ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾಕಪ್ ಟಿ20| ಮರಳಿ ಅರಳಿದ ವಿರಾಟ್ ಕೊಹ್ಲಿ

ಏಷ್ಯಾಕಪ್ ಟಿ20: ರೋಹಿತ್ –ರಾಹುಲ್ ಅಬ್ಬರದ ಆರಂಭ;
Last Updated 4 ಸೆಪ್ಟೆಂಬರ್ 2022, 18:22 IST
ಅಕ್ಷರ ಗಾತ್ರ

ದುಬೈ: ಬಹುಕಾಲದ ನಂತರ ವಿರಾಟ್ ಕೊಹ್ಲಿ ಬ್ಯಾಟಿಂಗ್ ರಂಗೇರಿತು. ದುಬೈ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಪಾಕಿಸ್ತಾನ ತಂಡದ ಬೌಲರ್‌ಗಳಿಗೆ ವಿರಾಟ್ ಬಿಸಿ ಮುಟ್ಟಿಸಿದರು. ಅಂದದ ಅರ್ಧಶತಕ ಗಳಿಸಿದರು.

ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ಎದುರು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 181 ರನ್‌ ಗಳಿಸಿತು. ವಿರಾಟ್ 44 ಎಸೆತಗಳಲ್ಲಿ 60 ರನ್‌ಗಳನ್ನು ಗಳಿಸಿದರು. ಅದರಲ್ಲಿ ನಾಲ್ಕು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ವಿಕೆಟ್ ನಡುವೆ ಅವರ ಚುರುಕಿನ ಓಟವು ಗಮನ ಸೆಳೆಯಿತು. ಒಂಟಿ ಹಾಗೂ ಜೋಡಿ ರನ್‌ಗಳನ್ನು ಗಳಿಸಿದ ಅವರು ಫೀಲ್ಡರ್‌ಗಳ ಮೇಲೆ ಒತ್ತಡ ಹಾಕುವಲ್ಲಿ ಸಫಲರಾದರು. ರಕ್ಷಣಾತ್ಮಕ ಹಾಗೂ ಕೊನೆಯ ಹಂತದಲ್ಲಿ ಕೆಲವು ಆಕ್ರಮಣಶೈಲಿಯ ಹೊಡೆತಗಳನ್ನೂ ಆಡಿದರು.

ಆರಂಭಿಕ ಜೋಡಿ ರೋಹಿತ್ ಶರ್ಮಾ (28; 20ಎ) ಹಾಗೂ ಕೆ.ಎಲ್. ರಾಹುಲ್ (28; 16ಎ) ಅಮೋಘ ಆರಂಭ ನೀಡಿದ ನಂತರವೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಹೆಚ್ಚು ರನ್ ಹೊಡೆಯಲಿಲ್ಲ. ಈ ಒತ್ತಡವನ್ನು ತಮ್ಮ ಮೇಲೆಳೆದುಕೊಂಡ ಅನುಭವಿ ವಿರಾಟ್ ಇನಿಂಗ್ಸ್‌ಗೆ ಬಲ ತುಂಬಿದರು.

ಪಾಕ್ ತಂಡದ ನಾಯಕ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಅವರ ನಿರ್ಧಾರವನ್ನು ತಪ್ಪು ಎಂದು ಸಾಬೀತು ಮಾಡುವತ್ತ ರೋಹಿತ್ ಹಾಗೂ ರಾಹುಲ್ ಸಫಲರಾದರು. ಇಬ್ಬರೂ ಸೇರಿಕೇವಲ ಐದು ಓವರ್‌ಗಳಲ್ಲಿ 54 ರನ್‌ಗಳನ್ನು ಸೂರೆ ಮಾಡಿದರು. ಆದರೆ, ಉತ್ತಮ ಲಯದಲ್ಲಿದ್ದ ರೋಹಿತ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ಕೊಟ್ಟರು. ನಂತರದ ಓವರ್‌ನಲ್ಲಿ ರಾಹುಲ್ ಕೂಡ ಔಟಾದರು.

ವಿರಾಟ್ ಹಾಗೂ ಸೂರ್ಯಕುಮಾರ್ (13; 10ಎ) ಮೂರನೇ ವಿಕೆಟ್ ಜತೆಯಾಟದಲ್ಲಿ 29 ರನ್‌ ಸೇರಿಸುವಲ್ಲಿ ಸಫಲರಾದರು. ಹತ್ತನೇ ಓವರ್‌ನಲ್ಲಿ ಸೂರ್ಯ ಔಟಾದ ನಂತರ ಕ್ರೀಸ್‌ಗೆ ಬಂದ ಪಂತ್ ಹಾಗೂ ವಿರಾಟ್‌ ವೇಗದ ಆಟಕ್ಕೆ ಹೆಚ್ಚು ಒತ್ತು ನೀಡದೇ ವಿಕೆಟ್ ಉಳಿಕೆಗೆ ಆದ್ಯತೆ ನೀಡಿದರು. ಆದ್ದರಿಂದ ರನ್‌ ವೇಗ ತಗ್ಗಿತು.

ಪಂತ್ ಕೂಡ 14ನೇ ಓವರ್‌ನಲ್ಲಿ ಔಟಾದರು. ಹಾರ್ದಿಕ್ ಸೊನ್ನೆ ಸುತ್ತಿದರು. ಈ ಪಂದ್ಯದಲ್ಲಿ ಸ್ಥಾನ ಪಡೆದ ದೀಪಕ್ ಹೂಡಾ ತಮ್ಮ ಅಪರ್‌ ಕಟ್ ಕೌಶಲ ಮೆರೆದರು. ವಿಕೆಟ್ ಕೀಪರ್ ತಲೆ ಮೇಲಿಂದ ಚೆಂಡನ್ನು ಬೌಂಡರಿಗೆ ಕಳಿಸಿದರು. ಇದರಿಂದಾಗಿ 14 ಎಸೆತಗಳಲ್ಲಿ 16 ರನ್ ಗಳಿಸಿದರು. ಅವರ ಆಟಕ್ಕೆ ಮೊಹಮ್ಮದ್ ಹಸ್ನೈನ್ ತಡೆಯೊಡ್ಡಿದರು.

ಕೊನೆಯ ಓವರ್‌ನಲ್ಲಿ ವಿರಾಟ್ ರನ್‌ಔಟ್ ಆದರು. ಇನಿಂಗ್ಸ್‌ನ ಕೊನೆಯ ಎರಡು ಎಸೆತಗಳಲ್ಲಿ ರವಿ ಬಿಷ್ಣೊಯಿ ಬೌಂಡರಿಗಳನ್ನು ಗಳಿಸಿ, ಸ್ಕೋರ್ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT