯಲ್ಲಿ ನಾಳೆಯಿಂದ ಭಾರತ–ಇಂಗ್ಲೆಂಡ್ ಟೆಸ್ಟ್
Published 21 ಫೆಬ್ರುವರಿ 2024, 16:37 IST
Last Updated 21 ಫೆಬ್ರುವರಿ 2024, 16:37 IST
ಅಕ್ಷರ ಗಾತ್ರ

ರಾಂಚಿ: ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಭಾರತ ತಂಡದ ಯುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರು ಈಗ ಅಪಾರ ಉತ್ಸಾಹದಲ್ಲಿದ್ದಾರೆ.

ತಮ್ಮ ಆದರ್ಶಪ್ರಾಯ ಆಟಗಾರ ಮಹೇಂದ್ರಸಿಂಗ್ ಧೋನಿಯವರ ಊರಿನಲ್ಲಿ ಕಣಕ್ಕಿಳಿಯಲು ಕಾತುರರಾಗಿದ್ದಾರೆ. ಅಷ್ಟೇ ಅಲ್ಲ. ಭಾರತ ಕ್ರಿಕೆಟ್ ರಂಗ ಕಂಡ ಅತ್ಯಂತ ಯಶಸ್ವಿ ನಾಯಕ ಮತ್ತು ವಿಕೆಟ್‌ಕೀಪರ್ ಆಗಿದ್ದ ಧೋನಿ ಅವರನ್ನು ಭೇಟಿಯಾಗುವ ನಿರೀಕ್ಷೆಯಲ್ಲಿದ್ದಾರೆ.

ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಜುರೇಲ್ ಅವರು ಪದಾರ್ಪಣೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಚೆಂದದ ಬ್ಯಾಟಿಂಗ್ ಮಾಡಿ 46 ರನ್ ಗಳಿಸಿದ್ದರು. ಕೀಪಿಂಗ್‌ನಲ್ಲಿ ಉತ್ತಮ ಕೌಶಲ ತೋರಿದ್ದರು. ಮೂರು ವರ್ಷಗಳ ಹಿಂದೆ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಜುರೇಲ್ ಪಂದ್ಯವೊಂದರಲ್ಲಿ ಧೋನಿಯವರನ್ನು ಭೇಟಿಯಾಗಿದ್ದರಂತೆ. ಇದೀಗ ಧೋನಿಯನ್ನು ಅವರದ್ದೇ ತವರಿನಲ್ಲಿ ಭೇಟಿಯಾಗುವ ಹುಮ್ಮಸ್ಸು 23 ವರ್ಷದ ಜುರೇಲ್ ಅವರದ್ದು.

‘ಮಹಿ ಭಾಯ್ (ಸಹೋದರ) ಅವರನ್ನು ಭೇಟಿಯಾಗುವುದು ನನ್ನ ಬಹುದಿನಗಳ ಕನಸಾಗಿತ್ತು. ಐಪಿಎಲ್ ಸಂದರ್ಭದಲ್ಲಿ ಒಂದು ಬಾರಿ ಭೇಟಿಯಾಗಿದ್ದೆ. ಇದೀಗ ನಾನು ಭಾರತ ತಂಡದ ಪೋಷಾಕು ಧರಿಸಿದ್ದೇನೆ. ಅವರನ್ನು ಭೇಟಿಯಾದಾಗ ನನ್ನ ಆಟ ಉತ್ತಮಗೊಳ್ಳುವಂತಹ ಸಲಹೆ ನೀಡಿದ್ದಾರೆ. ಅವರಿಂದ ಮತ್ತಷ್ಟು ಕಲಿಯುವ ಆಸೆ ಇದೆ’ ಎಂದು ಜುರೇಲ್ ಬಿಸಿಸಿಐ ಡಾಟ್ ಟಿವಿಗೆ  ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘2021ರಲ್ಲಿ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಅವರೊಂದಿಗೆ (ಧೋನಿ) ಮೊದಲ ಬಾರಿ ಮಾತನಾಡಿದೆ. ನನ್ನ ಕನಸು ನನಸಾದ ಕ್ಷಣ ಅದು. ಧೋನಿಯ ಮುಂದೆ ನಾನು ನಿಂತು ಮಾತನಾಡುತ್ತಿರುವೆ ಎಂಬುದನ್ನೇ ನಂಬಲಾಗಿರಲಿಲ್ಲ. ಅದೆಷ್ಟೋ ಕೈ ಜಿಗುಟಿಕೊಂಡು ಕನಸಲ್ಲ, ನನಸು ಎಂದು ದೃಢಪಡಿಸಿಕೊಂಡಿದ್ದೆ.  ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದೆ.  ಹೊರಗೆ ಹೋಗು ಚೆಂಡಿನ ಮೇಲೆ ಏಕಾಗ್ರತೆ ನೆಟ್ಟು ಆಡು ಎಂದಷ್ಟೇ ಸಲಹೆ ಕೊಟ್ಟಿದ್ದರು’ ಎಂದು ಜುರೇಲ್ ನೆನಪಿಸಿಕೊಂಡರು.

ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು ಈಗ 2–1ರಿಂದ ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯವು ಶುಕ್ರವಾರದಿಂದ ರಾಂಚಿಯಲ್ಲಿ ನಡೆಯಲಿದೆ.

ರಾಂಚಿ ಟೆಸ್ಟ್‌ ಪಂದ್ಯಕ್ಕೆ ಬೆದರಿಕೆ

ಇಂಗ್ಲೆಂಡ್ ತಂಡದ ವಿರುದ್ಧ ಇಲ್ಲಿ  ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಬೇಕು ಇಲ್ಲದಿದ್ದರೆ ತಡೆಯೊಡ್ಡಲಾಗುವುದು ಎಂದು ಘೋಷಿತ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾನೆ. ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಪನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾನೆ. ಅದರ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಲು ಸಿದ್ಧರಾಗಿ ಎಂದು ಸಿಪಿಐ (ಮಾವೊವಾದಿಗಳು) ಉಗ್ರಗಾಮಿಗಳಿಗೆ ಕರೆ ನೀಡಿದ್ದಾನೆ.

‘ಇಂಗ್ಲೆಂಡ್ ಮತ್ತು ಭಾರತ ನಡುವಣ ಪಂದ್ಯಕ್ಕೆ ತಡೆಯೊಡ್ಡುವ ಬೆದರಿಕೆಯನ್ನು ಪನ್ನು ನೀಡಿದ್ದಾನೆ. ಪಂದ್ಯವನ್ನು  ಸ್ಥಗಿತಗೊಳಿಸುವುದು ಅವನ ದುರುದ್ದೇಶವಾಗಿದೆ. ದುರ್ವಾ ಪೊಲೀಸ್ ಠಾಣಿಯಲ್ಲಿ ಐಟಿ ನಿಯಮದಡಿಯಲ್ಲಿ ಆತನ ಮೇಲೆ ಎಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಆರಂಭಿಸಲಾಗಿದೆ’ ಎಂದು ಡಿಎಸ್‌ಪಿ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.

‍ಪಂದ್ಯದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಭಾರತ ಗೃಹ ಇಲಾಖೆಯು ಪನ್ನುವನ್ನು ಭಯೋತ್ಪಾದಕ ಎಂದು ಘೋಷಿಸಿದೆ.

ಜಾನಿಗೆ ಬಿಡುವು ನೀಡಲು ಕುಕ್ ಸಲಹೆ

ಲಂಡನ್: ಬ್ಯಾಟರ್ ಜಾನಿ ಬೆಸ್ಟೊ ಅವರು ಭಾರತ ತಂಡದ ಎದುರಿನ ಟೆಸ್ಟ್ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ್ದಾರೆ. ಅದರಿಂದಾಗಿ ಅವರಿಗೆ ಒಂದಿಷ್ಟು ಬಿಡುವು ಕೊಟ್ಟು ಬೇರೆ ಆಟಗಾರನಿಗೆ ಅವಕಾಶ ಕೊಡಬೇಕು ಎಂದು  ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಹೇಳಿದ್ದಾರೆ.

ಪ್ರಸಕ್ತ ಸರಣಿಯಲ್ಲಿ ಜಾನಿ 17ರ ಸರಾಸರಿಯಲ್ಲಿ (0 4 25 26 37 ಮತ್ತು 10) ರನ್ ಗಳಿಸಿದ್ದಾರೆ. ಆಡಿರುವ ಆರು ಇನಿಂಗ್ಸ್‌ಗಳಲ್ಲಿಯೂ ಅವರು ಲಯಕ್ಕೆ ಮರಳಿಲ್ಲ. 

‘ಅವರಂತಹ ಒಬ್ಬ ಆಟಗಾರನನ್ನು ರಕ್ಷಿಸುವುದಕ್ಕೊಸ್ಕರವೇ ನಾನು ಹೀಗೆ ಹೇಳುತ್ತಿರುವೆ. ಅವರನ್ನೊಂದು ಮುಂದೆ ಎಂದೂ ಟೆಸ್ಟ್‌ನಲ್ಲಿ ಆಡಿಸಬಾರದು ಎನ್ನುತ್ತಿಲ್ಲ. ಅವರು ಇದೇ ಫಾರ್ಮ್‌ನಲ್ಲಿ ಮುಂದುವರಿದರೆ ಮುಂದೆ ಸ್ಥಾನ ಕಳೆದುಕೊಳ್ಳಬಹುದು. ಈಗ ಬಿಡುವು ಪಡೆದರೆ ಮತ್ತೊಬ್ಬ ಉತ್ಸಾಹಿ ಆಟಗಾರ ಸ್ಥಾನ ಪಡೆಯಬಹುದು. ತಂಡಕ್ಕೆ ಲಾಭವಾಗುತ್ತದೆ’ ಎಂದಿದ್ದಾರೆ.

‘ಇಂಗ್ಲೆಂಡ್ ತಂಡವು ಜಾನಿಯನ್ನು ಬಿಟ್ಟುಕೊಡುವುದಿಲ್ಲ. ಈ ಹಂತದಲ್ಲಿ ಅವರು ಲಯಕ್ಕೆ ಮರಳಲು ಅವಕಾಶ ನೀಡುವುದು ಬಹುತೇಕ ಖಚಿತವಾಗಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರಿಗೆ ನೆರವು ನೀಡುವುದು ತಂಡದ ಉದ್ದೇಶವಾಗಿರಬಹುದು’ ಎಂದು ಇಂಗ್ಲೆಂಡ್ ಮಾಜಿ ಆಟಗಾರ ಮೈಕ್ ಆಥರ್ಟನ್ ಅವರು ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ ಪಾಡ್‌ಕಾಸ್ಟ್‌ಗೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT