ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಕುಸಿದ ಭಾರತಕ್ಕೆ ಪಂತ್, ಪೂಜಾರ ಆಸರೆ; ಟೀ ವಿರಾಮಕ್ಕೆ 154/4

Last Updated 7 ಫೆಬ್ರುವರಿ 2021, 8:54 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ 578 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ಆರಂಭಿಕ ಕುಸಿತಕ್ಕೊಳಗಾಗಿರುವ ಟೀಮ್ ಇಂಡಿಯಾಗೆ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ಆಸರೆಯಾಗಿದ್ದಾರೆ.

ತಾಜಾ ವರದಿಗಳ ವೇಳೆಗೆ ಮೂರನೇ ದಿನದಾಟದ ಟೀ ವಿರಾಮದ ಹೊತ್ತಿಗೆ 41 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿದೆ. ಪೂಜಾರ ಹಾಗೂ ಪಂತ್ ತಲಾ ಅರ್ಧಶತಕ ಬಾರಿಸಿ ಕ್ರೀಸಿನಲ್ಲಿದ್ದಾರೆ. ಇನ್ನು ಆರು ವಿಕೆಟ್ ಬಾಕಿ ಉಳಿದಿರುವಂತೆಯೇ ಫಾಲೋ ಆನ್ ತಪ್ಪಿಸಿಕೊಳ್ಳಲು 224 ರನ್ ಗಳಿಸಬೇಕಾದ ಅಗತ್ಯವಿದೆ. ಅಲ್ಲದೆ ಒಟ್ಟಾರೆಯಾಗಿ 424 ರನ್ ಹಿನ್ನೆಡೆಯಲ್ಲಿದೆ.

ಭಾರತದ ಆರಂಭ ಉತ್ತಮವಾಗಿರಲಿಲ್ಲ. ಇಂಗ್ಲೆಂಡ್‌ನ ಇನ್ ಫಾರ್ಮ್ ವೇಗದ ಬೌಲರ್ ಜೋಫ್ರಾ ಆರ್ಚರ್ ಭಾರತ ತಂಡವು 44 ರನ್ ಪೇರಿಸುವಷ್ಟರಲ್ಲಿ ಡಬಲ್ ಆಘಾತ ನೀಡಿದರು.

ಅನುಭವಿ ರೋಹಿತ್ ಶರ್ಮಾ (6) ಬೇಗನೇ ನಿರ್ಗಮಿಸಿದರೆ ಯುವ ಶುಭಮನ್ ಗಿಲ್ (29) ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವಾಗಿ ಪರಿವರ್ತಿಸಲಾಗದೇ ನಿರಾಸೆ ಅನುಭವಿಸಿದರು. 28 ಎಸೆತಗಳನ್ನು ಎದುರಿಸಿದ ಗಿಲ್ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳು ಸೇರಿದ್ದವು.

ಊಟದ ವಿರಾಮದ ಬಳಿಕವೂ ಪರಿಸ್ಥಿತಿ ಬದಲಾಗಲಿಲ್ಲ. ನಾಯಕ ವಿರಾಟ್ ಕೊಹ್ಲಿ (11) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (1) ಅವರನ್ನು ಡಾಮಿನಿಕ್ ಬೆಸ್ ಹೊರದಬ್ಬಿದರು. ಇದರೊಂದಿಗೆ 73 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಜೊತೆಗೂಡಿದ ಚೇತೇಶ್ವರ ಪೂಜಾರ ಹಾಗೂ ರಿಷಭ್ ಪಂತ್ ತಂಡಕ್ಕೆ ಆಸರೆಯಾದರು. ಈ ಪೈಕಿ ಏಕದಿನ ಶೈಲಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಪಂತ್ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು.

ಆಂಗ್ಲರ ದಾಳಿಯನ್ನು ನಿರಂತಕವಾಗಿ ಎದುರಿಸಿದ ಪಂತ್ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ಅಲ್ಲದೆ ಪೂಜಾರ ಜೊತೆಗೆ ಮುರಿಯದಐದನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟ ನೀಡಿದ್ದಾರೆ.

44 ಎಸೆತಗಳನ್ನು ಎದುರಿಸಿರುವ ಪಂತ್ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 54 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇನ್ನೊಂದೆಡೆ ಕಲಾತ್ಮಕ ಬ್ಯಾಟಿಂಗ್ ಪ್ರದರ್ಶಿಸಿರುವ ಪೂಜಾರ 111 ಎಸೆತಗಳಲ್ಲಿ ಏಳು ಬೌಂಡರಿ ನೆರವಿನಿಂದ 53 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ 578ಕ್ಕೆ ಆಲೌಟ್...
ಈ ಮೊದಲು ಎಂಟು ವಿಕೆಟ್ ನಷ್ಟಕ್ಕೆ 555 ಎಂಬ ಮೊತ್ತದಿಂದ ಮೂರನೇ ದಿನದಾಟ ಮುಂದುವರಿಸಿದ ಆಂಗ್ಲರ ಪಡೆ ಮತ್ತಷ್ಟು 23 ರನ್ ಪೇರಿಸುವುದರೊಳಗೆ ಉಳಿದಿರುವ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ 190.1 ಓವರ್‌ಗಳಲ್ಲಿ 578 ರನ್‌ಗಳಿಗೆ ಆಲೌಟ್ ಆಯಿತು.

ತಮ್ಮ 100ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ನಾಯಕ ಜೋ ರೂಟ್ ಸ್ಮರಣೀಯ ದ್ವಿಶತಕ (218) ಸಾಧನೆ ಮಾಡಿದ್ದರು. ಈ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರವಾಗಿದ್ದರು. ಅಷ್ಟೇ ಅಲ್ಲದೆ 98, 99 ಹಾಗೂ 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಮಾಡಿದ ಗೌರವಕ್ಕೂ ಭಾಜನವಾಗಿದ್ದರು.

ಆರಂಭಿಕ ಡಾಮಿನಿಕ್ ಸಿಬ್ಲಿ (87) ಹಾಗೂ ಆಲ್‌ರೌಂಡರ್ ಬೆನ್ ಸ್ಟೋಕ್ಸ್ (82) ಅರ್ಧಶತಕಗಳನ್ನು ಬಾರಿಸಿ ಇಂಗ್ಲೆಂಡ್ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.

ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಹಾಗೂ ಆರ್. ಅಶ್ವಿನ್ ತಲಾ ಮೂರು ಮತ್ತು ಇಶಾಂತ್ ಶರ್ಮಾ ಮತ್ತು ಶಹಬಾಜ್ ನದೀಂ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT