ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 1st Test‌: ಭಾರತಕ್ಕೆ ದಾಖಲೆ ಗುರಿ ಬೆನ್ನತ್ತುವ ಸವಾಲು

ಫಾಲೊ ಆನ್ ಹೇರದ ಇಂಗ್ಲೆಂಡ್ ನಾಯಕ ಜೋ ರೂಟ್; 28ನೇ ಬಾರಿ ಐದು ವಿಕೆಟ್ ಗೊಂಚಲು ಗಳಿಸಿದ ಅಶ್ವಿನ್‌
Last Updated 8 ಫೆಬ್ರುವರಿ 2021, 14:41 IST
ಅಕ್ಷರ ಗಾತ್ರ

ಚೆನ್ನೈ: ಫಾಲೊ ಆನ್‌ ನೀಡದೇ ಒತ್ತಡ ಹೇರುವ ತಂತ್ರಕ್ಕೆ ಮೊರೆಹೋದ ಇಂಗ್ಲೆಂಡ್ ನಾಯಕ ಜೋ ರೂಟ್ ಅವರಿಗೆ ಸ್ಪಿನ್ ಮೋಡಿ ಮೂಲಕ ರವಿಚಂದ್ರನ್ ಅಶ್ವಿನ್ ಉತ್ತರ ನೀಡಿದರು. ಆದರೂ ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ ಭರ್ಜರಿ ಮುನ್ನಡೆಯ ಬಲದೊಂದಿಗೆ ಭಾರತಕ್ಕೆ ದಾಖಲೆ ಮೊತ್ತದ ಗೆಲುವಿನ ಗುರಿ ನೀಡಲು ಪ್ರವಾಸಿ ತಂಡ ಸಫಲವಾಯಿತು.

ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನಲ್ಲಿ 420 ರನ್‌ಗಳ ಜಯದ ಗುರಿ ಬೆನ್ನತ್ತಿರುವ ಭಾರತ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದ್ದು ಗೆಲುವಿಗಾಗಿ ಇನ್ನೂ 381 ರನ್ ಗಳಿಸಬೇಕಾಗಿದೆ. ಇದು ಸಾಧ್ಯವಾದರೆ ಭಾರತ ದಾಖಲೆಯನ್ನು ಬರೆದು ಸರಣಿಯಲ್ಲಿ 1–0ಯ ಮುನ್ನಡೆ ಸಾಧಿಸಬಹುದು. 2003ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್‌ 418 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿತ್ತು. ಆ ಮೂಲಕ ದಾಖಲೆ ಬರೆದಿತ್ತು.

ಬೌಲರ್‌ಗಳಿಗೆ ನೆರವು ನೀಡಲು ಆರಂಭಿಸಿರುವ ಪಿಚ್‌ನಲ್ಲಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿರುವ ಭಾರತದ ಪರ ಶುಭಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಕೊನೆಯ ದಿನವಾದ ಮಂಗಳವಾರ ಇನಿಂಗ್ಸ್‌ ಮುಂದುವರಿಸಲಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 241 ರನ್‌ಗಳ ಮುನ್ನಡೆ ಗಳಿಸಿದರೂ ಇಂಗ್ಲೆಂಡ್ ನಾಯಕ ಜೋ ರೂಟ್ ಭಾರತಕ್ಕೆ ಫಾಲೊ ಆನ್‌ ನೀಡಲಿಲ್ಲ. ಎರಡನೇ ಇನಿಂಗ್ಸ್‌ನಲ್ಲಿ ಫಲಿತಾಂಶವನ್ನೇ ಗುರಿಯಾಗಿಟ್ಟುಕೊಂಡು ವೇಗವಾಗಿ ರನ್ ಗಳಿಸಲು ಮುಂದಾಯಿತು. ವಿಕೆಟ್‌ಗಳನ್ನು ಕಳೆದುಕೊಂಡರೂ 178 ರನ್ ಕಲೆ ಹಾಕಿದ ತಂಡ ಒಟ್ಟಾರೆ 419 ರನ್‌ಗಳ ಮುನ್ನಡೆ ಸಾಧಿಸಿತು.

ಆರಂಭಿಕ ಜೋಡಿಯನ್ನು ವಾಪಸ್ ಕಳುಹಿಸುವಲ್ಲಿ ಯಶಸ್ವಿಯಾದ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೊನೆಯ ಮೂರು ವಿಕೆಟ್‌ಗಳನ್ನು ಕೂಡ ಉರುಳಿಸಿದರು. ಮಧ್ಯಮ ಕ್ರಮಾಂಕದ ಬೆನ್ ಸ್ಟೋಕ್ಸ್‌ ವಿಕೆಟ್ ಒಳಗೊಂಡಂತೆ ಒಟ್ಟು ಆರು ವಿಕೆಟ್ ತಮ್ಮದಾಗಿಸಿಕೊಂಡರು. ಈ ಮೂಲಕ 28ನೇ ಬಾರಿ ಐದು ವಿಕೆಟ್ ಗೊಂಚಲು ಸಾಧನೆ ಮಾಡಿದರು.

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ರೋರಿ ಬರ್ನ್ಸ್‌ ವಿಕೆಟ್‌ ಅಶ್ವಿನ್ ಉರುಳಿಸಿದರು. ತಿರುವು ಪಡೆದ ಎಸೆತದಲ್ಲಿ ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದ ರೋರಿ ಬರ್ನ್ಸ್‌ ಬ್ಯಾಟಿನ ಅಂಚಿಗೆ ಸವರಿದ ಚೆಂಡು ಮೇಲಕ್ಕೆ ಚಿಮ್ಮಿತು. ಸೊಗಸಾದ ಕ್ಯಾಚ್ ಪಡೆದ ಅಜಿಂಕ್ಯ ರಹಾನೆ ಭಾರತ ಪಾಳಯದಲ್ಲಿ ಸಂಭ್ರಮ ಮೂಡಿಸಿದರು. ಡಾಮ್ ಸಿಬ್ಲಿ, ಡಾನ್ ಲಾರೆನ್ಸ್ ಮತ್ತು ಬೆನ್‌ ಸ್ಟೋಕ್ಸ್‌ ಬೇಗನೇ ಔಟಾದರು. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ ಜೋ ರೂಟ್‌ ಅವರೊಂದಿಗೆ ಒಲಿ ಪೋಪ್ 32 ರನ್‌ಗಳ ಜೊತೆಯಾಟ ಆಡಿದರು. ಜೋಸ್ ಬಟ್ಲರ್ ಮತ್ತು ಡಾಮ್ ಬೆಸ್ ಕೂಡ ಕೆಲಹೊತ್ತು ನೆಲೆಯೂರಿ ರನ್ ಗಳಿಕೆಗೆ ಕಾಣಿಕೆ ನೀಡಿದರು. ಜೇಮ್ಸ್ ಆ್ಯಂಡರ್ಸ್‌ನ್ ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್ ಮಾಡಿ ಇಂಗ್ಲೆಂಡ್ ಇನಿಂಗ್ಸ್‌ಗೆ ಅಶ್ವಿನ್ ಅಂತ್ಯ ಹಾಡಿದರು.

ಸುಂದರ್–ಅಶ್ವಿನ್ ಅಮೋಘ ಜೊತೆಯಾಟ
ಮೂರನೇ ದಿನವಾದ ಭಾನುವಾರ ಆರು ವಿಕೆಟ್‌ ವಿಕೆಟ್ ಕಳೆದುಕೊಂಡು 257 ರನ್ ಗಳಿಸಿದ್ದ ಕೊಹ್ಲಿ ಬಳಗ ಸೋಮವಾರ ಬೆಳಿಗ್ಗೆ ಆತಂಕದಲ್ಲಿತ್ತು. ಆದರೆ ವಾಷಿಂಗ್ಟನ್ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅಮೋಘ ಜೊತೆಯಾಟದಿಂದಾಗಿ ಹಿನ್ನಡೆ ಕುಗ್ಗುತ್ತ ಸಾಗಿತು. ಕೊನೆಯ ನಾಲ್ಕು ವಿಕೆಟ್‌ಗಳಲ್ಲಿ 80 ರನ್‌ಗಳನ್ನು ಕಲೆ ಹಾಕಿದ ಭಾರತ ತಂಡ ಭೋಜನ ವಿರಾಮಕ್ಕೆ ಸ್ವಲ್ಪ ಮೊದಲು 337 ರನ್‌ಗಳಿಗೆ ಆಲೌಟಾಯಿತು.

ಭಾನುವಾರ ಕ್ರಮವಾಗಿ 33 ಮತ್ತು ಎಂಟು ರನ್ ಗಳಿಸಿದ್ದ ವಾಷಿಂಗ್ಟನ್ ಸುಂದರ್ (ಅಜೇಯ 85; 138 ಎ, 12 ಬೌಂ, 2 ಸಿ) ಮತ್ತು ಅಶ್ವಿನ್ (31; 91 ಎ, 3 ಬೌಂ, 1 ಸಿ) ಸೋಮವಾರ ಬೆಳಿಗ್ಗೆ ಕೆಲಕಾಲ ಎದುರಾಳಿ ತಂಡದ ಬೌಲರ್‌ಗಳ ಬೆಳರಿಳಿಸಿದರು. ಇತ್ತೀಚಿನ ಮೂರು ಇನಿಂಗ್ಸ್‌ಗಳಲ್ಲಿ ಎರಡನೇ ಅರ್ಧಶತಕ ಗಳಿಸಿದ ವಾಷಿಂಗ್ಟನ್ ಇಲ್ಲಿ ಮೋಹಕ ಬ್ಯಾಟಿಂಗ್ ಮೂಲಕ ಮಿಂಚಿದರು. ಅಶ್ವಿನ್ ಜೊತೆ ಏಳನೇ ವಿಕೆಟ್‌ಗೆ ಅವರು 80 ರನ್‌ಗಳನ್ನು ಸೇರಿಸಿದರು. ಅಶ್ವಿನ್ ಔಟಾದ ನಂತರ ಬಂದ ಯಾರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಆಗಲಿಲ್ಲ. ಸುಂದರ್ ಮಾತ್ರ ಔಟಾಗದೇ ಉಳಿದರು.

300ರ ಕ್ಲಬ್ ಸೇರಿದ ಇಶಾಂತ್ ಶರ್ಮಾ
ಭಾರತದ ವೇಗಿ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಅವರು ಈ ಮೈಲುಗಲ್ಲು ದಾಟಿದ ಭಾರತದ ಆರನೇ ಬೌಲರ್ ಮತ್ತು ಮೂರನೇ ವೇಗಿ ಎನಿಸಿಕೊಂಡರು. ಇಂಗ್ಲೆಂಡ್‌ನ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಡ್ಯಾನ್ ಲಾರೆನ್ಸ್ ಅವರನ್ನು ಎರಡನೇ ಇನಿಂಗ್ಸ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಯಲ್ಲಿ ಕೆಡಹುವ ಮೂಲಕ ಇಶಾಂತ್‌ 300ನೇ ವಿಕೆಟ್ ತಮ್ಮದಾಗಿಸಿಕೊಂಡರು. ಇದು ಅವರ 98ನೇ ಪಂದ್ಯವಾಗಿದೆ. 32 ವರ್ಷದ ಈ ಆಟಗಾರನನ್ನು ಅಭಿನಂದಿಸಿ ಬಿಸಿಸಿಐ ಮತ್ತು ಐಸಿಸಿ ಟ್ವೀಟ್ ಮಾಡಿದೆ.

2007ರಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ ಇಶಾಂತ್‌ 11 ಬಾರಿ ಐದು ವಿಕೆಟ್ ಗೊಂಚಲು ಗಳಿಸಿದ್ದು ಒಂದು ಪಂದ್ಯದಲ್ಲಿ 10 ವಿಕೆಟ್ ಉರುಳಿಸಿದ್ದಾರೆ. ಕೋವಿಡ್ ಕಾಲದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ನಾಲ್ಕು ಪಂದ್ಯಗಳ ಸರಣಿಯ ಸಂದರ್ಭದಲ್ಲಿ ಗಾಯದ ಸಮಸ್ಯೆಯಿಂದಾಗಿ ಅವರು ತಂಡಕ್ಕೆ ಆಯ್ಕೆಯಾಗಿರಲಿಲ್ಲ.

ಭಾರತದ ಪರ ವೇಗವಾಗಿ 300 ವಿಕೆಟ್ ಗಳಿಸಿದ ಶ್ರೇಯಸ್ಸು ಆ‍ಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ಗೆ ಸಲ್ಲುತ್ತದೆ. ಅವರು 54 ‍ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರೆ, ಲೆಗ್ ಸ್ಪಿನ್ನರ್‌ ಅನಿಲ್ ಕುಂಬ್ಳೆ 66 ಪಂದ್ಯಗಳಲ್ಲಿ, ಆಫ್‌ ಸ್ಪಿನ್ನರ್‌ ಹರ್ಭಜನ್ ಸಿಂಗ್ 72 ಪಂದ್ಯಗಳಲ್ಲಿ, ವೇಗಿಗಳಾದ ಕಪಿಲ್ ದೇವ್‌ 83 ಪಂದ್ಯಗಳಲ್ಲಿ ಮತ್ತು ಜಹೀರ್ ಖಾನ್ 89 ಪಂದ್ಯಗಳಲ್ಲಿ 300ನೇ ವಿಕೆಟ್ ಗಳಿಸಿದ್ದರು.

ರಕ್ಷಣಾ ಕಾರ್ಯಾಚರಣೆಗೆ ಪಂದ್ಯ ಶುಲ್ಕ
ಉತ್ತರಾಖಂಡದಲ್ಲಿ ಸಂಭವಿಸಿದ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಗೆ ತಮ್ಮ ಪಂದ್ಯ ಶುಲ್ಕವನ್ನು ನೀಡುವುದಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಿಳಿಸಿದ್ದಾರೆ. ಪಂತ್ ಜನಿಸಿದ್ದು ಈ ರಾಜ್ಯದ ಹರಿದ್ವಾರ ಜಿಲ್ಲೆಯ ರೂರ್ಕಿ ಪಟ್ಟಣದಲ್ಲಿ.

’ಉತ್ತರಾಖಂಡದಲ್ಲಿ ಸಂಭವಿಸಿರುವ ದುರಂತ ಬೇಸರ ತಂದಿದೆ. ನನ್ನ ಪಂದ್ಯಶುಲ್ಕವನ್ನು ರಕ್ಷಣಾ ಕಾರ್ಯಾಚರಣೆಗಾಗಿ ನೀಡುತ್ತೇನೆ. ಜನರು ಸಾಧ್ಯವಾದಷ್ಟು ಹಣವನ್ನು ಕಾರ್ಯಾಚರಣೆಗಾಗಿ ನೀಡಲು ಮುಂದಾಗಬೇಕು’ ಎಂದು ಅವರು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT