ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ತಂಡ ಭಾರತಕ್ಕಿಂತ ದುರ್ಬಲವಾಗಿದೆ: ಪಾಕ್ ಮಾಜಿ ಕ್ರಿಕೆಟಿಗ ವಕಾರ್

Published 29 ಸೆಪ್ಟೆಂಬರ್ 2023, 10:03 IST
Last Updated 29 ಸೆಪ್ಟೆಂಬರ್ 2023, 10:03 IST
ಅಕ್ಷರ ಗಾತ್ರ

ಚೆನ್ನೈ: ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ ಪಾಕಿಸ್ತಾನ ತಂಡವು ಭಾರತಕ್ಕಿಂತ ದುರ್ಬಲವಾಗಿದೆ. ಉಭಯ ತಂಡಗಳ ಹಣಾಹಣಿಯು ಉಳಿದೆಲ್ಲ ಪಂದ್ಯಗಳ ತಾಯಿ ಇದ್ದಂತೆ ಎಂದು ದಿಗ್ಗಜ ವೇಗದ ಬೌಲರ್‌ ವಕಾರ್‌ ಯೂನಿಸ್‌ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯವಾದ ಏಷ್ಯಾ ಕಪ್‌ ಟೂರ್ನಿಯ ಸೂಪರ್‌–4 ಪಂದ್ಯದಲ್ಲಿ ರೋಹಿತ್‌ ಶರ್ಮ ನಾಯಕತ್ವದ ಟೀಂ ಇಂಡಿಯಾ, ಬಾಬರ್‌ ಅಜಂ ನೇತೃತ್ವದ ಪಾಕಿಸ್ತಾನ ವಿರುದ್ಧ 228 ರನ್ ಅಂತರದ ಬೃಹತ್‌ ಗೆಲುವು ದಾಖಲಿಸಿತ್ತು.

ಉಭಯ ತಂಡಗಳು ಅಕ್ಟೋಬರ್‌ 14ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗಲಿವೆ. ಈ ಪಂದ್ಯದ ಕುರಿತು ಮಾತನಾಡಿರುವ ಯೂನಿಸ್, ಎರಡೂ ತಂಡಗಳ ಮೇಲೆ ಒತ್ತಡವಿದೆ ಎಂದಿದ್ದಾರೆ.

'ನಮಗೆಲ್ಲ ತಿಳಿದಿರುವಂತೆ ಇದು (ಭಾರತ vs ಪಾಕಿಸ್ತಾನ) ಅತ್ಯಂತ ದೊಡ್ಡ ಹಣಾಹಣಿಯಾಗಿದ್ದು, ಉಳಿದೆಲ್ಲ ಪಂದ್ಯಗಳ ತಾಯಿ ಇದ್ದಂತೆ. ಹಾಗಾಗಿ, ಅಹಮದಾಬಾದ್‌ನಲ್ಲಿ ಆಡುವಾಗ, ಒತ್ತಡವನ್ನು ನಿಯಂತ್ರಿಸಿ ಆಡಬೇಕು ಮತ್ತು ಭಾರತ ತಂಡಕ್ಕಿಂತ ಪಾಕಿಸ್ತಾನ ದುರ್ಬಲವಾಗಿದ್ದರೂ ಒತ್ತಡ ಎರಡೂ ತಂಡಗಳಿಗೆ ಇರಲಿದೆ. ಕ್ರೀಡಾಂಗಣದಲ್ಲಿ ಸೇರುವ ಅಭಿಮಾನಿಗಳು ಎರಡೂ ತಂಡಗಳಿಗೆ ಒತ್ತಡವನ್ನು ಸೃಷ್ಟಿಸಲಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ತಂಡಗಳ ಪ್ರದರ್ಶನದ ಆಧಾರದಲ್ಲಿ ಹೇಳುವುದಾದರೆ, ಟೀಂ ಇಂಡಿಯಾ ಖಂಡಿತವಾಗಿಯೂ ಉತ್ತಮ ತಂಡವಾಗಿದೆ' ಎಂದಿರುವ ಯೂನಿಸ್‌, ಪಾಕಿಸ್ತಾನದ ಅಸ್ಥಿರ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಜತೆಗೆ, ಯುವ ವೇಗಿ ನಸೀಂ ಶಾ ಗಾಯಗೊಂಡು ತಂಡದಿಂದ ಹೊರಗುಳಿದಿರುವುದು ಭಾರಿ ನಷ್ಟವನ್ನುಂಟುಮಾಡಲಿದೆ ಎಂದು ವಿಶ್ಲೇಷಿಸಿದ್ದಾರೆ.

'ಪಾಕಿಸ್ತಾನ ತಂಡಕ್ಕೆ ನಸೀಂ ಶಾ ಅನುಪಸ್ಥಿತಿ ಕಾಡಲಿದೆ. ಏಕೆಂದರೆ ವೇಗದ ಬೌಲರ್‌ಗಳಾದ ನಸೀಂ ಮತ್ತು ಶಾಹೀನ್‌ ಅಫ್ರಿದಿ ಹೊಸ ಚೆಂಡಿನ ದಾಳಿಯಲ್ಲಿ ಒಬ್ಬರಿಗೊಬ್ಬರು ಪೂರಕವಾಗಿದ್ದರು. ಇದೀಗ ನಸೀಂ ಬದಲು ಹಸನ್ ಅಲಿ ಹೆಸರನ್ನು ಪ್ರಕಟಿಸಲಾಗಿದೆ. ಸಾಕಷ್ಟು ಅನುಭವ ಹೊಂದಿರುವ ಅಲಿ, ಈ ಹಿಂದೆಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಬಂದು ಇಂತಹ ದೊಡ್ಡ ಹಂತದಲ್ಲಿ ಪ್ರದರ್ಶನ ನೀಡುವುದು ಅವರಿಗೆ ಸರಳ ಸಂಗತಿಯಾಗಲಾರದು' ಎಂದು ವಿವರಿಸಿದ್ದಾರೆ.

'ಸದ್ಯದ ಮಟ್ಟಿಗೆ ಭಾರತ ತಂಡ ಎಲ್ಲ ವಿಭಾಗಗಳಲ್ಲಿಯೂ ಸಮರ್ಥವಾಗಿದೆ. ಅಷ್ಟು ಬಲಿಷ್ಠವಾದ ಇನ್ನೊಂದು ತಂಡವಿಲ್ಲ. ಅವಕಾಶಕ್ಕಾಗಿ ಎದುರು ನೋಡುತ್ತಿರುವ ಇನ್ನಷ್ಟು ಬಲಿಷ್ಠ ಆಟಗಾರರು ಬೆಂಚ್‌ ಕಾಯುತ್ತಿದ್ದಾರೆ' ಎಂದು ವಿಶ್ಲೇಷಿಸಿದ್ದಾರೆ.

ಇಂದಿನಿಂದ ಅಭ್ಯಾಸ ಆರಂಭ
ವಿಶ್ವಕಪ್‌ ಟೂರ್ನಿಯ ಅಭ್ಯಾಸ ಪಂದ್ಯಗಳು ಇಂದಿನಿಂದ ಆರಂಭವಾಗಿವೆ. ಗುವಾಹಟಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಮುಖಾಮುಖಿಯಾಗಿವೆ.

ತಿರುವನಂತಪುರ ಮತ್ತು ಹೈದರಾಬಾದ್‌ನಲ್ಲಿ ನಿಗದಿಯಾಗಿರುವ ಉಳಿದರೆಡು ಪಂದ್ಯಗಳಿಗೆ ಮಳೆ ಅಡ್ಡಿಯಾಗಿದೆ. ತಿರುವನಂತಪುರದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಗಾನಿಸ್ತಾನ, ಹೈದರಾಬಾದ್‌ನಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಕಸರತ್ತು ನಡೆಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT