ಮಂಗಳವಾರ, ಅಕ್ಟೋಬರ್ 20, 2020
22 °C

ವೆಸ್ಟ್ ಇಂಡೀಸ್‌ ಎದುರಿನ 3ನೇ ಏಕದಿನ ಪಂದ್ಯ: ಭುವಿ, ಬೂಮ್ರಾ ಮೇಲೆ ಎಲ್ಲರ ಕಣ್ಣು

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ: ಭಾರತ ತಂಡಕ್ಕೆ ವೇಗಿಗಳಾದ ಭುವನೇಶ್ವರ್‌ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಗೆಲುವು ತಂದುಕೊಡುವರೇ...? ರನ್ ರಾಶಿಯಲ್ಲಿ ಟೈ ಆದ ಪಂದ್ಯದ ನಂತರ ವೆಸ್ಟ್ ಇಂಡೀಸ್ ಎದುರಿನ ಮೂರನೇ ಏಕದಿನ ಪಂದ್ಯಕ್ಕೆ ಭಾರತ ಸಜ್ಜಾಗುತ್ತಿರುವಾಗ ಕ್ರಿಕೆಟ್‌ ಪ್ರಿಯರಲ್ಲಿ ಮೂಡಿರುವ ಪ್ರಶ್ನೆ ಇದು. ಪಂದ್ಯ ಶನಿವಾರ ನಡೆಯಲಿದ್ದು ಗೆಲುವಿನ ಮೂಲಕ ಮುನ್ನಡೆ ಹೆಚ್ಚಿಸಿಕೊಳ್ಳಲು ವಿರಾಟ್ ಕೊಹ್ಲಿ ಬಳಗ ಪ್ರಯತ್ನಿಸಲಿದೆ.

ಗುವಾಹಟಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಮಣಿದಿದ್ದ ಪ್ರವಾಸಿ ತಂಡ ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸಮಬಲದ ಹೋರಾಟ ತೋರಿತ್ತು. 321 ರನ್‌ ಗಳಿಸಿದ್ದ ಭಾರತಕ್ಕೆ ಎದುರಾಳಿಗಳನ್ನು ಕಟ್ಟಿಹಾಕಲು ಆಗಲಿಲ್ಲ.

ಇದರ ನಂತರ, ಉಳಿದ ಮೂರು ಪಂದ್ಯಗಳಿಗೆ ಗುರುವಾರ ಆಯ್ಕೆ ಮಾಡಿದ ತಂಡದಲ್ಲಿ ವೇಗಿಗಳಾದ ಭುವನೇಶ್ವರ್ ಮತ್ತು ಜಸ್‌ಪ್ರೀತ್ ಅವರಿಗೆ ಸ್ಥಾನ ನೀಡಲಾಗಿದೆ. ಉಮೇಶ್‌ ಯಾದವ್ ಮತ್ತು ಮೊಹಮ್ಮದ್ ಶಮಿ ಅವರಿಗೆ ಹೋಲಿಸಿದರೆ ಭುವಿ ಮತ್ತು ಬೂಮ್ರಾ ವೆಸ್ಟ್‌ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾಗಲಿದ್ದಾರೆ ಎಂಬುದು ಆಯ್ಕೆ ಸಮಿತಿಯ ಲೆಕ್ಕಾಚಾರ. ಆದರೆ ಮಧ್ಯಮ ಕ್ರಮಾಂಕ ಮತ್ತು ಕೆಳಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗೆ ಭಾರತ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಎರಡು ಪಂದ್ಯಗಳಲ್ಲಿ ಎರಡು ಶತಕ ಸಿಡಿಸಿರುವ ನಾಯಕ ವಿರಾಟ್ ಕೊಹ್ಲಿ ತಂಡದ ಬ್ಯಾಟಿಂಗ್‌ ವಿಭಾಗದ ಬೆನ್ನೆಲುಬು. ವೇಗದ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿರುವ ಅವರು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಣದಲ್ಲೂ ಮಿಂಚುವ ಭರವಸೆಯಲ್ಲಿದ್ದಾರೆ.

ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವತ್ತ ಸಾಗುತ್ತಿರುವ ಅಂಬಟಿ ರಾಯುಡು ಕೂಡ ಶನಿವಾರ ಉತ್ತಮ ಆಟ ಮುಂದುವರಿಸುವ ನಿರೀಕ್ಷೆ ಇದೆ. ಯುವ ಆಟಗಾರ ರಿಷಭ್ ಪಂತ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಒತ್ತಡದಲ್ಲಿದ್ದಾರೆ.

ಮೊದಲ ಎರಡೂ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿರುವ ಶಿಮ್ರಾನ್‌ ಹೆಟ್ಮೆಯರ್‌ ಅವರನ್ನು ನಿಯಂತ್ರಿಸುವುದು ಭಾರತದ ಬೌಲರ್‌ಗಳಿಗೆ ಸವಾಲಾಗಲಿದೆ. ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್ ಶಾಯ್ ಹೋಪ್‌ ಅವರ ಮೇಲೆಯೂ ವೆಸ್ಟ್ ಇಂಡೀಸ್ ಭರವಸೆ ಹೊಂದಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್‌, ಅಂಬಟಿ ರಾಯುಡು, ರಿಷಭ್ ಪಂತ್‌, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್‌), ರವೀಂದ್ರ ಜಡೇಜ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ಭುವನೇಶ್ವರ್ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಖಲೀಲ್ ಅಹಮ್ಮದ್‌, ಉಮೇಶ್‌ ಯಾದವ್‌, ಕೆ.ಎಲ್‌.ರಾಹುಲ್‌, ಮನೀಷ್ ಪಾಂಡೆ.

ವೆಸ್ಟ್ ಇಂಡೀಸ್‌: ಜೇಸನ್ ಹೋಲ್ಡರ್‌ (ನಾಯಕ), ಫ್ಯಾಬಿಯನ್‌ ಅಲೆನ್‌, ಸುನಿಲ್ ಆ್ಯಂಬ್ರಿಸ್‌, ದೇವೇಂದ್ರ ಬಿಷೂ, ಚಂದರ್‌ಪಾಲ್‌ ಹೇಮರಾಜ್‌, ಶಿಮ್ರಾನ್ ಹೆಟ್ಮೆಯರ್‌, ಶಾಯ್ ಹೋಪ್‌, ಅಲ್ಜರಿ ಜೋಸೆಫ್‌, ಎವಿನ್‌ ಲ್ಯೂವಿಸ್‌, ಆ್ಯಶ್ಲೆ ನರ್ಸೆ, ಕೀಮೊ ಪಾಲ್‌, ರೋವ್ಮನ್‌ ಪೊವೆಲ್‌, ಕೆಮರ್ ರೋಚ್‌, ಮಾರ್ಲನ್ ಸ್ಯಾಮ್ಯುಯೆಲ್ಸ್‌, ಒಶಾನೆ ಥಾಮಸ್‌.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರ ಪ್ರಸಾರ: ಸ್ಟಾರ್ ನೆಟ್‌ವರ್ಕ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು