ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ: ಸೋಲಿನ ಸುಳಿಯಲ್ಲಿ ಕಿವೀಸ್; ಸರಣಿ ಗೆಲುವಿನತ್ತ ಭಾರತ

Last Updated 5 ಡಿಸೆಂಬರ್ 2021, 12:38 IST
ಅಕ್ಷರ ಗಾತ್ರ

ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲನ್ನಿಟ್ಟಿದೆ.

540 ರನ್‌ಗಳ ಬೃಹತ್ ಗೆಲುವಿನ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್, ಮೂರನೇ ದಿನದಾಟದ ಅಂತ್ಯಕ್ಕೆ 45 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ ಸಂಕಷ್ಟದಲ್ಲಿದೆ.

ಕಿವೀಸ್ ಈಗಲೂ 400 ರನ್‌ಗಳ ಹಿನ್ನಡೆಯಲ್ಲಿದೆ. ಇದರಿಂದಾಗಿ ವಿರಾಟ್ ಕೊಹ್ಲಿ ಬಳಗವು ಪಂದ್ಯ ಹಾಗೂ ಸರಣಿ ಗೆಲುವು ದಾಖಲಿಸುವುದು ಬಹುತೇಕ ಖಚಿತವೆನಿಸಿದೆ. ಇನ್ನೊಂದೆಡೆ ನ್ಯೂಜಿಲೆಂಡ್ ತಂಡವು ಸೋಲಿನ ಅಂತರವನ್ನು ತಗ್ಗಿಸಲು ಪ್ರಯತ್ನಿಸಲಿದೆ.

ಡ್ಯಾರಿಲ್ ಮಿಚೆಲ್ 60 ರನ್ ಗಳಿಸಿ ಔಟಾದರು. ಅತ್ತ ಹೆನ್ರಿ ನಿಕೋಲ್ಸ್ (36*) ದಿಟ್ಟ ಹೋರಾಟ ಮುಂದುವರಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲೂ ಕಿವೀಸ್ ಓಟಕ್ಕೆ ಕಡಿವಾಣ ಹಾಕಿದ ಆರ್. ಅಶ್ವಿನ್ ಮೂರು ವಿಕೆಟ್ ಕಿತ್ತು ಮಿಂಚಿದರು.

ವಿಕೆಟ್ ನಷ್ಟವಿಲ್ಲದೆ 69 ರನ್‌ನಿಂದ ಮೂರನೇ ದಿನದಾಟ ಮುಂದುವರಿಸಿದ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್‌‌ನಲ್ಲಿ ಏಳು ವಿಕೆಟ್ ನಷ್ಟಕ್ಕೆ 276 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಾಧನೆ ಮಾಡಿರುವ ಮಯಂಕ್ ಮಗದೊಂದು ಆಕರ್ಷಕ ಅರ್ಧಶತಕ (62) ಗಳಿಸಿದರು. ಅಲ್ಲದೆ ಪೂಜಾರ ಜೊತೆಗೆ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು.

ಶುಭಮನ್ ಗಿಲ್ 47 ಹಾಗೂ ನಾಯಕ ವಿರಾಟ್ ಕೊಹ್ಲಿ 36 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಕೆಳ ಕ್ರಮಾಂಕದಲ್ಲಿ ಕೇವಲ 26 ಎಸೆತಗಳಲ್ಲಿ (4 ಸಿಕ್ಸರ್, 3 ಬೌಂಡರಿ) ಅಜೇಯ 41 ರನ್ ಗಳಿಸಿದ ಅಕ್ಷರ್ ಪಟೇಲ್ ಗಮನ ಸೆಳೆದರು. ಇನ್ನುಳಿದಂತೆ ಶ್ರೇಯಸ್ ಅಯ್ಯರ್ 14 ಹಾಗೂ ವೃದ್ಧಿಮಾನ್ ಸಹಾ 13 ರನ್ ಗಳಿಸಿದರು.

ಕಿವೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿರುವ ಎಜಾಜ್ ಪಟೇಲ್ ಮತ್ತೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 14 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡರು. ಇದು ಭಾರತ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಎದುರಾಳಿ ಬೌಲರ್‌ನಿಂದ ದಾಖಲಾದ ಸರ್ವಶ್ರೇಷ್ಠ ಪ್ರದರ್ಶನವಾಗಿದೆ.

ಈ ಮೊದಲು ಭಾರತದ 325 ರನ್ನಿಗೆ ಉತ್ತರವಾಗಿ ನ್ಯೂಜಿಲೆಂಡ್ ಕೇವಲ 62 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ 263 ರನ್‌ಗಳ ಬೃಹತ್ ಮುನ್ನಡೆಯನ್ನು ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT