ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್ ಶರ್ಮಾ ನೀಡಿದ ಸಲಹೆಯಿಂದ ಯಶಸ್ಸು ಗಳಿಸಿದ ಇಶಾನ್ ಕಿಶನ್

Last Updated 15 ಮಾರ್ಚ್ 2021, 4:34 IST
ಅಕ್ಷರ ಗಾತ್ರ

ಅಹಮದಾಬಾದ್: ಪದಾರ್ಪಣಾ ಪಂದ್ಯದಲ್ಲೇ ಬಿರುಸಿನ ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿರುವ ಯುವ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ತಮ್ಮ ನಿರ್ವಹಣೆಯಲ್ಲಿ ರೋಹಿತ್ ಶರ್ಮಾ ನೀಡಿರುವ ಸಲಹೆ ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದ್ದಾರೆ.

ಓರ್ವ ಕ್ರಿಕೆಟಿಗರಾಗಿ ನಿಮ್ಮ ಯಶಸ್ಸಿಗಾಗಿ ಸಹಾಯ ಮಾಡುವುದಕ್ಕಾಗಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಅನೇಕ ಜನರಿರುತ್ತಾರೆ. ಪಂದ್ಯಕ್ಕೂ ಮೊದಲು ಐಪಿಎಲ್‌ನಲ್ಲಿ ಆಡುತ್ತಿರುವಂತೆ ಹಾಯಾಗಿ ಇನ್ನಿಂಗ್ಸ್ ಆರಂಭಿಸುವಂತೆ ರೋಹಿತ್ ಶರ್ಮಾ ಸಲಹೆ ನೀಡಿದ್ದರು. ಸ್ಪಷ್ಟ ಮನೋಸ್ಥಿತಿಯಿಂದ ಕ್ರಿಕೆಟ್ ಆಡಲು ತಿಳಿಸಿದ್ದರು ಎಂದು ಇಶಾನ್ ಕಿಶನ್ ವಿವರಿಸಿದರು.

ಹಾಯಾಗಿ ಬ್ಯಾಟಿಂಗ್ ಮಾಡಲು ಹಿರಿಯ ಆಟಗಾರರು ಸಲಹೆ ನೀಡಿದರು. ಯಾಕೆಂದರೆ ಇಂಗ್ಲೆಂಡ್‌ನಂತಹ ಗುಣಮಟ್ಟದ ತಂಡದ ವಿರುದ್ಧ ಮೊದಲ ಪಂದ್ಯ ಆಡುವುದು ಅಷ್ಟು ಸುಲಭವಲ್ಲ. ಈ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವುದು ನೆರವಾಗಿದೆ. ಕೊನೆಯ ವರೆಗೂ ಆಡಲು ಬಯಸಿದ್ದೆ. ಆದರೆ ಬೇಗನೇ ಔಟಾಗಿರುವುದು ನಿರಾಸೆ ತಂದಿದೆ. ಟಾಮ್ ಕರನ್ ದಾಳಿಯಲ್ಲಿ ಸಿಕ್ಸರ್ ಬಾರಿಸಿರುವುದು ನನ್ನ ಪಾಲಿಗೆ ವಿಶೇಷ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಕೆಲವು ದಿನಗಳ ಹಿಂದೆ ದಿವಂಗತರಾಗಿರುವ ತರಬೇತುದಾರನ ತಂದೆಗೆ ಅರ್ಪಿಸಿದರು. ನನ್ನ ಅಪ್ಪನಿಗಾಗಿ ಅರ್ಧಶತಕ ಬಾರಿಸಬೇಕು ಎಂದವರು ಬಯಸಿದ್ದರು. ಹಾಗಾಗಿ ಈ ಅರ್ಧಶತಕವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ನಿಸ್ಸಂಶಯವಾಗಿಯೂ ಕ್ರೀಸಿಗಿಳಿದಾಗ ನಾನು ನರ್ವಸ್ ಆಗಿದ್ದೆ. ಆದರೆ ಅಂತಿಮವಾಗಿ ನೀಲಿ ಜೆರ್ಸಿ ಧರಿಸಿ ದೇಶಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡಲು ಬಯಸಿದ್ದೆ ಎಂದು ಹೇಳಿದರು.

ಇಶಾನ್ ಜೊತೆಗಿದ್ದ ಅಂಡರ್-19 ಆಟಗಾರರಾದ ರಿಷಭ್ ಪಂತ್ ಹಾಗೂ ವಾಷಿಂಗ್ಟನ್ ಸುಂದರ್ ಅತ್ಯುತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಈ ಬಗ್ಗೆ ಕೇಳಿದಾಗ, ಅಂಡರ್-19 ಸಹ ಆಟಗಾರರ ಪ್ರದರ್ಶನ ನೋಡಿ ಅತಿಯಾದ ಸಂತೋಷವಾಗುತ್ತಿದೆ ಎಂದು ಹೇಳಿದರು.

ಆರಂಭಿಕನಾಗಿ ಕಣಕ್ಕಿಳಿದಿರುವ ಬಗ್ಗೆ ಪ್ರಶ್ನಿಸಿದಾಗ, ನನ್ನ ಕೌಶಲ್ಯವನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುತ್ತೇನೆ. ಪ್ರತಿ ದಿನವೂ ಕ್ರಿಕೆಟ್ ಬಗ್ಗೆ ಯೋಚಿಸುತ್ತೇನೆ. ಕ್ರಿಕೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಕ್ರಮಾಂಕಗಳಿಲ್ಲ, ತೇಲುತ್ತಲೇ ಇರಬೇಕು. ನಾನು ಕ್ರಮಾಂಕದ ಬಗ್ಗೆ ಯೋಚಿಸುತ್ತಿಲ್ಲ. ತಂಡದ ಅಗತ್ಯಕ್ಕೆ ತಕ್ಕಂತೆ ನನ್ನ ಪಾತ್ರ ನಿಭಾಯಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

32 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ ಐದು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ 56 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT