ಸೋಮವಾರ, ಜನವರಿ 24, 2022
29 °C

IND vs SA | ನ್ಯೂಲ್ಯಾಂಡ್ಸ್‌ನಲ್ಲಿ ‘ಫೈನಲ್‌’; ಬ್ಯಾಟಿಂಗ್‌ ಆರಂಭಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೇಪ್‌ಟೌನ್‌: ಮೂರು ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಮಬಲ ಸಾಧಿಸಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಪ್ರವಾಸಿ ಭಾರತ ತಂಡಗಳು, ಇಂದು ಮೂರನೇ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ನ್ಯೂಲ್ಯಾಂಡ್ಸ್‌ನಲ್ಲಿ ಆರಂಭವಾಗಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 113 ರನ್ ಅಂತರದಿಂದ ಗೆದ್ದು ಬೀಗಿದ್ದ ಭಾರತ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಮುಗ್ಗರಿಸಿತ್ತು.

ಬೆನ್ನು ನೋವಿನ ಸಮಸ್ಯೆಯಿಂದ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ನಾಯಕ ಕೊಹ್ಲಿ, ಈ ಪಂದ್ಯದಲ್ಲಿ ತಂಡ ಮುನ್ನಡೆಸುತ್ತಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ದಕ್ಷಿಣ ಆಫ್ರಿಕಾದಲ್ಲಿ ಭಾರತಕ್ಕೆ ಮೊದಲ ಸರಣಿ ಜಯ ತಂದುಕೊಟ್ಟ ಶ್ರೇಯಸ್ಸು ಕೊಹ್ಲಿ ಪಡೆಗೆ ಸಿಗಲಿದೆ. ಅಂದಹಾಗೆ ಇದು ಕೊಹ್ಲಿ ಆಡುತ್ತಿರುವ 99ನೇ ಟೆಸ್ಟ್ ಪಂದ್ಯವಾಗಿದೆ.

ಭಾರತ ಪರ ಕನ್ನಡಿಗ ಮಯಂಕ್‌ ಅಗರವಾಲ್‌ (7*) ಮತ್ತು ಕೆ.ಎಲ್.ರಾಹುಲ್‌ (4*) ಇನಿಂಗ್ಸ್‌ ಆರಂಭಿಸಿದ್ದು, ಐದು ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 15 ರನ್‌ ಗಳಿಸಿದ್ದಾರೆ.

ಸಿರಾಜ್‌ ಔಟ್; ಉಮೇಶ್‌ ಇನ್
ಮಂಡಿರಜ್ಜು ನೋವಿನಿಂದ ಬಳಲುತ್ತಿರುವ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲು ಅನುಭವಿ ವೇಗಿ ಉಮೇಶ್‌ ಯಾದವ್‌ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

ತಂಡಗಳು
ಭಾರತ:
 ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್‌.ರಾಹುಲ್‌, ಮಯಂಕ್‌ ಅಗರವಾಲ್‌, ಚೇತೇಶ್ವರ್ ಪೂಜಾರ, ರಿಷಭ್ ಪಂತ್‌ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್‌, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಅಜಿಂಕ್ಯ ರಹಾನೆ, ಉಮೇಶ್ ಯಾದವ್‌.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್‌ (ನಾಯಕ), ಏಡನ್ ಮರ್ಕರಮ್, ಕೀಗನ್ ಪೀಟರ್ಸನ್‌, ರಸಿ ವ್ಯಾನ್ ಡೆರ್ ಡುಸೆನ್‌, ತೆಂಬಾ ಬವುಮಾ, ಕಗಿಸೊ ರಬಾಡ, ಕೈಲ್ ವೆರೇನಿ (ವಿಕೆಟ್ ಕೀಪರ್), ಮಾರ್ಕೊ ಜ್ಯಾನ್ಸೆನ್‌, ಕೇಶವ್ ಮಹಾರಾಜ್‌, ಲುಂಗಿ ಗಿಡಿ, ಡ್ವಾನೆ ಒಲಿವಿಯರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು