ಮಂಗಳವಾರ, ಜನವರಿ 25, 2022
24 °C

ಎಜಾಜ್‌ 10 ವಿಕೆಟ್‌ ಸಾಧನೆ ತಪ್ಪಿಸಲು ಡಿಕ್ಲೇರ್‌ ಮಾಡುವಂತೆ ಮನವಿ: ವಿಡಿಯೊ ನೋಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Twitter

ಮುಂಬೈ: ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್‌ ಎಜಾಜ್‌ ಪಟೇಲ್‌ ಅವರು ಭಾರತದ ವಿರುದ್ಧದ ಟೆಸ್ಟ್‌ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳ ಸಾಧನೆ ಹಂತದಲ್ಲಿದ್ದಾಗ 'ಡಿಕ್ಲೇರ್‌ ಕರ್‌, ಡಿಕ್ಲೇರ್‌ ಕರ್‌' ಎಂದು ಟೀಂ ಇಂಡಿಯಾದ ಕೆಲವು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.

ಒಂದು ವೇಳೆ ನಾಯಕ ವಿರಾಟ್‌ ಕೊಹ್ಲಿ ಡಿಕ್ಲೇರ್‌ ಮಾಡಿದಿದ್ದರೆ ಎಜಾಜ್‌ ಪಟೇಲ್‌ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. 109ನೇ ಓವರ್‌ 2ನೇ ಎಸತಕ್ಕೆ ಜಯಂತ್‌ ಯಾದವ್‌ ಅವರ ವಿಕೆಟ್‌ ಕಬಳಿಸುವುದರೊಂದಿಗೆ 9 ವಿಕೆಟ್‌ಗಳನ್ನು ಎಜಾಜ್‌ ತಮ್ಮ ಜೋಳಿಗೆಗೆ ಹಾಕಿಕೊಂಡಿದ್ದರು. ಇನ್ನೇನು ಜಿಮ್‌ ಲೇಕರ್‌ ಮತ್ತು ಅನಿಲ್‌ ಕುಂಬ್ಳೆ ಅವರ ಸಾಧನೆಯನ್ನು ಸರಿಗಟ್ಟುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಕೆಲವು ಅಭಿಮಾನಿಗಳು 'ಡಿಕ್ಲೇರ್‌ ಕರ್, ಡಿಕ್ಲೇರ್‌ ಕರ್‌' ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.

ಅದೇ ಓವರ್‌ನ 5ನೇ ಎಸೆತದಲ್ಲಿ ಮೊಹಮ್ಮದ್‌ ಸಿರಾಜ್‌ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಮಾಡಿದರು. ಮುಂಬೈ ಮೂಲಕ ಎಜಾಜ್‌ ಪಟೇಲ್‌ ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಈ ಸಾಧನೆ ಮಾಡಿದ್ದು ಭಾರತೀಯರಿಗೂ ಖುಷಿಯನ್ನು ನೀಡಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲೌಟ್‌ ಆಯಿತು.

ಅನಿಲ್‌ ಕುಂಬ್ಳೆ ಅವರು ಟೀಮ್‌ ಇಂಡಿಯಾ ತರಬೇತುದಾರರಾಗಿದ್ದ ಸಂದರ್ಭ ವಿರಾಟ್‌ ಕೊಹ್ಲಿ ಜೊತೆಗಿನ ಮನಸ್ತಾಪದ ವಿಚಾರಗಳನ್ನು ಕೆದಕಿರುವ ಕೆಲವು ಟ್ರೋಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಎಜಾಜ್‌ 10 ವಿಕೆಟ್‌ ಸಾಧನೆಯ ಸಮೀಪವಿದ್ದಾಗ ಕೊಹ್ಲಿ ಡಿಕ್ಲೇರ್‌ ಮಾಡದೆ ಕುಂಬ್ಳೆ ಸಾಧನೆಯನ್ನು ಸರಿಗಟ್ಟಲು ಅನುವು ಮಾಡಿಕೊಟ್ಟರು ಎಂಬರ್ಥದಲ್ಲಿ ಕಾಲೆಳೆದಿದ್ದಾರೆ. 

ಎಜಾಜ್‌ ಪಟೇಲ್‌ ಅವರಿಗೆ ಅಭಿನಂದನೆ ತಿಳಿಸಿರುವ ಅನಿಲ್‌ ಕುಂಬ್ಳೆ, '10 ವಿಕೆಟ್‌ ಸಾಧಕರ ಕ್ಲಬ್‌ಗೆ ಸ್ವಾಗತ' ಎಂದು ಟ್ವೀಟ್‌ ಮಾಡಿದ್ದಾರೆ.

ಶ್ರುತಿಕಾ ಗಾಯಕ್‌ವಾಡ್‌ ಎಂಬುವವರು ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, 'ಎಜಾಜ್‌ ಪಟೇಲ್‌ 10 ವಿಕೆಟ್‌ ಗಳಿಸುವುದನ್ನು ನೋಡಲು ಯಾರಿಗೂ ಇಷ್ಟವಿಲ್ಲ' ಎಂದು ನಾಯಕ ವಿರಾಟ್‌ ಕೋಹ್ಲಿ ಅವರನ್ನು ಟ್ಯಾಗ್‌ ಮಾಡಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು