ಬುಧವಾರ, ಮಾರ್ಚ್ 3, 2021
29 °C

ಐಸಿಸಿ 'ದಶಕದ ಕ್ರಿಕೆಟಿಗ' ವಿರಾಟ್‌ ಕೊಹ್ಲಿ; ಧೋನಿ ‘ದಶಕದ ಕ್ರಿಕೆಟ್‌ ಸ್ಫೂರ್ತಿ‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಸರ್ ಗ್ಯಾರಿ ಸೋಬರ್ಸ್ ಹೆಸರಿನಲ್ಲಿ ನೀಡುವ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರನ್ನು ಉತ್ತಮ ಕ್ರೀಡಾಸ್ಫೂರ್ತಿ ಮೆರೆದ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು  ಆಸ್ಟ್ರೇಲಿಯಾದ ಆಟಗಾರ್ತಿ ಎಲಿಸ್ ಪೆರಿ ದಶಕದ ಮಹಿಳಾ ಕ್ರಿಕೆಟ್ ಪಟು ಎಂದೆನಿಸಿಕೊಂಡಿದ್ದಾರೆ. ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಯೂ ವಿರಾಟ್ ಕೊಹ್ಲಿ ಮುಡಿಯೇರಿದೆ.

ಪ್ರಶಸ್ತಿಗಳನ್ನು ಘೋಷಿಸಿ ಟ್ವೀಟ್ ಮಾಡಿರುವ ಐಸಿಸಿ, ವಿರಾಟ್ ಕೊಹ್ಲಿ ಒಟ್ಟಾರೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಳಿಸಿರುವ 70 ಶತಕಗಳಲ್ಲಿ 66 ಶತಕಗಳನ್ನು ಈಚಿನ 10 ವರ್ಷಗಳಲ್ಲಿ ಗಳಿಸಿದ್ದಾರೆ ಎಂದು ವಿವರಿಸಿದೆ. ಈ ಅವಧಿಯಲ್ಲಿ ಅವರು 94 ಅರ್ಧಶತಕಗಳನ್ನು ಸಿಡಿಸಿದ್ದು 20396 ರನ್ ಕಲೆ ಹಾಕಿದ್ದಾರೆ. 70 ಇನಿಂಗ್ಸ್‌ ಆಡಿದ ಆಟಗಾರರ ಪೈಕಿ ಗರಿಷ್ಠ ಸರಾಸರಿಯೂ (56.97) ಅವರ ಹೆಸರಿನಲ್ಲಿದೆ ಎಂದು ಟ್ವೀಟ್ ಪ್ರತಿಪಾದಿಸಿದೆ.

ದಶಕದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರ ಪಾಲಾಗಿದ್ದು ಅಫ್ಗಾನಿಸ್ತಾನದ ರಶೀದ್ ಖಾನ್ ಟಿ20 ಕ್ರಿಕೆಟಿಗ ಎಂದೆನಿಸಿಕೊಂಡಿದ್ದಾರೆ. ಎಲಿಸ್ ಪೆರಿ ಅವರಿಗೆ ಏಕದಿನ ಮತ್ತು ಟಿ20 ಕ್ರಿಕೆಟರ್ ಪ್ರಶಸ್ತಿಯೂ ಸಂದಿದೆ.

32 ವರ್ಷದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 12,040, ಟೆಸ್ಟ್‌ನಲ್ಲಿ 7,318 ಮತ್ತು ಟಿ20ಯಲ್ಲಿ 2,928 ರನ್ ಗಳಿಸಿದ್ದಾರೆ. ಎಲ್ಲ ಮಾದರಿಯಲ್ಲೂ ಅವರ ಸರಾಸರಿ 50 ದಾಟಿದೆ. 2011ರ ವಿಶ್ವಕಪ್ ಪ್ರಶಸ್ತಿ ಗೆದ್ದ ತಂಡದಲ್ಲೂ ಅವರು ಇದ್ದರು. 10 ವರ್ಷಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಗಳಿಸಿರುವ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಈ ಸಂದರ್ಭದಲ್ಲಿ ಅವರು 39 ಶತಕ ಮತ್ತು 48 ಅರ್ಧಶತಕ ಗಳಿಸಿದ್ದಾರೆ. 61.83 ಅವರ ಸರಾಸರಿ.

‘ಈ ಪ್ರಶಸ್ತಿ ಸ್ವೀಕರಿಸಲು ಅತೀವ ಸಂತಸವಾಗುತ್ತಿದೆ. ಈ 10 ವರ್ಷಗಳಲ್ಲಿ ನಾನು ಅತಿಹೆಚ್ಚು ಸಂಭ್ರಮಿಸಿದ್ದು ವಿಶ್ವಕಪ್‌, ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ‍ಮತ್ತು 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದಾಗ. ಏಕದಿನ ಕ್ರಿಕೆಟ್‌ ತಂಡದಲ್ಲಿ ನಾನು ಬೇಗನೇ ಕಾಣಿಸಿಕೊಂಡಿದ್ದೆ. ಕೆಲವು ವರ್ಷಗಳ ನಂತರ ಟೆಸ್ಟ್ ಆಡಲು ಶುರು ಮಾಡಿದೆ. ಆದ್ದರಿಂದ ಏಕದಿನ ಕ್ರಿಕೆಟ್‌ಗೆ ವೇಗವಾಗಿ ಹೊಂದಿಕೊಂಡಿದ್ದೆ. ಪ್ರತಿ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಒಯ್ಯುವುದೇ ನನ್ನ ಗುರಿಯಾಗಿರುತ್ತದೆ. ಕ್ರಿಕೆಟ್ ಜೀವನದಲ್ಲಿ ಅಂಕಿಅಂಶ ಮತ್ತು ನನ್ನ ಹೆಸರಿನಲ್ಲಿ ದಾಖಲಾಗುವ ರನ್‌ಗಳತ್ತ ಹೆಚ್ಚು ಗಮನಕೊಡುವುದಿಲ್ಲ. ತಂಡಕ್ಕಾಗಿ ಆಡುವಾಗ ಮೈಲುಗಲ್ಲುಗಳು ದಾಖಲಾಗುತ್ತಲೇ ಇರುತ್ತವೆ, ಅದು ಸಹಜ’ ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಐಸಿಸಿ ಪ್ರಶಸ್ತಿಗಳು:

* ಐಸಿಸಿ ದಶಕದ ಕ್ರಿಕೆಟ್‌ ಸ್ಫೂರ್ತಿ ಪ್ರಶಸ್ತಿ ( Spirit of Cricket): ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ವಿಕೆಟ್‌ ಕೀಪರ್‌ ಎಂ.ಎಸ್‌.ಧೋನಿ

2011ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇಯಾನ್‌ ಬೆಲ್‌ ರನ್‌ ಔಟ್‌ ಆಗಿದ್ದರು. ಚಹಾ ವಿರಾಮದ ಅವಧಿಗೂ ಮುನ್ನದ ಓವರ್‌ನ ಕೊನೆಯ ಎಸೆತದಲ್ಲಿ ಇಯಾನ್‌ ಹೊಡೆದ ಚೆಂಡು ಬೌಂಡರಿ ಗೆರೆಯನ್ನು ಸಮೀಪಿಸಿತ್ತು, ಆದರೆ ಬೌಂಡರಿ ದಾಟುವುದರಿಂದ ಭಾರತದ ತಂಡದ ಆಟಗಾರರು ತಡೆದಿದ್ದರು ಹಾಗೂ ರನ್‌ಔಟ್‌ ಮಾಡಿದ್ದರು. ಬೌಂಡರಿ ತಡೆದಿರುವುದನ್ನು ಗಮನಿಸದ ಇಯಾನ್‌ ಅದಾಗಲೇ ಚಹಾ ವಿರಾಮದ ಕಡೆಗೆ ತೆರಳಿದ್ದರು. ವಿರಾಮದ ಬಳಿಕ ಮಹೇಂದ್ರ ಸಿಂಗ್‌ ಧೋನಿ ಇಂಗ್ಲೆಂಡ್‌ ಆಟಗಾರ ಇಯಾನ್‌ ಅವರನ್ನು ಮತ್ತೆ ಆಟಕ್ಕೆ ಮರಳಲು ಕರೆದಿದ್ದರು ಹಾಗೂ ಔಟ್‌ ಮನವಿಯನ್ನು ಹಿಂಪಡೆದಿದ್ದರು.

ಅವರ ಈ ಕ್ರೀಡಾಸ್ಫೂರ್ತಿಯ ಕ್ರಮಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಅದೇ ಕಾರಣದಿಂದ ಧೋನಿ 'ದಶಕದ ಕ್ರಿಕೆಟ್‌ ಸ್ಫೂರ್ತಿ' ಎಂದು ಅಭಿಮಾನಿಗಳೇ ಆಯ್ಕೆ ಮಾಡಿದ್ದಾರೆ.

* ಐಸಿಸಿ ದಶಕದ ಟೆಸ್ಟ್‌ ಕ್ರಿಕೆಟಿಗ: ಆಸ್ಟ್ರೇಲಿಯಾ ತಂಡದ ಸ್ಟೀವ್‌ ಸ್ಮಿತ್‌

* ಐಸಿಸಿ ದಶಕದ ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಕ್ರಿಕೆಟಿಗ: ಅಫ್ಗಾನಿಸ್ತಾನದ ರಶೀದ್‌ ಖಾನ್‌

* ಐಸಿಸಿ ದಶಕದ ಟಿ20 ಮತ್ತು ಏಕದಿನ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಪಟು: ಆಸ್ಟ್ರೇಲಿಯಾದ ಎಲಿಸ್ ಪೆರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು