ಶನಿವಾರ, ಮಾರ್ಚ್ 6, 2021
28 °C

ದಾಖಲೆಗಾಗಿ ಆಡುತ್ತಿಲ್ಲ; ಧೋನಿ ಸಾಧನೆ ಮುರಿಯುವ ಕುರಿತು ಕೊಹ್ಲಿ ಪ್ರತಿಕ್ರಿಯೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಭಾರತ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ಗೆಲುವುಗಳನ್ನು ದಾಖಲಿಸಿದ ನಾಯಕ ಎಂಬ ದಾಖಲೆಗೆ ಪಾತ್ರರಾಗಲು ಕಪ್ತಾನ ವಿರಾಟ್ ಕೊಹ್ಲಿಗಿನ್ನು ಕೇವಲ ಒಂದು ಗೆಲುವಿನ ಅವಶ್ಯಕತೆಯಿದೆ.

ಈ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ. ಆದರೆ ಕಪ್ತಾನ ವಿರಾಟ್ ಕೊಹ್ಲಿ ಮಾತ್ರ ಈ ಬಗ್ಗೆ ಚಿಂತಿತರಾಗಿಲ್ಲ. ಅಲ್ಲದೆ ತಾವು ದಾಖಲೆಗಾಗಿ ಆಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯವು ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಮೊಟೆರಾ ಸ್ಟೇಡಿಯಂನಲ್ಲಿ ಫೆಬ್ರುವರಿ 23 ಬುಧವಾರದಂದು ಆರಂಭವಾಗಲಿದೆ. ಈ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಮುನ್ನ ದಿನ ನಡೆದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಧೋನಿ ದಾಖಲೆಯನ್ನು ಮೀರಿಸುವುದು ನನ್ನ ಪಾಲಿಗೆ ಯಾವುದೇ ವಿಶೇಷ ಅರ್ಥವನ್ನು ಕಲ್ಪಿಸುವುದಿಲ್ಲ. ದಾಖಲೆಯನ್ನು ವೈಯಕ್ತಿಕ ದೃಷ್ಟಿಕೋನದಿಂದ ನೋಡಲಾಗಿದೆ. ಆದರೆ ನಾವು ಅಂತಹ ದಾಖಲೆಗಾಗಿ ಆಡುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: 

ತಾವೂ ಎಂದಿಗೂ ವೈಯಕ್ತಿಕ ಮೈಲಿಗಲ್ಲಿಗಾಗಿ ಆಡಿಲ್ಲ ಎಂದು ಕೊಹ್ಲಿ ಸ್ಪಷ್ಟಪಡಿಸಿದರು. ಅಲ್ಲದೆ ಭವಿಷ್ಯದ ಭಾರತ ನಾಯಕರಿಂದಲೂ ಇದನ್ನೇ ನಿರೀಕ್ಷೆ ಮಾಡುವುದಾಗಿಯೂ ತಿಳಿಸಿದರು.

ಓರ್ವ ಬ್ಯಾಟ್ಸ್‌ಮನ್ ಆಗಿ ವೈಯಕ್ತಿಕ ದಾಖಲೆ ಅಥವಾ ಕಪ್ತಾನರಾಗಿ ಅತಿ ಹೆಚ್ಚಿನ ಗೆಲುವುಗಳ ದಾಖಲೆಗಳೇ ಆಗಿರಲಿ ನಾನು ನನಗೆ ನೀಡಲಾಗಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ. ಯಾವತ್ತೂ ಈ ಭಾವನೆಯೊಂದಿಗೆ ಕ್ರಿಕೆಟ್ ಆಡಲಿದ್ದೇನೆ. ಹೊರಗಿನಿಂದ ಆಟಗಾರರನ್ನು ಹೋಲಿಕೆ ಮಾಡುವುದು ಉತ್ತಮವಾಗಿ ಕಾಣಬಹುದು. ಆದರೆ ನನ್ನ ಪಾಲಿಗೆ ಇವೆಲ್ಲ ಅಪ್ರಸ್ತುತವಾಗಿದೆ ಎಂದು ಹೇಳಿದರು.

ಧೋನಿ ಹಾಗೂ ನಾನು ಉತ್ತಮ ಸೌಹಾರ್ದ ಹಾಗೂ ಪರಸ್ಪರ ಗೌರವವನ್ನು ಹಂಚಿಕೊಂಡಿದ್ದೇವೆ. ನಿಜವಾಗಿಯೂ ನನ್ನ ಹೃದಯಕ್ಕೆ ಹತ್ತಿರವಾಗಿದ್ದಾರೆ. ಅದರ ಮಹತ್ವವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಟೀಮ್ ಇಂಡಿಯಾವನ್ನು ಅಗ್ರಸ್ಥಾನದಲ್ಲಿಡುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ಬಳಿಕ ಬರುವ ಭವಿಷ್ಯದ ನಾಯಕರಿಗೂ ಇದು ಅನ್ವಯಿಸುತ್ತದೆ ಎಂದು ಹೇಳಿದರು.

ಧೋನಿ ಹಾಗೂ ಕೊಹ್ಲಿ ತವರು ನೆಲದಲ್ಲಿ ತಲಾ 21 ಟೆಸ್ಟ್ ಗೆಲುವುಗಳನ್ನು ದಾಖಲಿಸಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೇ ಧೋನಿ ದಾಖಲೆಯನ್ನು ಕೊಹ್ಲಿ ಮುರಿಯುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು