Ind vs Ire 1st T20: ದೀಪಕ್ ಹೂಡಾ ಅಬ್ಬರ, ಭಾರತಕ್ಕೆ 7 ವಿಕೆಟ್ ಗೆಲುವು

ಡಬ್ಲಿನ್: ಭಾನುವಾರ ಡಬ್ಲಿನ್ನಲ್ಲಿ ನಡೆದ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ಪಡೆಯಿತು.
ಹಾರ್ದಿಕ್ ಪಾಂಡ್ಯಾ ನೇತೃತ್ವದ ಭಾರತ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಳೆಯ ಕಾರಣ ತಡವಾಗಿ ಆರಂಭದ ಪಂದ್ಯದಲ್ಲಿ ಓವರ್ಗಳ ಸಂಖ್ಯೆಯನ್ನು 12ಕ್ಕೆ ಇಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಹ್ಯಾರಿ ಟೆಕ್ಟರ್ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ನಿಗದಿತ ಓವರ್ಗಳಲ್ಲಿ 4 ವಿಕೆಟ್ಗೆ 108 ರನ್ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಭಾರತ ತಂಡವು 9.2 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಪೇರಿಸಿತು.
ಐರ್ಲೆಂಡ್ ತಂಡ 22 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡು ಕುಸಿತ ಅನುಭವಿಸಿತ್ತು. ಈ ಹಂತದಲ್ಲಿ ಜತೆಯಾದ ಟೆಕ್ಟರ್ ಮತ್ತು ಲಾರ್ಸನ್ ಟಕೆರ್ ತಂಡಕ್ಕೆ ಆಸರೆಯಾದರು. ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಟೆಕ್ಟರ್ 33 ಎಸೆತಗಳಲ್ಲಿ 64 ರನ್ ಗಳಿಸಿದರು. ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಸಿಡಿಸಿದರು. ಟಕೆರ್ 16 ಎಸೆತಗಳಲ್ಲಿ ಎರಡು ಬೌಂಡರಿಗಳ ನೆರವಿನಿಂದ 18 ರನ್ ಗಳಿಸಿದರು.
For his economical spell of 1/11 - @yuzi_chahal was the player of the match in the 1st T20I 👏👏
A 7-wicket win for #TeamIndia to start off the 2-match T20I series against Ireland 🔝#IREvIND pic.twitter.com/eMIMjR9mTL
— BCCI (@BCCI) June 26, 2022
ಇದನ್ನೂ ಓದಿ–ಮಧ್ಯಪ್ರದೇಶಕ್ಕೆ ಚೊಚ್ಚಲ ರಣಜಿ ಕಿರೀಟ: ಮುಂಬೈ ತಂಡಕ್ಕೆ ಮುಖಭಂಗ
ಭಾರತದ ಆರಂಭಿಕ ಆಟಗಾರ ದೀಪಕ್ ಹೂಡಾ, 29 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 47 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರೊಂದಿಗೆ ಇಶಾನ್ ಕಿಶನ್ (11 ಎಸೆತಗಳಲ್ಲಿ 26 ರನ್) ಮತ್ತು ಹಾರ್ದಿಕ್ ಪಾಂಡ್ಯಾ (12 ಎಸೆತಗಳಲ್ಲಿ 24 ರನ್) ಗೆಲುವಿಗೆ ಸಹಕಾರಿಯಾದರು. ಮೂರನೇ ಕ್ರಮಾಂಕದಲ್ಲಿ ಆಡಿದ ಸೂರ್ಯಕುಮಾರ್ ಯಾದವ್ ರನ್ ಖಾತೆ ತೆರೆಯದೆಯೇ ಹೊರ ನಡೆದರು.
.@HoodaOnFire was the pick of the #TeamIndia batters and was our top performer from the second innings 💥#IREvIND pic.twitter.com/jsZsjxbTZ5
— BCCI (@BCCI) June 26, 2022
ಐರ್ಲೆಂಡ್ ಪರ ಕ್ರೈಗ್ ಯಂಗ್ ಎರಡು ವಿಕೆಟ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್, ಹಾರ್ದಿಕ್ ಪಾಂಡ್ಯ, ಆವೇಶ್ ಖಾನ್ ಹಾಗೂ ಯಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಕಬಳಿಸಿದರು.
ಭಾರತ ಮತ್ತು ಐರ್ಲೆಂಡ್ ಎರಡು ಪಂದ್ಯಗಳ ಟಿ20 ಸರಣಿ ಆಡುತ್ತಿವೆ.
ಸಂಕ್ಷಿಪ್ತ ಸ್ಕೋರ್:
ಐರ್ಲೆಂಡ್ 4ಕ್ಕೆ 108 ರನ್ (12 ಓವರ್), ಹ್ಯಾರಿ ಟೆಕ್ಟರ್–64 ರನ್
ಭಾರತ 3ಕ್ಕೆ 111 ರನ್ (9.2 ಓವರ್), ದೀಪಕ್ ಹೂಡಾ–47 ರನ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.