ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1000ನೇ ಪಂದ್ಯ ಆಡಲು ಭಾರತ ಸಿದ್ಧತೆ; ಹೊನಲು ಬೆಳಕಿನಲ್ಲಿ ರೋಹಿತ್ ಬಳಗದ ಅಭ್ಯಾಸ

Last Updated 4 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

ಅಹಮದಾಬಾದ್: ಕೊರೊನಾ ಸೋಂಕಿಗೆ ಪ್ರಮುಖ ಆಟಗಾರರು ಒಳಗಾಗಿರುವ ನಡುವೆಯೂ ಭಾರತ ಕ್ರಿಕೆಟ್ ತಂಡವು ಐತಿಹಾಸಿಕ ಏಕದಿನ ಪಂದ್ಯವನ್ನು ಆಡಲು ಸಿದ್ಧವಾಗಿದೆ.

ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್ ಪಂದ್ಯವು ಭಾರತಕ್ಕೆ ಐತಿಹಾಸಿಕ ಒಂದು ಸಾವಿರನೇ ಪಂದ್ಯವಾಗಿದೆ. ಈ ಸಾಧನೆ ಮಾಡಿದ ಮೊದಲ ಕ್ರಿಕೆಟ್ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರೋಹಿತ್ ಸರ್ಮಾ ನಾಯಕತ್ವದ ತಂಡದ ಎಲ್ಲ ಅಟಗಾರರೂ ಶುಕ್ರವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದರು.

ಆದರೆ, ಮೂರು ದಿನಗಳ ಹಿಂದೆ ಕೋವಿಡ್‌ ಸೋಂಕಿಗೊಳಗಾಗಿರುವ ಆರಂಭಿಕ ಬ್ಯಾಟರ್ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ಋತುರಾಜ್ ಗಾಯಕವಾಡ್ ಅವರು ಪ್ರತ್ಯೇಕವಾಸದಲ್ಲಿದ್ದಾರೆ. ಅವರೊಂದಿಗೆ ಕೊರೊನ ಸೋಂಕಿಗೊಳಗಾಗಿರುವ ನೆರವು ಸಿಬ್ಬಂದಿಯೂ ಐಸೋಲೆಷನ್‌ನಲ್ಲಿದ್ದಾರೆ. ನಂತರ ಮೀಸಲು ಆಟಗಾರ ನವದೀಪ್ ಸೈನಿ ಕೂಡ ಸೋಂಕಿಗೊಳಗಾಗಿರುವುದು ಪತ್ತೆಯಾಯಿತು.

ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ತಂಡದ ಅಟಗಾರರು ಅಭ್ಯಾಸ ನಡೆಸಿದರು. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಯುವಸ್ಪಿನ್ನರ್ ರವಿ ಬಿಷ್ಣೋಯಿ ಅವರನ್ನು ತಂಡದ ಉಳಿದ ಆಟಗಾರರಿಗೆ ಪರಿಚಯಿಸಿದರು.

ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತಿತರರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಮಾಡಿದರು. ಮಧ್ಯಮವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಬೌಲಿಂಗ್ ಅಭ್ಯಾಸ ಮಾಡಿದರು.

ಆರಂಭಿಕ ಬ್ಯಾಟರ್ ಮಯಂಕ್ ಅಗರವಾಲ್ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದಾರೆ. ಕೆ.ಎಲ್. ರಾಹುಲ್ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆದ್ದರಿಂದ ಅವರ ಬದಲಿಗೆ ಮಯಂಕ್ ಕಣಕ್ಕಿಳಿಯುವುದು ಖಚಿತವಾಗಿದೆ. ಅವರೊಂದಿಗೆ ವಿಕೆಟ್‌ಕೀಪರ್ –ಬ್ಯಾಟರ್ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸಲಿದ್ದಾರೆ.

ಕೊರೊನಾ ಸೋಂಕಿತ ಆಟಗಾರ ಮತ್ತು ನೆರವು ಸಿಬ್ಬಂದಿಯು ಇನ್ನೊಂದು ವಾರದ ನಂತರ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿ ಬಂದರಷ್ಟೇ ತಂಡಕ್ಕೆ ಮರಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT