ಶುಕ್ರವಾರ, ಜುಲೈ 1, 2022
26 °C
ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ 2–0 ಮುನ್ನಡೆ; ಮಿಂಚಿದ ರವೀಂದ್ರ ಜಡೇಜ

ಬೆಳಗಿದ ರಾಹುಲ್; ಭಾರತಕ್ಕೆ ಜಯದ ‘ಶ್ರೇಯ’

ಪಿಟಿಐ Updated:

ಅಕ್ಷರ ಗಾತ್ರ : | |

ಆಕ್ಲೆಂಡ್: ಈಡನ್ ಪಾರ್ಕ್‌ನಲ್ಲಿ ಮತ್ತೊಮ್ಮೆ ರನ್‌ಗಳ ಹೊಳೆ ಹರಿಯಲಿಲ್ಲ. ಆದರೆ, ಭಾರತ ಮಾತ್ರ ಸತತ ಎರಡನೇ ಟ್ವೆಂಟಿ–20 ಪಂದ್ಯದಲ್ಲಿ ಜಯ ದಾಖಲಿಸಿತು.

ನ್ಯೂಜಿಲೆಂಡ್ ವಿರುದ್ಧದ ಐದು ಟಿ20 ಪಂದ್ಯಗಳ ಸರಣಿಯಲ್ಲಿ  ಭಾರತವು 2–0 ಮುನ್ನಡೆ ಗಳಿಸಲು ಕನ್ನಡಿಗ ಕೆ.ಎಲ್. ರಾಹುಲ್ ಮತ್ತೊಮ್ಮೆ ಕಾರಣರಾದರು. ಸತತ ಎರಡನೇ ಅರ್ಧಶತಕ ದಾಖಲಿಸಿದ ಅವರು ಭಾರತಕ್ಕೆ 7 ವಿಕೆಟ್‌ಗಳ ಜಯದ ಕಾಣಿಕೆ ನೀಡಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ತಂಡವನ್ನು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ (18ಕ್ಕೆ2) ಮತ್ತು ಉಳಿದ ಬೌಲರ್‌ಗಳು ಶಿಸ್ತಿನ ದಾಳಿಯಿಂದ ಕಟ್ಟಿಹಾಕಿದರು. 20 ಓವರ್‌ಗಳಲ್ಲಿ 5ಕ್ಕೆ132 ರನ್‌ ಗಳಿಸಲು ಮಾತ್ರ ಕಿವೀಸ್‌ ತಂಡಕ್ಕೆ ಸಾಧ್ಯವಾಯಿತು. 

ಗುರಿ ಬೆನ್ನಟ್ಟಿದ ಭಾರತವು ಇನಿಂಗ್ಸ್‌ನಲ್ಲಿ 15 ಎಸೆತಗಳು ಬಾಕಿಯಿರುವಾಗಲೇ 3 ವಿಕೆಟ್‌ಗಳಿಗೆ 135 ರನ್‌ ಗಳಿಸಿ ಗೆದ್ದಿತು. ರಾಹುಲ್ (ಅಜೇಯ 57; 50ಎಸೆತ. 3ಬೌಂಡರಿ, 2ಸಿಕ್ಸರ್) ಮತ್ತು ಶ್ರೇಯಸ್ ಅಯ್ಯರ್ (44; 33ಎ, 1ಬೌಂ, 3ಸಿ) ಅವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ ಕಲೆಹಾಕಿದ 86 ರನ್‌ಗಳ ಬಲದಿಂದ ತಂಡದ ಜಯ ಸುಲಭವಾಯಿತು.

ಹೋದ ಶುಕ್ರವಾರ ಇಲ್ಲಿಯೇ ನಡೆದಿದ್ದ ಮೊದಲ ಪಂದ್ಯದಲ್ಲಿ 203 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತಿ ಜಯಿಸಲು ಕೂಡ ರಾಹುಲ್ ಮತ್ತು ಶ್ರೇಯಸ್ ಕಾರಣರಾಗಿದ್ದರು. ಆದರೆ, ಭಾನುವಾರದ ಪಂದ್ಯದಲ್ಲಿ ರನ್‌ಗಳನ್ನು ಗಳಿಸುವುದು ಸುಲಭವಾಗಿರಲಿಲ್ಲ. ನಿಧಾನಗತಿಯ ಎಸೆತಗಳನ್ನು ತಾಳ್ಮೆ ಮತ್ತು ಅಪಾರ ಏಕಾಗ್ರತೆಯಿಂದ ಆಡುವ ಅಗತ್ಯವಿತ್ತು. ಅದರಲ್ಲೂ ಚೇಸಿಂಗ್ ಮತ್ತಷ್ಟು ಕಷ್ಟವಾಗಿತ್ತು. ಅದಕ್ಕಾಗಿಯೇ ಕೇನ್ ವಿಲಿಯಮ್ಸನ್ ಬಳಗವು  ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ತಮ್ಮ ತಂತ್ರಗಾರಿಕೆಯಿಂದ ಮೇಲುಗೈ ಸಾಧಿಸಿದರು. ಕಿವೀಸ್‌ಗೆ ಮಾರ್ಟಿನ್ ಗಪ್ಟಿಲ್ (33; 20ಎ, 4ಬೌಂ, 2ಸಿ) ಮತ್ತು ಕಾಲಿನ್ ಮನ್ರೊ (26; 25ಎ, 2ಬೌಂ, 1ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 48 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆರನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರು ಮಾರ್ಟಿನ್ ವಿಕೆಟ್ ಕಬಳಿಸಿ ಜೊತೆಯಾಟ ಮುರಿದರು.

ಕುಲದೀಪ್ ಯಾದವ್ ಬದಲು ಸ್ಥಾನ ಪಡೆದಿದ್ದ ಅಲ್‌ರೌಂಡರ್ ಶಿವಂ ದುಬೆ ಒಂಬತ್ತನೇ ಓವರ್‌ನಲ್ಲಿ ಕಾಲಿನ್ ಮನ್ರೊಗೆ ಪೆವಿಲಿಯನ್ ದಾರಿ ತೋರಿಸಿದರು. ಇಲ್ಲಿಂದ ಮುಂದೆ ಯಾವ ಬ್ಯಾಟ್ಸ್‌ಮನ್‌ಗಳಿಗೂ ಸರಾಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. 11 ಮತ್ತು 13ನೇ ಓವರ್‌ಗಳಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಕ್ರಮವಾಗಿ ಕಾಲಿನ್ ಗ್ರ್ಯಾಂಡ್‌ಹೋಮ್ ಮತ್ತು ಕೇನ್ ವಿಲಿಯಮ್ಸನ್ ಅವರ ವಿಕೆಟ್ ಗಳಿಸಿದರು.

ಕೊನೆಯ ಹಂತದ ಓವರ್‌ಗಳಲ್ಲಿ ರಾಸ್ ಟೇಲರ್ (18 ರನ್) ಮತ್ತು ಟಿಮ್ ಸೀಫರ್ಟ್ (33; 26ಎ, 1ಬೌಂ, 2ಸಿ)  ಅವರು 44 ರನ್‌ಗಳನ್ನು ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಭಾರತದ ಆರಂಭ ಚೆನ್ನಾಗಿರಲಿಲ್ಲ. ಮೊದಲ ಓವರ್‌ನಲ್ಲಿಯೇ ರೋಹಿತ್ ಶರ್ಮಾ (8ರನ್) ಔಟಾದರು. ನಾಯಕ ವಿರಾಟ್ ಕೂಡ (11 ರನ್) ಹೆಚ್ಚು ಹೊತ್ತು ಆಡಲಿಲ್ಲ. ಅವರೂ ಸೌಥಿ ಬೌಲಿಂಗ್‌ನಲ್ಲಿ ಔಟಾದರು. ಇನ್ನೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ರಾಹುಲ್ ಮತ್ತು ಶ್ರೇಯಸ್ ಮತ್ತೊಮ್ಮೆ ತಮ್ಮ ಪ್ರತಿಭೆ ಮೆರೆದರು. ಇದೀಗ ಸರಣಿಯನ್ನು ಗೆಲ್ಲಬೇಕಾದರೆ ಭಾರತವು ಇನ್ನೊಂದು ಪಂದ್ಯ ಜಯಿಸಿದರೆ ಸಾಕು. ಆದರೆ ವಿಲಿಯಮ್ಸನ್ ಬಳಗವು ಉಳಿದಿರುವ ಎಲ್ಲ ಮೂರು ಪಂದ್ಯಗಳನ್ನೂ ಗೆಲ್ಲಲೇಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು