ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮೂಲದ ಎಜಾಜ್ ಪಟೇಲ್ 10 ವಿಕೆಟ್ ಸಾಧನೆಯನ್ನು ಕೊಂಡಾಡಿದ ಕ್ರಿಕೆಟ್ ಲೋಕ

Last Updated 4 ಡಿಸೆಂಬರ್ 2021, 10:45 IST
ಅಕ್ಷರ ಗಾತ್ರ

ಮುಂಬೈ: ಟೆಸ್ಟ್ ಪಂದ್ಯದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಪಡೆದ ಸಾಧನೆ ಮಾಡಿದ ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ಅವರನ್ನು ಕ್ರಿಕೆಟ್ ಜಗತ್ತಿನ ಗಣ್ಯರು ಕೊಂಡಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬೌಲರ್ ಆಗಿ ಮುಂಬೈ ಮೂಲದವರೂ ಆಗಿರುವ ಎಜಾಜ್ ಪಟೇಲ್ ಹೊರಹೊಮ್ಮಿದ್ದಾರೆ. ಈಗಾಗಲೇ ಇಂಗ್ಲೆಂಡ್‌ನ ಜಿಮ್ ಲೇಕರ್ (1956) ಹಾಗೂ ಅನಿಲ್ ಕುಂಬ್ಳೆ (1999) ಒಂದೇ ಇನ್ನಿಂಗ್ಸ್‌ನಲ್ಲಿ10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

‘ನಮ್ಮ (10 ವಿಕೆಟ್ ಸಾಧಕರ) ಕೂಟಕ್ಕೆ ಸ್ವಾಗತ. ಎಜಾಜ್ ಪಟೇಲ್ ಅತ್ಯುತ್ತಮ ಬೌಲಿಂಗ್ ಮಾಡಿದರು. ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲೇ ಈ ಸಾಧನೆ ಮಾಡಲು ವಿಶೇಷ ಪ್ರಯತ್ನ ಬೇಕು’ ಎಂದು ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್, ಕನ್ನಡಿಗ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ಅನಿಲ್ ಕುಂಬ್ಳೆ ಅವರು 1999ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಟೆಸ್ಟ್‌ನಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿದ್ದರು.

10 ವಿಕೆಟ್ ಸಾಧನೆಯೊಂದಿಗೆ, ಭಾರತದಲ್ಲಿ ಅತ್ಯುತ್ತಮ ನಿರ್ವಹಣೆಯ ದಾಖಲೆಯನ್ನು ಪಟೇಲ್ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾದ ನಾಥನ್ ಲಿಯಾನ್ 2017ರಲ್ಲಿ 50 ರನ್ ನೀಡಿ 8 ವಿಕೆಟ್ ಪಡೆದಿದ್ದರು.

‘ನನ್ನ 15 ವರ್ಷಗಳ ಕ್ರಿಕೆಟ್ ವೀಕ್ಷಕ ವಿವರಣೆ ವೃತ್ತಿಯಲ್ಲಿ ಅನೇಕ ಅದ್ಭುತ ವಿಷಯಗಳನ್ನು ನೋಡುವ ಸೌಭಾಗ್ಯ ನನಗೆ ದೊರೆತಿದೆ. ಇಂದು ಎಜಾಜ್ ಪಟೇಲ್ ಮಾಡಿದ ಸಾಧನೆ ಅದರಲ್ಲಿ ಮಹತ್ವವಾದದ್ದು’ ಎಂದು ನ್ಯೂಜಿಲೆಂಡ್‌ನ ಮಾಜಿ ವೇಗಿ, ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಟ್ವೀಟ್ ಮಾಡಿದ್ದಾರೆ.

‘ಕ್ರಿಕೆಟ್‌ ಆಟದಲ್ಲಿ ಮಾಡಬಹುದಾದ ಅತಿ ಕಠಿಣ ಸಾಧನೆ. ಒಂದು ಇನ್ನಿಂಗ್ಸ್‌ನಲ್ಲಿ ಇಡೀ ತಂಡವನ್ನು ಔಟ್ ಮಾಡುವುದು ನಿಜವಾಗಿಯೂ ಅತ್ಯುತ್ತಮ ಸಾಧನೆ. ಅದ್ಭುತವಾಗಿ ಆಡಿದಿರಿ ಎಜಾಜ್ ಪಟೇಲ್’ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.

‘ಇದು ನಾನು ನೋಡಿದ ಅತ್ಯಂತ ಅದ್ಭುತವಾದ ಪ್ರದರ್ಶನ. ಎಜಾಜ್ ಪಟೇಲ್‌ರಿಂದ ಎಂತಹ ಅದ್ಬುತ ಪ್ರದರ್ಶನ’ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಆ್ಯರನ್ ಫಿಂಚ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT