ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಕೋಚ್ ದ್ರಾವಿಡ್ ಅನುಭವವು ನನ್ನಂಥ ಹಲವು ಆಟಗಾರರಿಗೆ ನೆರವು ನೀಡಲಿದೆ: ಪೂಜಾರ

Last Updated 23 ನವೆಂಬರ್ 2021, 11:46 IST
ಅಕ್ಷರ ಗಾತ್ರ

ಕಾನ್ಪುರ (ಉತ್ತರಪ್ರದೇಶ):ಭಾರತ ಕ್ರಿಕೆಟ್ ತಂಡದ ಮುಖ್ಯಕೋಚ್ ಆಗಿ ನೇಮಕವಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಅನುಭವವು ತಂಡದ ಬೆಳವಣಿಗೆಗೆ ಸಹಕಾರಿ ಎಂದು ಟೆಸ್ಟ್ ಪರಿಣತ ಬ್ಯಾಟರ್ ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.

ದ್ರಾವಿಡ್ ಕೋಚ್ ಆಗಿ ನೇಮಕಗೊಂಡ ಬಳಿಕ ಆಡಿದ ಮೊದಲ ಟಿ20 ಸರಣಿಯಲ್ಲಿ (ನ್ಯೂಜಿಲೆಂಡ್ ವಿರುದ್ಧ) ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇದೀಗ 2 ಪಂದ್ಯಗಳ ಟೆಸ್ಟ್ ಸರಣಿಗೆ ಸಿದ್ಧತೆ ನಡೆಯುತ್ತಿದೆ.

ಬರೋಬ್ಬರಿ 164 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ದ್ರಾವಿಡ್, ಅಪಾರ ಅನುಭವ ಹೊಂದಿದ್ದಾರೆ. ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಪೂಜಾರ, 'ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನಾವು ಆಘಾತ ಅನುಭವಿಸಿದ್ದೆವು. ಆದರೆ, ಇಂಗ್ಲೆಂಡ್‌ನಲ್ಲಿ ಉತ್ತಮವಾಗಿ ಆಡುವುದರೊಂದಿಗೆ ಪ್ರಬಲವಾಗಿ ಆಟಕ್ಕೆ ಮರಳಿದೆವು. ಈಗ ಮತ್ತೆ ಒಂದಾಗಿ ಸೇರಿದ್ದೇವೆ. ಆತ್ಮವಿಶ್ವಾಸ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ನಮ್ಮೊಂದಿಗಿದ್ದಾರೆ'

'ಇದರಿಂದ ಸಾಕಷ್ಟು ಆಟಗಾರರಿಗೆ, ಮುಖ್ಯವಾಗಿ 19 ವರ್ಷದೊಳಗಿನವರ ತಂಡದಲ್ಲಿ ಮತ್ತು ಭಾರತ 'ಎ' ಸರಣಿಗಳಲ್ಲಿ ಆಡಿರುವ ಯುವ ಆಟಗಾರರಿಗೆ ನೆರವಾಗಲಿದೆ. ನಮ್ಮಂತಹ ಅನುಭವಿ ಆಟಗಾರರಿಗೂ ಸಹಕಾರಿಯಾಗಲಿದೆ. ನಾನು ರಾಹುಲ್ ಅವರೊಂದಿಗೆ ಆಡಿದ್ದೇನೆ ಮತ್ತು ಭಾರತ 'ಎ' ಸರಣಿ ಸಂದರ್ಭದಲ್ಲಿ ಅವರೊಂದಿಗೆ ಕೆಲಸ ಮಾಡಿದ್ದೇನೆ. ನಾವೆಲ್ಲರೂ ಅವರ ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇವೆ. ಅವರು ಆಟಗಾರನಾಗಿ ಮತ್ತು ಕೋಚ್‌ ಆಗಿ ಹೊಂದಿರುವ ಅಪಾರ ಅನುಭವವು ತಂಡಕ್ಕೆ ಸಹಾಯ ಮಾಡಲಿದೆ' ಎಂದೂ ವಿವರಿಸಿದ್ದಾರೆ.

'ಕಿವೀಸ್ ದಾಳಿಗೆ ಸಿದ್ಧತೆ ನಡೆಸಿದ್ದೇವೆ'
'ನ್ಯೂಜಿಲೆಂಡ್‌ನ ಪ್ರಮುಖ ವೇಗಿ ನೀಲ್ ವ್ಯಾಗ್ನರ್ ವಿರುದ್ಧ ರಣತಂತ್ರಗಳನ್ನು ರೂಪಿಸಿದ್ದೇವೆ. 2017ರಲ್ಲೇ ಅವರ ಬೌಲಿಂಗ್ ಅನ್ನು ಎದುರಿಸಿದ್ದೇವೆ. ಹಾಗಾಗಿ ಅವರು ಭಾರತದ ಸನ್ನಿವೇಶದಲ್ಲಿ ಹೇಗೆ ಬೌಲಿಂಗ್ ಮಾಡಲಿದ್ದಾರೆ ಎಂಬುದು ಗೊತ್ತಿದೆ. ಅದರಂತೆ ಯೋಜನೆ ಸಿದ್ಧಪಡಿಸಿದ್ದೇವೆ' ಎಂದು ವಿಶ್ವಾಸದಿಂದ ಹೇಳಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ಬ್ಯಾಟರ್ ಆಗಿರುವ ಪೂಜಾರ ಇತ್ತೀಚಿನ ದಿನಗಳಲ್ಲಿ ಶತಕದ ಬರ ಅನುಭಸುತ್ತಿದ್ದಾರೆ. ಈ ಬಗ್ಗೆಯೂ ಮಾತನಾಡಿರುವ ಅವರು, 'ನಾನು 50, 80 ಅಥವಾ 90 ರನ್ ಗಳಿಸಿದ್ದೇನೆ. ಶತಕ ಗಳಿಸಲು ಸಾಧ್ಯವಾಗಿಲ್ಲ. ಆದರೂ ಚೆನ್ನಾಗಿ ಬ್ಯಾಟಿಂಗ್ ಮಾಡಿ, ತಂಡದ ಮೊತ್ತಕ್ಕೆ ಕೊಡುಗೆ ನೀಡುತ್ತಿರುವವರೆಗೆ ಆ ಬಗ್ಗೆ ಚಿಂತಿಸುವುದಿಲ್ಲ. ತಂಡಕ್ಕಾಗಿ ನನ್ನ ಶ್ರೇಷ್ಠ ಪ್ರದರ್ಶನ ನೀಡುವುದರತ್ತ ಗಮನ ಹರಿಸುತ್ತೇನೆ' ಎಂದೂ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 25ರಿಂದ 29ರ ವರೆಗೆ ಮತ್ತು ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ 7ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT