ಶುಕ್ರವಾರ, ಫೆಬ್ರವರಿ 21, 2020
27 °C
ಸರಣಿ ಕೈವಶದತ್ತ ಕಿವೀಸ್ ಕಣ್ಣು

IND vs NZ ಎರಡನೇ ಏಕದಿನ | ತಿರುಗೇಟು ನೀಡುವ ಛಲದಲ್ಲಿ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಆಕ್ಲೆಂಡ್: ಮೂರು ದಿನಗಳ ಹಿಂದೆ ದುರ್ಬಲ ಬೌಲಿಂಗ್ ಮತ್ತು ಫೀಲ್ಡಿಂಗ್‌ ನಿಂದಾಗಿ ಸೋಲಿನ  ಕಹಿ ಅನುಭವಿಸಿದ್ದ ಭಾರತ ತಂಡ ಶನಿವಾರ ನ್ಯೂಜಿಲೆಂಡ್ ಎದುರು ಎರಡನೇ ಏಕದಿನ ಪಂದ್ಯವಾಡಲು ಕಣಕ್ಕಿಳಿಯಲಿದೆ.

ಟ್ವೆಂಟಿ–20 ಸರಣಿಯಲ್ಲಿ 5–0ಯಿಂದ ಗೆದ್ದು ಬೀಗುತ್ತಿದ್ದ ಕೊಹ್ಲಿ ಬಳಗಕ್ಕೆ ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿಯೇ ರಾಸ್‌ ಟೇಲರ್ ಪೆಟ್ಟುಕೊಟ್ಟಿದ್ದರು. ಅಮೋಘ ಶತಕ ಬಾರಿಸಿದ್ದ ಅವರು ಆತಿಥೇಯರಿಗೆ ಜಯದ ಉಡುಗೋರೆ ನೀಡಿದ್ದರು. ಅದರಿಂದಾಗಿ ತಂಡಕ್ಕೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಲಭಿಸಿತ್ತು. ಈ ಪಂದ್ಯದಲ್ಲಿ ಗೆದ್ದು ಸರಣಿ ಜಯವನ್ನು ಖಚಿತಪಡಿಸಿಕೊಳ್ಳುವ ಉತ್ತಮ ಅವಕಾಶ ‘ಬ್ಲ್ಯಾಕ್‌ ಕ್ಯಾಪ್ಸ್‌’ ಬಳಗಕ್ಕೆ ಇದೆ. ಮತ್ತೊಂದೆಡೆ, ತಿರುಗೇಟು ನೀಡಲು ಕೊಹ್ಲಿ ಬಳಗ ಸಿದ್ಧವಾಗಿದೆ. 

ಆದರೆ, ಡೆತ್ ಓವರ್ ಪರಿಣತ ಬೌಲರ್ ಜಸ್‌ಪ್ರೀತ್ ಬೂಮ್ರಾ ವಿಕೆಟ್‌ ಕೀಳುವಲ್ಲಿ ಸಫಲರಾಗುತ್ತಿಲ್ಲ. ಅದೇ ಕೊಹ್ಲಿಗೆ ಪ್ರಮುಖ ಚಿಂತೆಯಾಗಿದೆ. ಅಲ್ಲದೇ ಮೊದಲ ಪಂದ್ಯದಲ್ಲಿ ಅವರು ವೈಡ್‌ಗಳ ಮೂಲಕ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಶಾರ್ದೂಲ್ ಠಾಕೂರ್ ಕೂಡ ದುಬಾರಿಯಾಗಿದ್ದರು. ‌

ಅದರಿಂದಾಗಿ ಈ ಪಂದ್ಯದಲ್ಲಿ ಠಾಕೂರ್‌ಗೆ ಬೆಂಚ್‌ನಲ್ಲಿ ಕೂರಿಸಿ ಭರವಸೆಯ ಬೌಲರ್‌ ನವದೀಪ್ ಸೈನಿಗೆ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ.  ಮೊದಲ ಪಂದ್ಯದಲ್ಲಿ  ಸಾಂದರ್ಭಿಕ ಬೌಲರ್‌ ರೂಪದಲ್ಲಿ ಕೇದಾರ್ ಜಾಧವ್‌ ಅವರನ್ನು ಬಳಸಿಕೊಳ್ಳುವ
ಅವಕಾಶ ಇತ್ತು. ಆದರೆ ಕೊಹ್ಲಿ ಆ ಪ್ರಯತ್ನವನ್ನೇ ಮಾಡಲಿಲ್ಲ. ಇದರಿಂದಾಗಿ ಕೇದಾರ್ ಅವರನ್ನೂ ಕೈಬಿಟ್ಟು ಆಲ್‌ರೌಂಡರ್ ಶಿವಂ ದುಬೆ ಅಥವಾ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಅವರಿಗೆ ಅವಕಾಶ ಕೊಡಬಹುದು.

ಬ್ಯಾಟಿಂಗ್ನಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಇದೆ. ಮಯಂಕ್ ಅಗರವಾಲ್ ಮತ್ತು  ಪೃಥ್ವಿ ಶಾ ಇನಿಂಗ್ಸ್ ಆರಂಭಿಸುವರು. ಹ್ಯಾಮಿಲ್ಟನ್‌ನಲ್ಲಿ ಅರ್ಧಶತಕ ಬಾರಿಸಿದ್ದ ಕೊಹ್ಲಿ, ಶತಕ ದಾಖಲಿಸಿದ್ದ ಶ್ರೇಯಸ್ ಅಯ್ಯರ್ ಮತ್ತು ಅಜೇಯ 88 ರನ್‌ ಗಳಿಸಿದ್ದ ಕನ್ನಡಿಗ ಕೆ.ಎಲ್. ರಾಹುಲ್  ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಕಿವೀಸ್ ಬೌಲಿಂಗ್‌ನಲ್ಲಿಯೂ ಹೆಚ್ಚು ಕಳೆ ಇಲ್ಲ. ಸೌಥಿ ಮಾತ್ರ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. 

ಆತಿಥೇಯರ ಬ್ಯಾಟಿಂಗ್ ಪ್ರಬಲವಾಗಿದೆ. ಮಾರ್ಟಿನ್ ಗಪ್ಟಿಲ್ ಮತ್ತು ಹೆನ್ರಿ ನಿಕೋಲ್ಸ್ ಉತ್ತಮ ಆರಂಭ ನೀಡುವ ಸಮರ್ಥರಾಗಿದ್ದಾರೆ.  ಗಾಯದಿಂದ ಚೇತರಿಸಿಕೊಂಡಿರುವ ಕೇನ್ ವಿಲಿಯಮ್ಸನ್ ಅವರೂ  ಆಡುವ ಸಾಧ್ಯತೆ ಇದೆ.  ಟಾಮ್ ಲಥಾಮ್ ಹೋದ ಪಂದ್ಯದಲ್ಲಿ ಮಧ್ಯಕ್ರಮಾಂಕದಲ್ಲಿ ಆಡಿ ಯಶಸ್ವಿಯಾಗಿದ್ದರು. ಅವರು ಇಲ್ಲಿಯೂ ಅದೇ ಕ್ರಮವನ್ನು ಪುನರಾವರ್ತಿಸಬಹುದು. 6.8 ಅಡಿ ಎತ್ತರದ ಬೌಲರ್ ಕೈಲ್ ಜೆಮಿಸನ್ ಪದಾರ್ಪಣೆ ಮಾಡುವ ಸಾಧ್ಯತೆಯೂ ಇದೆ.  ಒಟ್ಟಿನಲ್ಲಿ ಕೈಯಳತೆಯಲ್ಲಿರುವ ಸರಣಿ ಗೆಲುವಿನ ಅವಕಾಶವನ್ನು ಬಿಟ್ಟುಕೊಡದಿರುವ ಛಲದಲ್ಲಿ ಕಿವೀಸ್ ಪಡೆ ಇದೆ.‌

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ಮನೀಷ್ ಪಾಂಡೆ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲಥಾಮ್ (ವಿಕೆಟ್‌ಕೀಪರ್), ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಜಿಮ್ಮಿ ನಿಶಾಮ್, ಸ್ಕಾಟ್ ಕಗೆಲೀನ್, ಟಾಮ್ ಬ್ಲಂಡೆಲ್, ಹೆನ್ರಿ ನಿಕೋಲ್ಸ್‌, ಮಿಚೆಲ್ ಸ್ಯಾಂಟನರ್, ಹಮೀಷ್ ಬೆನೆಟ್, ಟಿಮ್ ಸೌಥಿ, ಕೈಲ್ ಜಿಮಿಸನ್.

ಪಂದ್ಯ ಆರಂಭ: ಬೆಳಿಗ್ಗೆ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು